ಬೆಂಗಳೂರು ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೇ ಸಿಗುತ್ತಿಲ್ಲ ನೀರು; ಟ್ಯಾಂಕರ್ ನೀರಿಗೆ ದುಪ್ಪಟ್ಟು ಹಣ ಕೊಟ್ಟು ಸುಸ್ತು
ಬೆಂಗಳೂರು ನೀರಿನ ಬಿಕ್ಕಟ್ಟಿನ ಬಿಸಿ ಈಗ ಪೌರಕಾರ್ಮಿಕರ ಜೀವನವನ್ನೇ ಸಂಕಷ್ಟಕ್ಕೀಡುಮಾಡಿದೆ. ಇಡೀ ನಗರವನ್ನು ಸ್ವಚ್ಛಗೊಳಿಸುವ ಇವರ ಅಲ್ಪ ದುಡಿಮೆಯ ಬಹುಪಾಲು ಮೊತ್ತ ಟ್ಯಾಂಕರ್ ನೀರಿಗೆ ಪಾವತಿಸುವಂತಾಗಿದೆ. ಈ ಬಗ್ಗೆ ಬಿಬಿಎಂಪಿ, ಜಲ ಮಂಡಳಿ ಗಮನ ಹರಿಸಬೇಕು. ಕಾರ್ಮಿಕರ ಸಮಸ್ಯೆ ಬಗೆಹರಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಬೆಂಗಳೂರು, ಏಪ್ರಿಲ್ 22: ಬೆಂಗಳೂರು (Bengaluru) ನಗರವನ್ನು ನಿತ್ಯ ಸ್ವಚ್ಛಗೊಳಿಸಿ ಸುದಂರವಾಗಿ ಕಾಣುವಂತೆ ಮಾಡುವ ಪೌರಕಾರ್ಮಿಕರೇ (Pourakarmikas) ಈಗ ಹನಿ ನೀರಿಗೆ (Water Crisis) ಒದ್ದಾಡುವಂತಾಗಿದೆ. ಬೆಂಗಳೂರಿನ ಜಲದಾಹದ ಸಂಕಷ್ಟಕ್ಕೆ ನಲುಗಿದ್ದ ಅವರಿಗೆ ಇದೀಗ ಹನಿ ಹನಿ ನೀರಿಗೂ ಪರದಾಡವಂತಾಗಿದೆ. ಕೆಆರ್ ಪುರಂನ ಹೂಡಿಯಲ್ಲಿರೋ ಪೌರಕಾರ್ಮಿಕರ ಕುಟುಂಬಗಳು ನೀರಿಗಾಗಿ ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಬರುವ ಅಲ್ಪಸ್ವಲ್ಪ ಹಣವನ್ನು ನೀರಿಗೆ ಕೊಡುತ್ತಿರುವ ಕಾರ್ಮಿಕರು ಸಮಸ್ಯೆ ಬಗೆಹರಿಸದ ಜಲಮಂಡಳಿ, ಪಾಲಿಕೆಗೆ ನೀರು ಕೊಡಿ ಎಂದು ಮನವಿ ಮಾಡುತ್ತಿದ್ದಾರೆ.
ರಸ್ತೆಬದಿ ಸಾಲು ಸಾಲು ಬಿಂದಿಗೆಗಳು, ದೊಡ್ಡ ದೊಡ್ಡ ಡ್ರಮ್ಗಳನ್ನು ಹೆಗಲ ಮೇಲೆ ಹೊತ್ತು ನೀರು ತುಂಬಿಸಿಕೊಳ್ಳಲು ಬರುತ್ತಿರುವ ಪೌರಕಾರ್ಮಿಕರನ್ನು ಐಟಿಸಿಟಿ ಬೆಂಗಳೂರಿನ ಹೂಡಿಯಲ್ಲಿ ದಿನನಿತ್ಯ ಕಾಣಬಹುದು. ಬಿಬಿಎಂಪಿಯಲ್ಲಿ ಗುತ್ತಿಗೆ ಆಧಾರದಲ್ಲಿ ಪೌರಕಾರ್ಮಿಕರಾಗಿ ದುಡಿಯುತ್ತಿರುವ ಈ ಜನ ರಿಗೆ, ಜಲದಾಹದ ಬಿಸಿ ತಟ್ಟಿದೆ. ನೀರಿಲ್ಲದೇ ಪರದಾಡುತ್ತಿರುವ ಇವರು ಬರುವ ಅಲ್ಪಸ್ವಲ್ಪ ಹಣದಲ್ಲೇ ದುಡ್ಡು ಹಾಕಿ ಟ್ಯಾಂಕರ್ ನೀರು ತರಿಸಿಕೊಂಡು ಜೀವನ ನಡೆಸುತ್ತಿದ್ದಾರೆ.
ಸರ್ಕಾರಿ ಶಾಲೆಯ ಬೋರ್ ವೆಲ್ನಿಂದ ನೀರು ಪಡೆಯುತ್ತಿದ್ದ ಇವರಿಗೆ, ಇದೀಗ ಶಾಲೆ ನೀರು ಕೂಡ ಸಿಗುತ್ತಿಲ್ಲ. ಅತ್ತ ಅಕ್ಕಪಕ್ಕದ ಪ್ರದೇಶದ ಜನರು ಕೂಡ ನೀರು ಕೊಡಲು ನಿರಾಕರಿಸುತ್ತಿರುವುದು ಕಾರ್ಮಿಕರನ್ನು ಮತ್ತಷ್ಟು ಕಂಗಾಲಾಗಿಸಿದೆ. ದುಡಿಯೋ ದುಡ್ಡೆಲ್ಲ ನೀರಿಗೆ ಕೊಟ್ಟರೆ ಬದುಕೋದು ಹೇಗೆ ಎಂದು ಇವರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಷೇರು ಹೂಡಿಕೆ ನೆಪದಲ್ಲಿ ₹5.17 ಕೋಟಿ ವಂಚನೆ
ಸದ್ಯ ಟ್ಯಾಂಕರ್ ಬಂದಾಗ ಇರುವ ಬಿಂದಿಗೆ, ಡ್ರಮ್ಗಳನ್ನೆಲ್ಲ ಹೊತ್ತುಕೊಂಡು ಬರುವ ಜನರು ನೀರು ಹಿಡಿದು ಸಂಗ್ರಹಿಸಿಕೊಳ್ಳುತ್ತಾರೆ. ಬೆಳಗ್ಗೆಯಾದರೆ ಬೀದಿಗಳನ್ನು ಸ್ವಚ್ಚಗೊಳಿಸುವ ಇವರಿಗೆ ತಮ್ಮನ್ನೇ ಸ್ವಚ್ಚಮಾಡಿಕೊಳ್ಳುವುದಕ್ಕೂ ನೀರು ಸಿಗದೇ ಪರದಾಡುವಂತಾಗಿದೆ. ಬ್ರಾಂಡ್ ಬೆಂಗಳೂರಿನ ಕನಸು ಕಾಣ್ತಿರುವ ಪಾಲಿಕೆಯಾಗಲಿ, ಜಲದಾಹ ತಣಿಸಲು ಭಗೀರಥ ಯತ್ನ ಮಾಡ್ತಿರೋ ಜಲಮಂಡಳಿಯಾಗಲೀ ಈ ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ
ವರದಿ: ಶಾಂತಮೂರ್ತಿ, ಟಿವಿ 9, ಬೆಂಗಳೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ