ಬೆಂಗಳೂರು, (ಡಿಸೆಂಬರ್ 27): ನಿನ್ನೆಯಿಂದ (ಡಿಸೆಂಬರ್ 26) ಬೆಂಗಳೂರಿನಲ್ಲಿ ತುಂತುರು ಮಳೆಯಾಗುತ್ತಿದೆ. ಚಳಿಗಾಲ ಹಿನ್ನೆಲೆಯಲ್ಲಿ ಕೂಲ್ ಕೂಲ್ ವಾತಾವರಣ ಮಧ್ಯ ಇದೀಗ ನಗರದಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ. ಮುಂಗಾರು ಆರಂಭದಲ್ಲಿ ಕೊಂಚ ನಿಧಾನವಾಗಿತ್ತಾದರೂ ಬಳಿಕ ಬಿರುಸುಗೊಂಡಿತ್ತು. ಹಾಗೇ ಹಿಂಗಾರು ಮಳೆ ಸಹ ಉತ್ತಮವಾಗಿದೆ. ಇದೀಗ ಚಳಿಗಾಲದಲ್ಲೂ ಸಹ ಮಳೆ ನಿಲ್ಲುತ್ತಿಲ್ಲ. ನಿನ್ನೆ (ಗುರುವಾರ) ಮಧ್ಯಾಹ್ನದ ವೇಳೆ ನಗರದ ಹಲವೆಡೆ ಜಿನಿ ಜಿನಿ ಮಳೆಯಾಗಿತ್ತು. ಅದೇ ಸರಿಯಾದ ಮಧ್ಯಾಹ್ನದ ಹೊತ್ತಿಗೆ ಇಂದು(ಡಿಸೆಂಬರ್ 27) ಸಹ ಜಿಟಿ ಜಿಟಿ ಮಳೆಯಾಗಿದೆ. ಬೆಂಗಳೂರಿನಲ್ಲಿ ವಾತಾವರಣ ಕೂಲ್ ಕೂಲ್ ಆಗಿದ್ದು, ಜನರು ನಡುಗುವಂತಾಗಿದೆ. ಇನ್ನೊಂದೆಡೆ ಬಿಟ್ಟು ಬಿಟ್ಟು ಬರುತ್ತಿರುವ ಮಳೆಗೆ ಜನರು ರೋಸಿಹೋಗಿದ್ದಾರೆ.
ಇನ್ನು ಬಿಟ್ಟು ಬಿಟ್ಟು ಬರುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ಬೀದಿ ವ್ಯಾಪಾರಿಗಳು ಹಾಗೂ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿದೆ. ಅತ್ತ ಜೋರಾಗಿ ಬರುತ್ತಿಲ್ಲ. ಇನ್ನೊಂದೆಡೆ ಆಕಡೆ ಹೋಗುತ್ತಿಲ್ಲ. ಆಗಾಗ ಜಿನಿ ಜಿನಿ ಮಳೆಯಾಗುತ್ತಿದೆ.
ಬಂಗಾಲ ಉಪಸಾಗರದ ನೈರುತ್ಯ ಭಾಗದಲ್ಲಿ ವಾಯ ಭಾರ ಕುಸಿತ ಹಿನ್ನೆಲೆಯಲ್ಲಿ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗಿನ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದಿದೆ.
ಇನ್ನು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಾಗಲಕೋಟೆಯ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆ ಹೊರತುಪಡಿಸಿ ರಾಜ್ಯದಲ್ಲಿ ಒಣ ಹವೆ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಜೊತೆಗೆ ಹಗುರ ಮಳೆಯಾಗಲಿದೆ ಎಂದು ತಿಳಿಸಿದೆ.
ಇಂದು ಮತ್ತು ನಾಳೆ ಹಾಸನ, ಮೈಸೂರು, ರಾಮನಗರ, ಮಂಡ್ಯ, ತುಮಕೂರು, ಬೆಂಗಳೂರು ನಗರ ಜಿಲ್ಲೆ ಕರ್ನಾಟಕದ ಒಳಭಾಗದ ಮೇಲೆ ಪ್ರತ್ಯೇಕವಾದ ಸ್ಥಳಗಳಲ್ಲಿ ಮಂಜು ಇರಲಿದೆ. ನಾಳೆ ಬೆಳಿಗ್ಗೆ ಸಂದರ್ಭದಲ್ಲಿ ಬೆಂಗಳೂರು ಸುತ್ತಮುತ್ತ ಮಂಜು ಕವಿದ ವಾತಾವರಣ ಸಾಧ್ಯತೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ರಾಜಧಾನಿಯಲ್ಲಿ ಚುಮು ಚುಮು ಚಳಿ ಆರಂಭವಾಗಿದ್ದು, ಸಂಜೆ ಆಗುತ್ತಿದ್ದಂತೆಯೇ ಶುರುವಾಗುವ ಚಳಿ ಮರುದಿನ ಸೂರ್ಯೋದಯದವರೆಗೂ ಹಾಗೆಯೇ ಇರುತ್ತದೆ. ಅವಧಿಗೂ ಮುನ್ನವೇ ಬೆಂಗಳೂರಿನಲ್ಲಿ ಭಾರೀ ಚಳಿ ಆರಂಭವಾಗಿತ್ತು. ಬಳಿಕ ಕೊಂಚ ಕಡಿಮೆಯಾಗಿತ್ತಾದರೂ ಬಳಿಕ ಬಂದ ಸೈಕ್ಲೋನ್ನಿಂದ ಬಿಸಿಲೇ ಇಲ್ಲದಂತಾಗಿತ್ತು. ಇದೀಗ ಕಳೆದ ಎರಡು ದಿನಗಳಿಂದ ಚಳಿಯ ಜೊತೆ ಜೊತೆಗೆ ಆಗಾಗ ತುಂತೂರು ಮಳೆಯಾಗುತ್ತಿದೆ. ಇದರಿಂದ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದೆ.
ಗುರುವಾರ ಸಂಜೆಯಿಂದಲೇ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆಯಾಗಿದೆ. ಶಿರಾಲಿಯಲ್ಲಿ 16.6 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು ಶುಕ್ರವಾರ ಬೆಳಗ್ಗೆಯಿಂದಲೇ ಮಳೆ ಜಿನುಗುತ್ತಿದೆ.
ಎಚ್ಎಎಲ್ನಲ್ಲಿ 26.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 26.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 26.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 26.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಚಳಿ ಜೊತೆ ತುಂತೂರು ಮಳೆಯಿಂದಾಗಿ ಬೆಂಗಳೂರಿನಲ್ಲಿ ಮೋಡ ಮುಸುಕಿಕೊಂಡಿದ್ದು, ಜನರು ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಜನರಿಗೆ ಶೀತ, ಕೆಮ್ಮು ಹಾಗೂ ಜ್ವರ ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕಿದೆ. ಬೆಚ್ಚನೆ ಬಟ್ಟೆ ಧರಿಸುವುದು ಉತ್ತಮ. ಸಾಧ್ಯವಾದಷ್ಟು ದೇಹವನ್ನು ಬೆಚ್ಚಗೆ ಕಾಪಾಡಿಕೊಳ್ಳಬೇಕು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:42 pm, Fri, 27 December 24