Chennai Bengaluru Train: 2023ರ ವೇಳೆಗೆ 25 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಸಾಧ್ಯತೆ
ವಂದೇ ಭಾರತ್ ಎಕ್ಸ್‌ಪ್ರೆಸ್‌ನ ನವೀಕರಿಸಿದ ಆವೃತ್ತಿಯ 2 ರೈಲುಗಳನ್ನು ಗಾಂಧಿನಗರ-ಮುಂಬೈ ಮತ್ತು ಅಂಬಾಲಾ ಅಂದೌರಾ-ನವದೆಹಲಿ ಮಾರ್ಗಗಳಲ್ಲಿ ಈ ವರ್ಷ ಪ್ರಾರಂಭಿಸಲಾಗಿದೆ.
ಬೆಂಗಳೂರು: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು (Vande Bharat Express Train) ಎಷ್ಟು ಪ್ರಯಾಣಿಕರು ಬಳಸುತ್ತಾರೆ ಎಂಬುದನ್ನು ಆಧರಿಸಿ ಭಾರತೀಯ ರೈಲ್ವೆಯು ಮಾರ್ಚ್ 2023ರ ವೇಳೆಗೆ ಇನ್ನೂ 25 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಹೊರತರುವ ಸಾಧ್ಯತೆಯಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಕೋಚ್‌ಗಳನ್ನು ತಯಾರಿಸುವ ಚೆನ್ನೈನಲ್ಲಿರುವ ಇಂಟಿಗ್ರೇಟೆಡ್ ಕೋಚ್ ಫ್ಯಾಕ್ಟರಿ (ಐಸಿಎಫ್) 27 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್‌ನ ನವೀಕರಿಸಿದ ಆವೃತ್ತಿಯ 2 ರೈಲುಗಳನ್ನು ಗಾಂಧಿನಗರ-ಮುಂಬೈ ಮತ್ತು ಅಂಬಾಲಾ ಅಂದೌರಾ-ನವದೆಹಲಿ ಮಾರ್ಗಗಳಲ್ಲಿ ಈ ವರ್ಷ ಪ್ರಾರಂಭಿಸಲಾಗಿದೆ. ಮೂರನೇ ರೈಲು ಪ್ರಸ್ತುತ ಐಸಿಎಫ್‌ನಲ್ಲಿ ಉತ್ಪಾದನಾ ಹಂತದಲ್ಲಿದೆ. ಇದು ಕೆಲವೇ ದಿನಗಳಲ್ಲಿ ಸಿದ್ಧವಾಗಲಿದೆ. ವಂದೇ ಭಾರತ್ 2.0ರ ಮೂರನೇ ರೇಕ್‌ನ ಪ್ರಗತಿಯನ್ನು ಪರಿಶೀಲಿಸಲು ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಸಿಇಒ ವಿಕೆ ತ್ರಿಪಾಠಿ ಇತ್ತೀಚೆಗೆ ಐಸಿಎಫ್ ಕಾರ್ಖಾನೆಗೆ ಭೇಟಿ ನೀಡಿದ್ದರು. ಮೂರನೇ ರೈಲು ಬೆಂಗಳೂರು ಮೂಲಕ ಚೆನ್ನೈ-ಮೈಸೂರು (Chennai Bengaluru Train) ಮಾರ್ಗದಲ್ಲಿ ಸಂಚರಿಸಲಿದೆ.
ಇದನ್ನೂ ಓದಿ: Vande Bharat Express: ಹಿಮಾಚಲ ಪ್ರದೇಶದ ಉನಾದಲ್ಲಿ 4ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
ಎಲ್ಲಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕೋಚ್‌ಗಳು ಸ್ವಯಂಚಾಲಿತ ಬಾಗಿಲುಗಳು, ಜಿಪಿಎಸ್ ಆಧಾರಿತ ಆಡಿಯೋ-ದೃಶ್ಯ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಮನರಂಜನಾ ಉದ್ದೇಶಗಳಿಗಾಗಿ ಆನ್‌ಬೋರ್ಡ್ ಹಾಟ್‌ಸ್ಪಾಟ್ ವೈ-ಫೈ ಮತ್ತು ಅತ್ಯಂತ ಆರಾಮದಾಯಕ ಆಸನಗಳನ್ನು ಹೊಂದಿವೆ. ಎಕ್ಸಿಕ್ಯೂಟಿವ್ ಕ್ಲಾಸ್ನಲ್ಲಿ ತಿರುಗುವ ಕುರ್ಚಿಗಳನ್ನು ಸಹ ವ್ಯವಸ್ಥೆಗೊಳಿಸಲಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು 16 ಹವಾನಿಯಂತ್ರಿತ ಕೋಚ್‌ಗಳನ್ನು ಒಳಗೊಂಡಿದೆ. ಅದರಲ್ಲಿ 2 ಎಕ್ಸಿಕ್ಯೂಟಿವ್ ವರ್ಗ ಮತ್ತು 1,128 ಪ್ರಯಾಣಿಕರ ಒಟ್ಟು ಆಸನ ಸಾಮರ್ಥ್ಯವಿದೆ.
ನವೆಂಬರ್ 11 ರಂದು ದಕ್ಷಿಣ ಭಾರತದ ಮೊದಲ ಸೆಮಿ-ಹೈ-ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಕಾರ್ಯಾಚರಣೆ ಶುರುಮಾಡಲಿದೆ. ಮೈಸೂರು-ಬೆಂಗಳೂರು-ಚೆನ್ನೈ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ ಸೇವೆ ಒದಗಿಸಲಿದೆ. ವಂದೇ ಭಾರತ್ ಸಲುವಾಗಿ 2 ಬೆಂಗಳೂರು-ಚೆನ್ನೈ ರೈಲುಗಳ ವೇಗ ಸ್ವಲ್ಪ ನಿಧಾನವಾಗುವ ಸಾಧ್ಯತೆಯಿದೆ. ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಅವಕಾಶ ಕಲ್ಪಿಸಲು ಈ ರೈಲುಗಳನ್ನು ನಿಧಾನಗೊಳಿಸಬಹುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು ಮತ್ತು ಚೆನ್ನೈ ನಡುವೆ ವಂದೇ ಭಾರತ್ ರೈಲು ವಾರದಲ್ಲಿ ಬುಧವಾರ ಹೊರತುಪಡಿಸಿ 6 ದಿನಗಳಂದು ಚಲಿಸುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:58 am, Fri, 4 November 22