ಸೋಲಿನ ಭಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಕೊಡ್ತಿದೆ; ಡಾ. ಅಶ್ವಥ್ ನಾರಾಯಣ್
ಮತದಾರರ ವೈಯಕ್ತಿಕ ಮಾಹಿತಿ ತೆಗೆದುಕೊಂಡು ಅರ್ಜಿ ಪಡೆದು ಕಾರ್ಡ್ ಕೊಡುತ್ತಿದ್ದಾರೆ. ಈ ಮೂಲಕ ಮತದಾರರನ್ನು ಸೆಳೆಯಲು ಆಮಿಷ ಒಡ್ಡುತ್ತಿದ್ದು, ಅಧಿಕಾರಿಗಳ ದುರ್ಬಳಕೆ ಆಗುತ್ತಿದೆ. ಇದನ್ನು ತಡೆಯುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದು ಶಾಸಕ ಡಾ. ಅಶ್ವಥ್ ನಾರಾಯಣ್ ಹೇಳಿದರು.

ಬೆಂಗಳೂರು, ಏ.11: ರಾಜ್ಯದಲ್ಲಿ ಕಾಂಗ್ರೆಸ್(Congress) ಸಂಪೂರ್ಣ ಹತಾಶಗೊಂಡಿದೆ. ಸೋಲಿನ ಭಯದಲ್ಲಿ ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ ಎಂದು ಶಾಸಕ ಡಾ. ಅಶ್ವಥ್ ನಾರಾಯಣ್(Dr. Ashwath Narayan) ಕಿಡಿಕಾರಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ‘ಮತದಾರರ ವೈಯಕ್ತಿಕ ಮಾಹಿತಿ ತೆಗೆದುಕೊಂಡು ಅರ್ಜಿ ಪಡೆದು ಕಾರ್ಡ್ ಕೊಡುತ್ತಿದ್ದಾರೆ. ಈ ಮೂಲಕ ಮತದಾರರನ್ನು ಸೆಳೆಯಲು ಆಮಿಷ ಒಡ್ಡುತ್ತಿದ್ದು, ಅಧಿಕಾರಿಗಳ ದುರ್ಬಳಕೆ ಆಗುತ್ತಿದೆ. ಇದನ್ನು ತಡೆಯುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದರು.
ಇನ್ನು ಆದಿಚುಂಚನಗಿರಿ ಶ್ರೀಗಳನ್ನು ನಾವು ಭೇಟಿ ಮಾಡಿದ್ದಕ್ಕೆ ಕಾಂಗ್ರೆಸ್ನವರು ವಿಲ ವಿಲ ಎಂದು ಒದ್ದಾಡಿ ಬಿಟ್ಟಿದ್ದಾರೆ. ಒಕ್ಕಲಿಗ ಸಮುದಾಯ, ಬಿಜೆಪಿ- ಜೆಡಿಎಸ್ ಜೊತೆ ಹೋಗುತ್ತದೆ ಎಂಬ ಭಯದಿಂದ ಸರ್ಕಾರ ಬೀಳಿಸಿದವರು ಎಂಬ ನಿರಾಧಾರ ಆರೋಪ ಮಾಡಿದ್ದಾರೆ. ಕೇಂದ್ರದಲ್ಲಿ ದೇವೇಗೌಡರನ್ನು ಕೆಳಗೆ ಇಳಿಸಿದವರು ಯಾರು?, ರಾಜ್ಯದಲ್ಲಿ ಕುಮಾರಸ್ವಾಮಿಯವರನ್ನು ಇಳಿಸಿದವರು ಯಾರು ಎಂದು ಗೊತ್ತಿದೆ. ಸೋಲಿನ ಭೀತಿಯಿಂದ ಕೊಟ್ಟ ಹೇಳಿಕೆ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ:ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ವಿಫಲ; ಜನರಿಗೆ ಮೋದಿ ಗ್ಯಾರಂಟಿ ಮೇಲೆ ವಿಶ್ವಾಸ: ದೇವೇಂದ್ರ ಫಡ್ನವಿಸ್
ಇನ್ನು ಫೋನ್ ಟ್ಯಾಪಿಂಗ್ ವಿಚಾರವಾಗಿ ಚಲುವರಾಯಸ್ವಾಮಿ ಹೇಳಿಕೆ ವಿಚಾರ, ‘ಆಗ ಗೃಹ ಸಚಿವರು ಯಾರಿದ್ದರು ಎಂದು ಡಾ.ಅಶ್ವತ್ಥ್ ನಾರಾಯಣ ಪ್ರಶ್ನಿಸಿದ್ದಾರೆ. ಈಗ ಪಾಪಗಳೆಲ್ಲವೂ ಕಾಂಗ್ರೆಸ್ ಪಕ್ಷದ ಸ್ನೇಹಿತರಿಗೆ ನೆನಪು ಆಗುತ್ತಿದೆ. ನೀವು ಹೋಗಿದಂತೆ ನಾವು ಆದಿಚುಂಚನಗಿರಿ ಮಠಕ್ಕೆ ಹೋಗಿದ್ದೆವು ಅಷ್ಟೇ, ನಾವು ಆಶೀರ್ವಾದ ಪಡೆದರೆ ನಿಮಗೆ ಭಯ ಆಗುತ್ತಾ ಎಂದರು. ಜನರು ನಿಮ್ಮನ್ನು ತಿರಸ್ಕಾರ ಮಾಡುತ್ತಾರೆ ಎಂಬ ಭಯ ಶುರುವಾಗಿದೆ. ಸಮುದಾಯದವರನ್ನು ಮುಟ್ಠಾಳರು ಅಂತೀರಲ್ಲಾ ಏಕೆ ಇಷ್ಟೊಂದು ಭಯ?, ಹೇಗೆ ಬೇಕೋ ಹಾಗೇ ಪದ ಬಳಕೆ ಮಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಭಯ ಪಡಿಸುವ ಕೆಲಸ ಆಗುತ್ತಿದೆ. 24 ಗಂಟೆಯಲ್ಲಿ ಮೂರು ಜನರ ಮೇಲೆ ಹಲ್ಲೆ ಮಾಡಿದ್ದಾರೆ. ಆದರೆ, ಅಲ್ಲಿನ ಪೊಲೀಸರು 307 ಕೇಸ್ ಹಾಕುವ ಬದಲು 320 ಕೇಸ್ ಹಾಕಿದ್ದಾರೆ. ಅಲ್ಲಿ ಹಲ್ಲೆ ಮಾಡಿ ಭಯ ಹುಟ್ಟಿಸಲು ಹೊರಟಿದ್ದಾರೆ. ಇಲ್ಲಿ ಯಾರೂ ಭಯ ಪಡಲ್ಲ, ನೀವು ಒಂದು ಹೆಜ್ಜೆ ಮುಂದೆ ಹೋದರೆ, ಅವರು ನೂರು ಹೆಜ್ಜೆ ಇಟ್ಟು ಒಗ್ಗಟ್ಟಿನಲ್ಲಿ ಪ್ರತಿರೋಧದ ಉತ್ತರ ಕೊಡುತ್ತಾರೆ. ಗುಂಡು ಹಾರಿಸಿದರೂ ಹೆದರದಂತಹ ಜನ ನಾವು, ಈ ರೀತಿಯ ಹೆದರಿಸುವುದು, ಬೆದರಿಸುವುದು ನಮ್ಮ ಮುಂದೆ ನಡೆಯಲ್ಲ. ನಮ್ಮ ಕಾರ್ಯಕರ್ತರ ಜೀವಕ್ಕೆ ಅಪಾಯವಾಗದ ರೀತಿಯಲ್ಲಿ ರಕ್ಷಣೆ ಹಾಗೂ ಕಾನೂನು ಕೈಗೊಳ್ಳುವಂತೆ ಚುನಾವಣಾ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಬೆನ್ನಿಗೆ ಚೂರಿ ಹಾಕಿದಂತಹವರ ಜೊತೆಯಲ್ಲಿ ಹೆಚ್ಡಿಕೆ ಮಠಕ್ಕೆ ಹೋಗಿದ್ದರೆಂಬ ಡಿ.ಕೆ ಶಿವಕುಮಾರ್ ಹೇಳಿಕೆ ವಿಚಾರ, ‘ದೇವೇಗೌಡರನ್ನು ಇಳಿಸಿದ್ದು ಕಾಂಗ್ರೆಸ್, ಇದು ಇತಿಹಾಸದಲ್ಲೇ ಇದೆ. ಜೊತೆಯಲ್ಲಿದ್ದೇ ಕುತ್ತಿಗೆ ಕುಯ್ಯೋದು ಅಂದರೆ ಕಾಂಗ್ರೆಸ್, ಬಿಜೆಪಿಯವರ ಜೊತೆ ಹೋಗಿದ್ರೆ ಐದು ವರ್ಷ ಸಿಎಂ ಆಗುತ್ತಿದ್ದೆ. ಆದರೆ, ಕಾಂಗ್ರೆಸ್ನವರು ನನ್ನ ಒಂದೇ ವರ್ಷಕ್ಕೆ ಇಳಿಸಿಬಿಟ್ಟರು ಎಂದು ಕುಮಾರಸ್ವಾಮಿ ಅವರು ಇವತ್ತಿಗೂ ಕಾಂಗ್ರೆಸ್ ಬಗ್ಗೆ ಪಶ್ಚಾತಾಪ ಪಡುತ್ತಿದ್ದಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:59 pm, Thu, 11 April 24



