ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಘಟನೆಯಲ್ಲಿ ಮೃತಪಟ್ಟ ಯುವಕ, ಯುವತಿಯ ಗುರುತು ಪತ್ತೆಯಾಗಿದೆ. ತಮಿಳುನಾಡು ಮೂಲದ ಪ್ರೀತಮ್, ಕೃತಿಕಾ ಮೃತರು. ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿಗಳಾಗಿದ್ರು.
ಮೃತ ಪ್ರೀತಮ್(30), ಕೃತಿಕಾ(28) ಇಬ್ಬರೂ ಸ್ನೇಹಿತರಾಗಿದ್ದರು. ಸದ್ಯ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಇವರಿಬ್ಬರ ಮೃತದೇಹ ಇರಿಸಲಾಗಿದ್ದು ಪೊಲೀಸರು ಮೃತರ ಕುಟುಂಬಸ್ಥರಿಗೆ ಮಾಹಿತಿ ರವಾನಿಸಿದ್ದಾರೆ. ಮಾಹಿತಿ ಇಳಿಯುತ್ತಿದ್ದಂತೆ ಕೃತಿಕಾ ಕುಟುಂಬಸ್ಥರು ಚೆನ್ನೈನಿಂದ ಆಗಮಿಸುತ್ತಿದ್ದಾರೆ. ಬೆಳಗ್ಗೆ 10ರ ಬಳಿಕ ಪ್ರೀತಮ್, ಕೃತಿಕಾ ಮರಣೋತ್ತರ ಪರೀಕ್ಷೆ ನಡೆಯಲಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಾಗುವುದು.
ಬೀಳುವ ಹಂತದಲ್ಲಿದೆ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್
ಇನ್ನು ನಿನ್ನೆ ಭೀಕರ ಘಟನೆ ನಡೆದ ಸ್ಥಳವಾದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಕೆಳಗೆ ಬೀಳುವ ಹಂತಕ್ಕೆ ತಲುಪಿದೆ. ಫ್ಲೈಓವರ್ ಮೇಲಿನ ತಡೆಗೋಡೆ ಬೀಳುವಂತಿದ್ದು ಆತಂಕ ಹೆಚ್ಚಿಸಿದೆ. ನಿನ್ನೆ ರಾತ್ರಿ ನೂರರ ವೇಗದಲ್ಲಿ ಬುಲೆಟ್ ಬೈಕ್ಗೆ ಬಲೆನೋ ಕಾರು ಡಿಕ್ಕಿ ಹೊಡೆದಿತ್ತು. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಲೆಬೈ ಗೋಡೆ ಕೆಳಗೆ ಬೀಳುವ ಹಂತಕ್ಕೆ ತಲುಪಿದ್ದು ಫ್ಲೈಓವರ್ ಸೈಡ್ ವಾಲನ್ನು ಹೈವೇ ಅಥಾರಟಿ ತೇಪೆ ಕಾರ್ಯ ಮಾಡುತ್ತಿದೆ.
ಘಟನೆ ವಿವರ
ಬೆಂಗಳೂರಿನ ಸಿಲ್ಕ್ಬೋರ್ಡ್ ಕಡೆಯಿಂದ ಬಂದ ಕಾರೊಂದು ಎಲೆಕ್ಟ್ರಾನಿಕ್ ಸಿಟಿಯ ಎಲಿವೇಟೆಡ್ ಫ್ಲೈಓವರ್ ಮೇಲೆ ವೇಗವಾಗಿ ಹೋಗ್ತಿತು. ಅದೇ ಫ್ಲೈಓವರ್‌ನ ಲೇಬೈ ಬಳಿ ಬೈಕ್ ಅನ್ನ ಸೈಡ್‌ಗೆ ಹಾಕಿ, ಅದೇ ಬೈಕ್ ಮೇಲೆ ಯುವಕ ಯುವತಿ ಕೂತಿದ್ರು. ಆದ್ರೆ ವೇಗವಾಗಿ ಬರ್ತಿದ್ದ ಕಾರಿನ ಚಾಲಕ ಲೇಬೈ ಬಳಿ ನಿಂತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಫ್ಲೈಓವರ್ ಮೇಲೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಮೇಲೆ ಕೂತಿದ್ದ ಯುವಕ-ಯುವತಿ 100 ಮೀಟರ್ ದೂರದವರೆಗೂ ಹಾರಿದ್ದಾರೆ. ಬಳಿಕ ಸುಮಾರು 50ಕ್ಕೂ ಹೆಚ್ಚು ಅಡಿಯಿಂದ ಇಬ್ಬರ ಮೃತದೇಹಗಳು ನೆಲಕ್ಕೆ ಬಿದ್ದಿವೆ.
ಅಪ್ಪಚ್ಚಿಯಾಗಿದ್ದ ಮೃತದೇಹ ಕಂಡು ಬೆಚ್ಚಿಬಿದ್ದ ಸ್ಥಳೀಯರು
ಇಬ್ಬರ ಮೃತದೇಹಗಳು ಫ್ಲೈಓವರ್ ಮೇಲಿಂದ ರಸ್ತೆಗೆ ಬೀಳುತ್ತಿದ್ದಂತೆ ವಾಹನ ಸವಾರರು ಸ್ಥಳೀಯರು ದೌಡಾಯಿಸಿ ಬಂದಿದ್ದಾರೆ. ಮೃತದೇಹಗಳು ಅಪ್ಪಚ್ಚಿಯಾಗಿ ಗುರುತೇ ಸಿಗದಂತಾಗಿದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಸ್ಪಲ್ಪ ಹೊತ್ತಲೇ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ರು. ಬಳಿಕ ಯುವಕ, ಯುವತಿ ಮೃತದೇಹಗಳನ್ನ ಸೇಂಟ್ ಜಾನ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ರು.
ಕಾರು ಚಾಲಕನ ವಿರುದ್ಧ ಕೇಸ್ ದಾಖಲು
ಇನ್ನು ವೇಗವಾಗಿ ಬಂದು ಡಿಕ್ಕಿ ಹೊಡೆದ ಕಾರು ಚಾಲಕ ಹೆಬ್ಬಗೋಡಿಯ ನಿತೇಶ್ ಸಹ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಕಾರು ಚಾಲಕನ ನಿರ್ಲಕ್ಷ್ಯ ಅತಿವೇಗವೇ ಅಪಘಾತಕ್ಕೆ ಕಾರಣವಾಗಿದ್ದು, ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ 279, 304(ಎ) ಅಡಿ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಭೀಕರ ಅಪಘಾತ; ಫ್ಲೈಓವರ್ ಮೇಲಿಂದ ಬಿದ್ದ ಇಬ್ಬರ ದೇಹ ಛಿದ್ರ
Published On - 8:54 am, Wed, 15 September 21