ಬಿಜೆಪಿಗೆ ಸೇರಿದ್ದ 2 ಕೋಟಿ ರೂ. ಹಣ ವಾಪಾಸ್ ನೀಡಿಲ್ಲ: ಮುನೀಶ್ ಮೌದ್ಗಿಲ್ ಸ್ಪಷ್ಟನೆ
ಲೋಕಸಭಾ ಚುನಾವಣಾ ಕಾವು ಜೋರಾಗಿದ್ದು, ಯಾವುದೇ ಅಕ್ರಮ ನಡೆಯದಂತೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಅದರಂತೆ ಬೆಂಗಳೂರಿನ(Bengaluru) ಬಿನ್ನಿಮಿಲ್ ಹತ್ತಿರದ ಎಪಿಎಂಸಿ ಬಳಿ ಇರುವ ಚೆಕ್ ಪೋಸ್ಟ್‌ನಲ್ಲಿ ನಿನ್ನೆ (ಏ.20) ಬಿಜೆಪಿಗೆ ಸೇರಿದ ಸುಮಾರು ಎರಡು ಕೋಟಿಯಷ್ಟು ನಗದನ್ನು ದಾಖಲೆ ಇಲ್ಲದೆ ಕಾರೊಂದರಲ್ಲಿ ಸಾಗಿಸುತ್ತಿದ್ದ ವೇಳೆ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದು, ಈ ಕುರಿತು ಬೆಂಗಳೂರು ನಗರ ಜಿಲ್ಲೆ ಎಮ್ಸಿಸಿ ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು, ಏ.21: ಬೆಂಗಳೂರಿನ(Bengaluru) ಬಿನ್ನಿಮಿಲ್ ಹತ್ತಿರದ ಎಪಿಎಂಸಿ ಬಳಿ ಇರುವ ಚೆಕ್ ಪೋಸ್ಟ್‌ನಲ್ಲಿ ನಿನ್ನೆ (ಏ.20) ಬಿಜೆಪಿಗೆ ಸೇರಿದ ಸುಮಾರು ಎರಡು ಕೋಟಿಯಷ್ಟು ನಗದನ್ನು ದಾಖಲೆ ಇಲ್ಲದೆ ಕಾರೊಂದರಲ್ಲಿ ಸಾಗಿಸುತ್ತಿದ್ದ ವೇಳೆ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿರುವ ಕುರಿತು ರಾಜ್ಯ ಚುನಾವಣಾ ಆಯೋಗ ತಿಳಿಸಿತ್ತು. ಬಳಿಕ ಈ ಹಣವನ್ನು ಪುನಃ ಹಿಂದಿರುಗಿಸಲಾಗಿದೆ ಎಂಬ ಊಹಾಪೋಹಗಳು ಹರಿಡಿತ್ತು. ಈ ಕುರಿತು ಇದೀಗ ಬೆಂಗಳೂರು ನಗರ ಜಿಲ್ಲೆ ಎಮ್ಸಿಸಿ ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್ ಸ್ಪಷ್ಟನೆ ನೀಡಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಈ ಹಣವು ರಾಜ್ಯ ಬಿಜೆಪಿ ಪಕ್ಷದ ಕಚೇರಿಗೆ ಸಂಬಂಧಿಸಿದ್ದು ಎಂದು ತಿಳಿದು ಬಂದ ಹಿನ್ನಲೆ ಆದಾಯ ತೆರಿಗೆ ಇಲಾಖೆಯು ಬಿಜೆಪಿಯ ಪದಾಧಿಕಾರಿಗಳನ್ನು ಕರೆಸಿ ತನಿಖೆ ನಡೆಸಿದೆ. ಈ ವೇಳೆ ಹಣದ ಮೂಲವು ಸರಿಯಾಗಿರುವುದರಿಂದ ಐಟಿ ಕಾನೂನಿನ ಅಡಿಯಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ತೀರ್ಮಾನಿಸಿದೆ. ಆದರೆ, ಇಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಪಕ್ಷದ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳು ರಾಜಕೀಯ ಚಟುವಟಿಕೆಗಳಿಗಾಗಿ ನೀಡಿದ 10 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಚೆಕ್ ಅಥವಾ ಆನ್‌ಲೈನ್ ಮೂಲಕ ಮಾಡಲಾಗುತ್ತದೆ.
ಇದನ್ನೂ ಓದಿ:ಬೆಂಗಳೂರು: ಬಿಜೆಪಿಗೆ ಸೇರಿದ 2 ಕೋಟಿ ಹಣ ಜಪ್ತಿ; ಎಫ್‌ಐಆರ್ ದಾಖಲು
ರಾಜಕೀಯ ಪಕ್ಷಗಳು ಭಾರೀ ಪ್ರಮಾಣದ ಹಣವನ್ನು ಕೊಂಡೊಯ್ಯದಂತೆ ಇಸಿಐ ಸಲಹೆ ನೀಡಿದೆ. ಆದರೆ, ಈ ಹಣವನ್ನು ಚುನಾವಣೆಯಲ್ಲಿ ಪ್ರಚೋದನೆಗಳಿಗೆ ಬಳಸಬಹುದೆಂಬ ಶಂಕೆಯ ಆಧಾರದ ಮೇಲೆ ನ್ಯಾಯಾಲಯದ ಆದೇಶದ ನಂತರ ಇಂದು ಎಫ್‌ಐಆರ್ ದಾಖಲಿಸಲಾಗಿದ್ದು, ಇಸಿಐ ನಿರ್ದೇಶನಗಳು ಮತ್ತು ಐಪಿಸಿಯ ಸೆಕ್ಷನ್ 171 ಬಿ 171 ಸಿ 171 ಇ 171 ಎಫ್ ಮತ್ತು ಆರ್‌ಪಿ ಕಾಯ್ದೆಯ ಸೆಕ್ಷನ್ 123 ರ ಪ್ರಾಥಮಿಕ ಉಲ್ಲಂಘನೆಯ ಕಾರಣದಿಂದ ನಗದನ್ನು ಕರ್ನಾಟಕ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮತ್ತು ಪ್ರಸ್ತುತ ಅದು ತನಿಖೆಯಲ್ಲಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ