ಅಮ್ಮ ಹೊಡೆದ್ರು, ಆಟಕ್ಕೆ ಸೇರಿಸಿಕೊಳ್ತಿಲ್ಲ; ಮಕ್ಕಳಿಂದ ಬರುತ್ತಿವೆ ತುರ್ತು ಕರೆಗಳು, ಹೈರಾಣಾದ ಪೊಲೀಸರು

| Updated By: ಆಯೇಷಾ ಬಾನು

Updated on: Jan 21, 2024 | 7:32 AM

ತುರ್ತುಸೇವೆ 112ಗೆ ಬರುತ್ತಿರುವ ಕರೆಗಳು ಪೊಲೀಸರಿಗೆ ತಲೆ ಬಿಸಿ ಮಾಡಿವೆ. ಸಣ್ಣ-ಪುಟ್ಟ ವಿಚಾರಕ್ಕೂ ಜನ ತುರ್ತು ಸೇವೆ ನಂಬರ್​ಗೆ ಕರೆ ಮಾಡುತ್ತಿದ್ದಾರೆ. ಸದ್ಯ ಮಕ್ಕಳ ಕೆಲ ಕರೆಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿವೆ. ಮಕ್ಕಳು 112ಗೆ ಕರೆ ಮಾಡಿ ಅಮ್ಮ ಹೊಡೆದ್ರು, ಆಟಕ್ಕೆ ಸೇರಿಸಿಕೊಳ್ಳುತ್ತಿಲ್ಲ ಸಹಾಯ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ.

ಅಮ್ಮ ಹೊಡೆದ್ರು, ಆಟಕ್ಕೆ ಸೇರಿಸಿಕೊಳ್ತಿಲ್ಲ; ಮಕ್ಕಳಿಂದ ಬರುತ್ತಿವೆ ತುರ್ತು ಕರೆಗಳು, ಹೈರಾಣಾದ ಪೊಲೀಸರು
ಆಟಕ್ಕೆ ಸೇರಿಸಿಕೊಳ್ಳುತ್ತಿಲ್ಲ ಎಂದು ಕರೆ ಮಾಡಿದ ಬಾಲಕ
Follow us on

ಬೆಂಗಳೂರು, ಜ.21: ಪೊಲೀಸ್‌, ಆಂಬ್ಯುಲೆನ್ಸ್, ಅಗ್ನಿಶಾಸಮಕ ಸೇರಿದಂತೆ ಇನ್ನಿತರ ಯಾವುದೇ ತುರ್ತು ಸೇವೆ ಪಡೆಯಲು 112 ನಂಬರ್‌ ಡಯಲ್‌ ಮಾಡಿದರೆ ಸಾಕು ಸಂಬಂಧಿತ ಸಿಬ್ಬಂದಿ ತಕ್ಷಣ ಸ್ಪಂದಿಸಿ ಸಮಸ್ಯೆ ಬಗೆಹರಿಸುತ್ತಿದ್ದರು. ಆದರೆ ಈಗ ತುರ್ತುಸೇವೆ 112ಗೆ ಬರುತ್ತಿರುವ ಕರೆಗಳು ಪೊಲೀಸರಿಗೆ (Bengaluru Police) ತಲೆ ಬಿಸಿ ಮಾಡಿವೆ. ಸಣ್ಣ-ಪುಟ್ಟ ವಿಚಾರಕ್ಕೂ ಜನ ತುರ್ತು ಸೇವೆ ನಂಬರ್​ಗೆ ಕರೆ ಮಾಡುತ್ತಿದ್ದಾರೆ. ಸದ್ಯ ಮಕ್ಕಳ ಕೆಲ ಕರೆಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿವೆ.

ಕೇಸ್-1

ಅಮ್ಮ ಮಗಳು ಜಗಳ ಮಾಡಿಕೊಂಡಿದ್ದು ಅಮ್ಮನ ವಿರುದ್ಧವೇ ಪೊಲೀಸರಿಗೆ ಕರೆ ಮಾಡಿ ಪುಟ್ಟ ಬಾಲಕಿ ದೂರು ನೀಡಿದ್ದಾಳೆ. ಮಾಹಿತಿ ಕೇಳಲು ಕರೆ ಮಾಡಿದ್ದ ಪೊಲೀಸರಿಗೆ ತಾಯಿ ಬಾಯಿಗೆ ಬಂದಂತೆ ಬೈದು ಫೋನ್ ಇಟ್ಟಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚಿಕ್ಕ ವಿಷಯಕ್ಕೆ ತಾಯಿ ಹಾಗೂ ಪುಟ್ಟ ಮಗಳ ನಡುವೆ ಜಗಳ ಆಗಿ ತಾಯಿ ಮಗಳ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಬಾಲಕಿ 112 ಕರೆ ಮಾಡಿ ತಾಯಿ ಬಗ್ಗೆ ದೂರಿದ್ದಾಳೆ. ಮತ್ತಷ್ಟು ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ಮತ್ತೆ ಅದೇ ನಂಬರ್​ಗೆ ಕರೆ ಮಾಡಿದ್ದು ಈ ವೇಳೆ ಫೋನ್ ಕಸಿದುಕೊಂಡ ತಾಯಿ ಪೊಲೀಸರಿಗೆ ಏಕವಚನದಲ್ಲಿ ನಿಂದಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್ ಆಗಿದೆ.

ಕೇಸ್​-2

ಕ್ರಿಕೆಟ್ ಆಡಲು ಸೇರಿಸಿಕೊಂಡಿಲ್ಲ ಎಂದು ಕರೆ ಮಾಡಲಾಗಿದೆ. ಓರ್ವ ಬಾಲಕ 112ಗೆ ಕರೆ ಮಾಡಿ ನನ್ನನ್ನು ಕ್ರಿಕೆಟ್ ಆಡಲು ಸೇರಿಸಿಕೊಳ್ಳುತ್ತಿಲ್ಲ. ಸಹಾಯ ಮಾಡಿ ಎಂದು ತುರ್ತು ಸೇವೆಗೆ ಕರೆ ಮಾಡಿದ್ದಾನೆ. ವಿಚಾರ ಸಣ್ಣದೆನಿಸಿದರೂ ಪೊಲೀಸರು ಸ್ಥಳಕ್ಕೆ ತೆರಳಿ ದೂರು ಸ್ವೀಕರಿಸಿ ಆತನ ಗೆಳೆಯರಿಗೆ ಬುದ್ದಿ ಹೇಳಿ ಆಟಕ್ಕೆ ಸೇರಿಸಿ ಬಂದರು. ಈ ಘಟನೆಯ ಆಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಚಿತ್ರದುರ್ಗ: ಮುರುಘಾ ಮಠದ ಹಣ, ಆಸ್ತಿ ದುರ್ಬಳಕೆ ಆರೋಪ: ಎಸ್​ಕೆ ಬಸವರಾಜನ್ ವಿರುದ್ಧದ‌ ಕೇಸ್​ನಲ್ಲಿ ಮುರುಘಾ ಶ್ರೀ ಸಾಕ್ಷ್ಯ

ಬೆಂಕಿ ಅವಘಡ, ಅನಾರೋಗ್ಯ, ನೀರಿಗೆ ಬಿದ್ದಿರುವುದು, ಕಾನೂನು ಸುವ್ಯವಸ್ಥೆ, ಮಹಿಳಾ, ಮಕ್ಕಳ, ಹಿರಿಯ ನಾಗರಿಕರ ಹಾಗೂ ಇನ್ನಿತರ ಯಾವುದೇ ತುರ್ತು ಸಮಸ್ಯೆಗಳಿದ್ದರೂ ತಕ್ಷಣದ ನೆರವಿಗಾಗಿ ಸರ್ಕಾರ ತುರ್ತು ಸೇವೆ 112 ನಂಬರ್ ನೀಡಿದೆ. ಆದರೆ ಪುಟ್ಟ ಪುಟ್ಟ ಮಕ್ಕಳು ತಮ್ಮ ಚಿಕ್ಕ ಚಿಕ್ಕ ಸಮಸ್ಯೆಗಳಿಗೂ ತುರ್ತು ಸೇವೆ ನಂಬರ್​ಗೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಇದರಿಂದ ಪೊಲೀಸರಿಗೆ ತಲೆ ಬಿಸಿಯಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ