ರಾಜಾಕಾಲುವೆಗಳ ಒತ್ತುವರಿಯೇ ರಸ್ತೆ ಮೇಲೆ ನೀರು ನಿಲ್ಲಲು ಕಾರಣ: ವೀರಪ್ಪ ಮೊಯಿಲಿ

ಮಳೆನೀರು ನಿಲ್ಲುವ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕು ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಹೇಳಿದರು.

ರಾಜಾಕಾಲುವೆಗಳ ಒತ್ತುವರಿಯೇ ರಸ್ತೆ ಮೇಲೆ ನೀರು ನಿಲ್ಲಲು ಕಾರಣ: ವೀರಪ್ಪ ಮೊಯಿಲಿ
ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯಿಲಿ


ಬೆಂಗಳೂರು: ನಗರಕ್ಕೆ ಹೊಂದಿಕೊಂಡಂತೆ ಇರುವ ಯಲಹಂಕದಲ್ಲಿ ರಾಜಾಕಾಲುವೆಗಳು ಒತ್ತುವರಿಯಾಗಿವೆ. ಹೀಗಾಗಿಯೇ ಮಳೆನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗುತ್ತಿಲ್ಲ. ರಾಜಾಕಾಲುವೆಗಳಿದ್ದ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆಗಳನ್ನು ಕಟ್ಟುತ್ತಿರುವುದರಿಂದ ರಸ್ತೆಗಳ ಮೇಲೆ ನೀರು ಹರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಲಹಂಕ ವ್ಯಾಪ್ತಿಯಲ್ಲಿ ಅಂಥ ಹತ್ತಾರು ಪ್ರಕರಣಗಳು ನಡೆದಿವೆ. ಕೇಂದ್ರಿಯ ವಿಹಾರ ಅಪಾರ್ಟ್​ಮೆಂಟ್​ನಲ್ಲಿ ಸುಮಾರು 600 ಜನರಿದ್ದಾರೆ. ಅವರಿಗೆ ಓಡಾಡುವುದಕ್ಕೆ ಕಷ್ಟವಾಗುತ್ತಿದೆ. ಇಂಥ ಸಮಸ್ಯೆಗಳು ಮತ್ತೆ ಆಗಬಾರದು. ಮಳೆನೀರು ನಿಲ್ಲುವ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕು ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಹೇಳಿದರು.

ಈ ಸಮಸ್ಯೆ ಬಗ್ಗೆ ಸರ್ಕಾರ ಶೀಘ್ರ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಇಡೀ ಯಲಹಂಕವೇ ಮುಳುಗಿದರೂ ಅನುಮಾನವಿಲ್ಲ. 2014ರ ಸಂದರ್ಭದಲ್ಲಿ ಮಳೆಬಂದಾಗ ಈ ಪ್ರಮಾಣದ ನೀರು ನೋಡಿದ್ದೆವು. ಜಲಮಂಡಳಿ ಅಧಿಕಾರಿಗಳೊಂದಿಗೆ ಅಂದೇ ಚರ್ಚಿಸಿ ಕ್ರಮ ತೆಗೆದುಕೊಳ್ಳುವುದಕ್ಕೆ ಸೂಚಿಸಿದ್ದೆ. ಹಿಂದೆ ಮಳೆ ಬಂದಾಗ ಇಷ್ಟೊಂದು ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಈಗ ಅಧಿಕಾರಿಗಳು ಮಾಸ್ಟರ್ ಪ್ಲಾನ್ ರೂಪಿಸಬೇಕು. ಇಲ್ಲಿಗೆ ಬಂದು ನೋಡಿ ಹೋದರೆ ಸಾಲದು. ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕು ಎಂದು ನುಡಿದರು. ಯಲಹಂಕ ಸಮೀಪದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್​ಗೂ ಭೇಟಿ ನೀಡಿ ಪರಿಶೀಲಿಸಿದರು.

ನ.26ರಿಂದ ರಾಜ್ಯದಲ್ಲಿ ಮತ್ತೆ ಮಳೆ ಸಾಧ್ಯತೆ
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಚಂಡಮಾರುತವಾಗಿ ಮಾರ್ಪಡುವ ಸಾಧ್ಯತೆಯಿದ್ದು, ನ.26ರಿಂದ ಡಿ.15ರವರೆಗೆ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ತಮಿಳುನಾಡು, ಕೇರಳ, ಆಂಧ್ರ ಕರಾವಳಿಯಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ಪುದುಚೆರಿ, ಚೆನ್ನೈ, ನೆಲ್ಲೂರು ನಗರಗಳಿಗೆ‌ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ನೆರೆ ರಾಜ್ಯಗಳಲ್ಲಿ ಮಳೆ ಹಿನ್ನೆಲೆ ರಾಜ್ಯದಲ್ಲಿಯೂ ಮಳೆ ಸುರಿಯುವ ಸಾಧ್ಯತೆಯಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾಗಬಹುದು ಎನ್ನಲಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ ಬಿಸಿಲಿನ ನಡುವೆಯೂ ಮಳೆ ಬಿದ್ದಿದೆ. ಸ್ವಲ್ಪ ಬಿಡುವು ಕೊಟ್ಟಿದ್ದ ಮಳೆ ಈಗ ‌ಮತ್ತೆ ಆರಂಭವಾಗಿದೆ. ಆಕಾಶದಲ್ಲಿ ಕಾಮನಬಿಲ್ಲು ಮೂಡಿದ ಕೆಲ ಕ್ಷಣಗಳಲ್ಲಿ ಮಳೆ ಆರಂಭವಾಗಿದೆ. ಚನ್ನಗಿರಿ ತಾಲೂಕಿನ ಕಾಶಿಪುರ ಕ್ರಾಸ್ ಬಳಿ ಜನರು ಕಾಮನಬಿಲ್ಲು ನೋಡಿ ಖುಷಿಪಟ್ಟ ಕೆಲವೇ ನಿಮಿಷಗಳಲ್ಲಿ ಮಳೆ ಆರಂಭವಾಯಿತು. ಕಳೆದ ಐದು ದಿನಗಳಿಂದ ಸುರಿದ ಮಳೆ ನಿನ್ನೆ ಇಂದು ಬಿಡುವು ಕೊಟ್ಟಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ; ಯಲಹಂಕದ ಜಕ್ಕೂರು ರಸ್ತೆ ಜಲಾವೃತ, ಮನೆಗಳಿಗೆ ನೀರು ನುಗ್ಗಿ ಅವಾಂತರ
ಇದನ್ನೂ ಓದಿ: ಭಾರೀ ಮಳೆಗೆ ಐದು ಲಕ್ಷ ಹೆಕ್ಟೇರ್ ಬೆಳೆ ನಾಶ; ದುಪ್ಪಟ್ಟಾದ ತರಕಾರಿ ಬೆಲೆ, ಪ್ಯಾಕೆಟ್ ಒಂದರಲ್ಲಿ 2 ಟೊಮೆಟೋ ಮಾರಾಟ!

Click on your DTH Provider to Add TV9 Kannada