ರಾಜ್ಯದ ಜನರಿಗೆ ಮತ್ತೆ ವಿದ್ಯುತ್ ದರ ಏರಿಕೆ ಶಾಕ್: ಟ್ವೀಟ್ ಮೂಲಕ ಸರ್ಕಾರಕ್ಕೆ ಹೆಚ್​ಡಿ ಕುಮಾರಸ್ವಾಮಿ ತರಾಟೆ

ಅಕ್ಟೋಬರ್​ 1ರಿಂದ ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಏರಿಕೆಯಾಗಲಿದೆ. ಕಳೆದ ಬಾರಿ ಪ್ರತಿ ಯೂನಿಟ್‌ಗೆ 30 ಪೈಸೆ ಇಳಿಕೆಯಾಗಿತ್ತು. ಆದ್ರೆ ಈ ಬಾರಿ ಬರೋಬ್ಬರಿ 43 ಪೈಸೆ ಏರಿಕೆ ಸಾಧ್ಯತೆ ಇದೆ.

ರಾಜ್ಯದ ಜನರಿಗೆ ಮತ್ತೆ ವಿದ್ಯುತ್ ದರ ಏರಿಕೆ ಶಾಕ್: ಟ್ವೀಟ್ ಮೂಲಕ ಸರ್ಕಾರಕ್ಕೆ ಹೆಚ್​ಡಿ ಕುಮಾರಸ್ವಾಮಿ ತರಾಟೆ
ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ
TV9kannada Web Team

| Edited By: Ayesha Banu

Sep 24, 2022 | 10:52 AM

ಬೆಂಗಳೂರು: ನವರಾತ್ರಿ ಸಂಭ್ರಮದಲ್ಲಿರುವ ರಾಜ್ಯದ ಜನರಿಗೆ ಮತ್ತೆ ವಿದ್ಯುತ್ ದರ ಏರಿಕೆ ಬಿಸಿ ತಟ್ಟಿದೆ. ಅಕ್ಟೋಬರ್​ 1ರಿಂದ ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಏರಿಕೆಯಾಗಲಿದೆ. ಸರಾಸರಿ 43 ಪೈಸೆ ಹೆಚ್ಚಳ ಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಆದೇಶ ಹೊರಡಿಸಿದೆ. ಪ್ರತಿ ವರ್ಷದಂತೆ ಈ ವರ್ಷವೂ ಇಂಧನ ಸರಿದೂಗಿಸುವ ವೆಚ್ಚ ಪರಿಷ್ಕರಣೆ ನಡೆದಿದ್ದು ಬೆಸ್ಕಾಂ, ಮೆಸ್ಕಾಂ, ಸೆಸ್ಕಾಂ, ಹೆಸ್ಕಾಂ, ಜೆಸ್ಕಾಂ ವತಿಯಿಂದ ದರ ಹೆಚ್ಚಿಸಲಾಗಿದೆ.

ಪ್ರತಿ ವರ್ಷವೂ ಫೂಯೆಲ್ ಕಾಸ್ಟ್ ಅಡ್ಜೆ‌ಸ್ಟ್‌ಮೆಂಟ್‌ಗೆಂದು (FAC) ದರ ಹೆಚ್ಚಳ ಮಾಡಲಾಗುತ್ತದೆ. ಈ ದರ ಪ್ರತಿ ಯೂನಿಟ್‌ಗೆ ಏರಿಕೆಯಾಗುವ ಅಥವಾ ಇಳಿಕೆಯಾಗುವ ಸಾಧ್ಯತೆ ಇರುತ್ತೆ. ಕಳೆದ ಬಾರಿ ಪ್ರತಿ ಯೂನಿಟ್‌ಗೆ 30 ಪೈಸೆ ಇಳಿಕೆಯಾಗಿತ್ತು. ಆದ್ರೆ ಈ ಬಾರಿ ಬರೋಬ್ಬರಿ 43 ಪೈಸೆ ಏರಿಕೆ ಸಾಧ್ಯತೆ ಇದೆ. ಈ ವರ್ಷಕ್ಕೆ ಎರಡು ಬಾರಿ ವಿದ್ಯುತ್ ದರ ಏರಿಕೆಯಾಗಿದೆ.

ಯೂನಿಟ್​ಗೆ 24 ಪೈಸೆಯಿಂದ 43 ಪೈಸೆವರೆಗೆ ವಿದ್ಯುತ್ ದರ ಹೆಚ್ಚಳವಾಗಲಿದೆ. ಬೆಸ್ಕಾಂನಲ್ಲಿ ಯೂನಿಟ್​​ಗೆ 43 ಪೈಸೆ, ಮೆಸ್ಕಾಂ ಯೂನಿಟ್​ಗೆ 24 ಪೈಸೆ, ಚೆಸ್ಕಾಂ ಪ್ರತಿ ಯೂನಿಟ್​ಗೆ 34 ಪೈಸೆ, ಹೆಸ್ಕಾಂ ಯೂನಿಟ್​​ಗೆ 35 ಪೈಸೆ, ಜೆಸ್ಕಾಂನಲ್ಲಿ ಯೂನಿಟ್​ಗೆ 35 ಪೈಸೆ ದರ ಹೆಚ್ಚಳ ಮಾಡಿ ಆದೇಶ ಮಾಡಿದೆ. ಇದನ್ನೂ ಓದಿ: ಮಳೆಗೆ ಇದ್ದ ಮನೆಯೊಂದು ಕಳೆದುಕೊಂಡು ಪುಟ್ಟ ಮಕ್ಕಳೊಂದಿಗೆ ಲಾರಿಯಲ್ಲಿ ಆಶ್ರಯ ಪಡೆಯುತ್ತಿರುವ ಬಡ ಕುಟುಂಬ

ವಿದ್ಯುತ್​ ದರ ಏರಿಕೆಗೆ ಹೆಚ್​ಡಿಕೆ ಆಕ್ರೋಶ

ಇನ್ನು ಮತ್ತೊಂದು ಕಡೆ ವಿದ್ಯುತ್​ ದರ ಏರಿಕೆಗೆ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ. ಟ್ವೀಟ್​ ಮೂಲಕ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಅಧಿವೇಶನ ಮುಂದೂಡಿಕೆಯಾದ ಕೂಡಲೇ ದರ ಏರಿಕೆ ಮಾಡಲಾಗಿದೆ. ‘ಏನೀ ಹುನ್ನಾರ’ ಎಂದು ಸರ್ಕಾರದ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ. ನವರಾತ್ರಿಗೆ ಹಬ್ಬದ ಶುಭಾಶಯ ಹೇಳಬೇಕಿದ್ದ ಸರ್ಕಾರ ಕರೆಂಟ್‌ ಶಾಕ್ ಕೊಟ್ಟು ಜನರು ಕಂಗೆಡುವಂತೆ ಮಾಡಿದೆ. ‘ಪ್ರತಿ ಯೂನಿಟ್‌’ಗೆ 24ರಿಂದ 43 ಪೈಸೆ ಹೆಚ್ಚಳ ಅವೈಜ್ಞಾನಿಕ. ಅನಪೇಕ್ಷಿತ & ಖಂಡನೀಯ ಎಂದು ಕುಮಾರಸ್ವಾಮಿ ಗರಂ ಆಗಿದ್ದಾರೆ.

ರಾಜ್ಯದಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿವೆ. ವಿದ್ಯುತ್‌ ಉತ್ಪಾದನೆ ಉತ್ತಮವಾಗಿದ್ರು ಖರೀದಿ ವೆಚ್ಚದಲ್ಲಿ 1,244 ಕೋಟಿ ಹೆಚ್ಚಳ ಎಂಬ ಲೆಕ್ಕ ನಂಬಲ್ಲ. ಖರೀದಿ ವೆಚ್ಚ ಹೆಚ್ಚಾಗಿದೆ ಎಂಬ ಲೆಕ್ಕ ನಂಬುವ ರೀತಿಯಲ್ಲಿಲ್ಲ. ಇಂಧನ ವಲಯದ ಕೆಲ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ಎಸ್ಕಾಂಗಳ ಭುಜದ ಮೇಲೆ ಗುಂಡಿಟ್ಟು, ಜನರಿಗೆ ಹೊಡೆವ ಕೆಲಸ ಆಗುತ್ತಿದೆ. ರಾಜ್ಯ ಬಿಜೆಪಿ ಸರ್ಕಾರ ಜನರ ಪರ ಇಲ್ಲ ಎನ್ನುವುದು ಸತ್ಯ. ಕೇಂದ್ರ ಸರ್ಕಾರದ ಹಾದಿಯಲ್ಲೇ ರಾಜ್ಯ ಸರ್ಕಾರವೂ ಸಾಗಿದೆ. ವಿದ್ಯುತ್‌ ದರದ ನಿರಂತರ ಏರಿಕೆ ಬಗ್ಗೆ ಗಂಭೀರ ಅನುಮಾನಗಳಿವೆ ಎಂದು ಸರ್ಕಾರದ ನಿರ್ಧಾರದ ಬಗ್ಗೆ ಹೆಚ್​ಡಿಕೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಎಸ್​ಸಿ- ಎಸ್​ಟಿ ಮೀಸಲಾತಿ ಹೆಚ್ಚಳ ಕುರಿತು 1 ವಾರದೊಳಗೆ ಸರ್ವಪಕ್ಷ ಸಭೆ; ಸಿಎಂ ಬೊಮ್ಮಾಯಿ ಭರವಸೆ

ವಿದ್ಯುತ್‌ ಸೋರಿಕೆ, ನವೀನ ತಂತ್ರಜ್ಞಾನ ಅಳವಡಿಸಿಕೊಳ್ಳದ ಕಳವು ತಡೆಲಾಗದ ರಾಜ್ಯ ಸರ್ಕಾರ ಅದಕ್ಷತೆಯ ಆಡಂಬೋಲ. ಬಡವರನ್ನು ಸುಲಿದು ಬ್ಯುಸಿನೆಸ್ ಕ್ಲಾಸಿನ ಜನರ ಜೇಬು ತುಂಬುವುದು ಬಿಜೆಪಿ ತತ್ವ. ಅದನ್ನೇ ಕರ್ನಾಟಕದಲ್ಲೂ ಎಗ್ಗಿಲ್ಲದೆ ಮಾಡುತ್ತಿದೆ ಎಂದು ಹೆಚ್​ಡಿ ಕುಮಾರಸ್ವಾಮಿ ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada