ಖಾಕಿ ಭರ್ಜರಿ ಬೇಟೆ: ಪ್ರತ್ಯೇಕ ಪ್ರಕರಣಗಳಲ್ಲಿ 1.2 ಕೋಟಿ ಮೌಲ್ಯದ ಡ್ರಗ್ಸ್, ಆನೆದಂತದ ವಿಗ್ರಹ ಜಪ್ತಿ
ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಮಾದಕ ವಸ್ತುಗಳು ಮತ್ತು ಆನೆದಂತ ವಿಗ್ರಹಗಳನ್ನು ಜಪ್ತಿ ಮಾಡಿದ್ದು ಇವುಗಳ ಒಟ್ಟೂ ಮೌಲ್ಯ ಸುಮಾರು 1.2 ಕೋಟಿ ಎನ್ನಲಾಗಿದೆ. ಸಿಸಿಬಿ ಮಾದಕದ್ರವ್ಯ ನಿಗ್ರಹ ದಳ ಡ್ರಗ್ಸ್ ಡೀಲಿಂಗ್ ಜಾಲ ಭೇದಿಸಿ ಕೊಕೇನ್, ಹೈಡ್ರೋ ಗಾಂಜಾ ವಶಪಡಿಸಿಕೊಂಡರೆ, ಜಿಗಣಿ ಪೊಲೀಸರು ಕಾನೂನುಬಾಹಿರ ಆನೆದಂತ ಮಾರಾಟ ಜಾಲವನ್ನು ಪತ್ತೆಹಚ್ಚಿ ಇಬ್ಬರನ್ನು ಬಂಧಿಸಿದ್ದಾರೆ.

ಬೆಂಗಳೂರು/ಆನೇಕಲ್, ಜನವರಿ 14: ಮಂಗಳೂರು ಸಿಸಿಬಿ ಪೊಲೀಸರು ಡ್ರಗ್ ಕೇಸ್ನಲ್ಲಿ ಉಗಾಂಡ ಮೂಲದ ಮಹಿಳೆಯನ್ನು ಬಂಧಿಸಿ ಆಕೆ ಬಳಿ ಇದ್ದ 4 ಕೋಟಿ ರೂ. ಮೌಲ್ಯದ MDMA ಜಪ್ತಿ ಮಾಡಿರುವ ಘಟನೆ ಬೆನ್ನಲ್ಲೇ ಸಿಸಿಬಿ ಮಾದಕದ್ರವ್ಯ ನಿಗ್ರಹ ದಳ ಪೊಲೀಸರು ಕೂಡ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಡ್ರಗ್ ಡಿಲೀಂಗ್ನಲ್ಲಿ ತೊಡಗಿದ್ದ ಒರ್ವ ವಿದೇಶಿ ಪ್ರಜೆ ಸೇರಿ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದ್ದು, ಬಂಧಿತರಿಂದ 1 ಕೋಟಿ ಮೌಲ್ಯದ 101 ಗ್ರಾಂ ಕೊಕೇನ್ ಮತ್ತು 481 ಗ್ರಾಂ ಹೈಡ್ರೋ ಗಾಂಜಾ ಸೀಜ್ ಮಾಡಲಾಗಿದೆ. ಬೇಗೂರು ವ್ಯಾಪ್ತಿಯಲ್ಲಿ ವಾಸವಿದ್ದ ಆಕಾಶ್ ಮತ್ತು ಉಚೆ ನಡುರಿ ಬಂಧಿತರಾಗಿದ್ದು, ಪರಿಚಯಸ್ಥರು, ವಿದ್ಯಾರ್ಥಿಗಳು ಮತ್ತು ಐಟಿಬಿಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಇವರು ಡ್ರಗ್ ಮಾರಾಟ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ.
ಆನೆ ದಂತದಿಂದ ಮಾಡಿದ ವಿಗ್ರಹ ಮಾರಾಟ ಜಾಲ ಪತ್ತೆ

ಜಪ್ತಿ ಮಾಡಲಾದ ವಿಗ್ರಹಗಳ ಜೊತೆ ಬಂಧಿತ ಆರೋಪಿಗಳು
ಆನೆ ದಂತದಿಂದ ಮಾಡಿದ ವಿಗ್ರಹ ಮಾರಾಟ ಜಾಲ ಪತ್ತೆ ಮಾಡಿರುವ ಜಿಗಣಿ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ. ಮೊಹಮ್ಮದ್ ಶಬೀರ್ ಅಹಮದ್(50), ನರೇಂದ್ರ ಶರ್ಮಾ(45) ಆರೋಪಿಗಳಾಗಿದ್ದು, ರಾಧೆ ಮತ್ತು ಕೃಷ್ಣ ವಿಗ್ರಹಳನ್ನು ಇವರು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಮೊಹಮ್ಮದ್ ಶಬೀರ್ ಅಹ್ಮದ್ ಬೆಂಗಳೂರಿನ ಬನಶಂಕರಿ ನಿವಾಸಿಯಾಗಿದ್ದರೆ, ನರೇಂದ್ರ ಶರ್ಮಾ ಸುಧಾಮನಗರದವನು ಎಂಬುದು ಗೊತ್ತಾಗಿದೆ.
ಇದನ್ನೂ ಓದಿ: ಖತರ್ನಾಕ್ ಡ್ರಗ್ ಜಾಲ ಭೇದಿಸಿದ ಮಂಗಳೂರು ಸಿಸಿಬಿ; ಮಹಿಳೆ ಅರೆಸ್ಟ್, 4 ಕೋಟಿ ಮೌಲ್ಯದ MDMA ಸೀಜ್
20 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ವಿಗ್ರಹಗಳನ್ನು ಕೊಪ್ಪ ಗೇಟ್ ಸಮೀಪ ಮಾರಾಟ ಮಾಡಲು ಆರೋಪಿಗಳು ಬಂದಿರುವ ಖಚಿತ ಮಾಹಿತಿ ಮೇರೆ ಜಿಗಣಿ ಪೊಲೀಸರು ದಾಳಿ ನಡೆಸಿದ್ದರು. ವಿಗ್ರಹ ಸಮೇತವಾಗಿ ಆರೋಪಿಗಳನ್ನು ಬಂಧಿಸಲಾಗಿದ್ದು, ಬೈಕ್ನ ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿಯನ್ನ ಪಡೆಯದೆ ಇವರು ಆನೆ ದಂತದ ವಿಗ್ರಹ ಇಟ್ಟುಕೊಂಡಿದ್ದಲ್ಲದೆ, ಕಾನೂನು ಬಾಹಿರ ಮಾರಾಟಕ್ಕೂ ಯತ್ನಿಸಿದ್ದರು. ಇನ್ನು ಜಪ್ತಿ ಮಾಡಿರುವ ಆನೆದಂತದ ವಿಗ್ರಹಗಳನ್ನ ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನಕ್ಕೆ ರವಾನಿಸಲಾಗಿದ್ದು, ಇವು ಎಷ್ಟು ವರ್ಷದ ಹಳೆಯದಾದ ಆನೆ ದಂತದಿಂದ ಮಾಡಿರುವ ವಿಗ್ರಹ ಎಂಬ ಬಗ್ಗೆ ತಜ್ಞರು ವರದಿ ನೀಡಲಿದ್ದಾರೆ ಎನ್ನಲಾಗಿದೆ. ಘಟನೆ ಬಗ್ಗೆ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:23 pm, Wed, 14 January 26