ನಾಗವಾರದಲ್ಲಿ ತುಂಬಿ ಹರಿಯುತ್ತಿರುವ ಡ್ರೈನೇಜ್: 15 ದಿನಗಳಿಂದ ಬಗೆಹರಿಯದ ಸಮಸ್ಯೆ
ಡ್ರೈನೇಜ್ ನೀರು ಸೋರಿಕೆಯಿಂದ ರಸ್ತೆಯಲ್ಲಿ ಕೆಟ್ಟ ವಾಸನೆ ಬರುತ್ತಿದೆ. ಬಿಬಿಎಂಪಿ, ಬಿಡಬ್ಲ್ಯುಎಸ್ಎಸ್ಬಿಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಬೆಂಗಳೂರು: ನಗರದಲ್ಲಿ ಕಳೆದ ಕೆಲ ದಿನಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು ಸಹಜವಾಗಿಯೇ ರಸ್ತೆಗಳ ಮೇಲೆ ನೀರು ಹರಿಯುತ್ತಿದೆ. ಒಳಚರಂಡಿ ವ್ಯವಸ್ಥೆ ಹದಗೆಟ್ಟಿರುವ ಕೆಲ ಪ್ರದೇಶಗಳಲ್ಲಿ ಚರಂಡಿ ನೀರು ರಸ್ತೆಯ ಮೇಲೆ ಹರಿದು ಜನರಿಗೆ ಸಂಕಷ್ಟ ತಂದೊಂಡಿದೆ. ನಾಗವಾರ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಕಳೆದ 15 ದಿನಗಳಿಂದ ಡ್ರೈನೇಜ್ ಸೋರಿಕೆಯಾಗುತ್ತಿದ್ದು, ರಸ್ತೆಯ ಮೇಲೆ ಮೋರಿ ನೀರು ಹರಿಯುತ್ತಿದೆ. ಡ್ರೈನೇಜ್ ನೀರು ಸೋರಿಕೆಯಿಂದ ರಸ್ತೆಯಲ್ಲಿ ಕೆಟ್ಟ ವಾಸನೆ ಬರುತ್ತಿದೆ. ಬಿಬಿಎಂಪಿ, ಬಿಡಬ್ಲ್ಯುಎಸ್ಎಸ್ಬಿಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದು ತಿಳಿದಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಸ್ಪಂದಿಸುತ್ತಿಲ್ಲ. ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ರಸ್ತೆಗಳು ಹಾಳಾಗಿವೆ. ಈ ಬಗ್ಗೆ ಜನರು ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿಗೆ ವರುಣನ ರೌದ್ರ ರೂಪ ಕಂಡಂತಾಗಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನ ಜೀವನ ತತ್ತರಿಸಿದೆ. ಭಾರಿ ಮಳೆಯಿಂದಾಗಿ ಬೆಂಗಳೂರಿನ ಕೋಗಿಲು ಕ್ರಾಸ್ ಬಳಿ ರಸ್ತೆ ಜಲಾವೃತಗೊಂಡಿದ್ದು ಕೋಗಿಲು ಕ್ರಾಸ್‌ನ 3 ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಏರ್‌ಪೋರ್ಟ್, ಕೋಗಿಲು, ಯಲಹಂಕ ರಸ್ತೆ ಜಾಮ್ ಆಗಿದೆ. ಏರ್ಪೋಟ್, ಕೋಗಿಲು, ಯಲಹಂಕ ಮತ್ತು ಸಿಟಿ ಕಡೆ ಹೋಗಲು ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ. ರಸ್ತೆಯಲ್ಲಿ ಹರಿಯುತ್ತಿರುವ ನೀರಿನಲ್ಲಿ ಸಂಚಾರ ಮಾಡಲು ಹೋಗಿ ವಾಹನಗಳು ಕೆಟ್ಟು ಹೋಗುತ್ತಿವೆ.
3 ದಿನದಿಂದ ಜಲಾವೃತವಾಗುತ್ತಿರುವ ಅಪಾರ್ಟ್‌ಮೆಂಟ್ ಇನ್ನು ಮತ್ತೊಂದೆಡೆ ಬೆಂಗಳೂರಿನ ಯಲಹಂಕದ ಅಪಾರ್ಟ್‌ಮೆಂಟ್ 3 ದಿನದಿಂದ ಜಲಾವೃತಗೊಂಡಿದೆ. ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್ ಜಲಾವೃತಗೊಂಡಿದೆ. ರಾತ್ರಿ ಸುರಿದ ಭಾರಿ ಮಳೆಗೆ ಕೆರೆಯ ನೀರು ನುಗ್ಗಿ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಅಲ್ಲದೆ ನೀರಿನ ಜೊತೆಯಲ್ಲಿ ಹಾವು, ಚೇಳುಗಳು ಬಂದ ಹಿನ್ನೆಲೆ ಅಪಾರ್ಟ್‌ಮೆಂಟ್ ನಿವಾಸಿಗಳಲ್ಲಿ ಆತಂಕ ಕೂಡ ಹೆಚ್ಚಾಗಿದೆ.
ವಿದ್ಯಾರಣ್ಯಪುರದಲ್ಲಿ ಜನರ ಪರದಾಟ ಬೆಂಗಳೂರಿನ ವಿದ್ಯಾರಣ್ಯಪುರದ ನಂಜಪ್ಪ ಬಡಾವಣೆಯ 2 ಅಪಾರ್ಟ್‌ಮೆಂಟ್ ಜಲಾವೃತಗೊಂಡಿವೆ. ಮನೆಯಿಂದ ಹೊರಬರಲಾಗದೆ ನಿವಾಸಿಗಳು ಪರದಾಡುತ್ತಿವೆ. 40 ಕ್ಕೂ ಹೆಚ್ಚು ಕುಟುಂಬಗಳಿಗೆ ಜಲದಿಗ್ಭಂದನವಾಗಿದೆ.
ಬಿಬಿಎಂಪಿ ವಿರುದ್ಧ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್ ನಿವಾಸಿಗಳ ಆಕ್ರೋಶ ಬಿಬಿಎಂಪಿ ಅಧಿಕಾರಿಗಳು ನಮ್ಮ ನೆರವಿಗೆ ಬರುತ್ತಿಲ್ಲ. ಹೀಗಾಗಿ ನಾವು ಬಿಬಿಎಂಪಿ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್ ನಿವಾಸಿಗಳು ಆಕ್ರೋಶ ಹೊರ ಹಾಕಿದ್ದಾರೆ. ವೋಟ್ ಕೇಳಲು ಮಾತ್ರ ಅಪಾರ್ಟ್‌ಮೆಂಟ್‌ಗೆ ಬರ್ತಾರೆ. ಉಳಿದಂತೆ ನಮ್ಮ ಯಾವುದೇ ಸಮಸ್ಯೆ ಬಗೆಹರಿಸುವುದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮಂಡ್ಯ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದೆ. ಕಳೆದ 2 ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಆರಂಭವಾಗಿದೆ. ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರೈತರು ಕಂಗಾಲಾಗಿದ್ದಾರೆ.
ಇದನ್ನೂ ಓದಿ: Bengaluru Weather Report: ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ ತಜ್ಞ ಸದಾನಂದ ಅಡಿಗ ಮಾಹಿತಿ ಇದನ್ನೂ ಓದಿ: ಮಳೆಯಿಂದ ಹಾನಿ: 24 ಗಂಟೆಯಲ್ಲೇ ರೈತರಿಗೆ ಪರಿಹಾರ ನೀಡಲು ಬಸವರಾಜ ಬೊಮ್ಮಾಯಿ ಸೂಚನೆ
Published On - 10:03 pm, Mon, 22 November 21