ಬೆಂಗಳೂರು, ಸೆಪ್ಟೆಂಬರ್ 10: ದೌರ್ಜನ್ಯ, ವಂಚನೆ, ಹಲ್ಲೆ ಮತ್ತು ಜಾತಿ ನಿಂದನೆ ಆರೋಪದ ಅಡಿ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್ ಸೇರಿದಂತೆ ಮೂವರ ವಿರುದ್ಧ ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ. ಸುಬ್ಬಮ್ಮ ಎಂಬುವರಿಂದ ದೂರು ನೀಡಲಾಗಿದೆ. ಸೆವೆನ್ ಹಿಲ್ಸ್ ಡೆವಲಪರ್ಸ್ ಮತ್ತು ಟ್ರೇಡರ್ಸ್ ಪಾಲುದಾರರಾಗಿರುವ ಸುಧಾಕರ್, ಮೋಸದಿಂದ ದಲಿತರ ಆಸ್ತಿ ಕಬಳಿಕೆ ಮಾಡಿದ್ದು, ಮನೆಯಲ್ಲಿದ್ದ ಮಗಳ ಮೇಲೂ ಹಲ್ಲೆ ಮಾಡಿದ್ದಾರೆಂದು ಸುಬ್ಬಮ್ಮ ಆರೋಪಿಸಿದ್ದಾರೆ. ಹಾಗಾಗಿ ಸಚಿವ ಡಿ.ಸುಧಾಕರ್, ಶ್ರೀನಿವಾಸ್, ಭಾಗ್ಯಮ್ಮ ವಿರುದ್ಧ ಎಫ್ಐಆರ್ ಹಾಕಲಾಗಿದೆ.
ಯಲಹಂಕ ಗ್ರಾಮದ ಸರ್ವೆ ನಂಬರ್ 108/1ರ ಜಮೀನನ್ನು ಮೋಸದಿಂದ ಕಬಳಿಕೆ ಮಾಡಿದ್ದು, ಕೋರ್ಟ್ನಲ್ಲಿ ಕೇಸ್ ಇದ್ದಾಗ ಗುಂಪು ಕಟ್ಟಿಕೊಂಡು ದೌರ್ಜನ್ಯವೆಸಗಿದ್ದಾರೆ. ಮಹಿಳೆಯರನ್ನು ಕರೆದೊಯ್ದು ಜೆಸಿಬಿ ಮೂಲಕ ಮನೆ ಕೆಡವಿರುವುದಾಗಿ ಆರೋಪ ಮಾಡಿದ್ದಾರೆ.
ಬಾಗಲಕೋಟೆ: ರೈತ ಮುಖಂಡ ಯಲ್ಲಪ್ಪ ಹೆಗಡೆ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧ ಮಾಜಿ ಸಚಿವ ಮುರುಗೇಶ್ ನಿರಾಣಿ ಮತ್ತು ಅವರ ಸಹೋದರ ಸಂಗಮೇಶ್ ನಿರಾಣಿ ವಿರುದ್ಧ ಬಾಗಲಕೋಟೆ ಜಿಲ್ಲೆಯ ಮುಧೋಳ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಎಫ್ಐಆರ್ ದಾಖಲಾಗಿತ್ತು. ಸಾಮಾಜಿಕ ಕಾರ್ಯಕರ್ತ ಹನುಮಂತ ಶಿಂಧೆ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ: ಮಾರಣಾಂತಿಕ ಹಲ್ಲೆಗೊಳಗಾದ ಯುವ ರೈತ ಮುಖಂಡನ ವಿರುದ್ಧವೇ FIR: ಮೂಲ ಆರೋಪಿಗಳ ಬಂಧನಕ್ಕೆ ಆಗ್ರಹ
ರೈತ ಮುಖಂಡ ಯಲ್ಲಪ್ಪ ಹೆಗಡೆ ಮೇಲೆ ಇಂಗಳಗಿ ಕ್ರಾಸ್ ಬಳಿ ಅಪರಿಚಿತ ದುಷ್ಕರ್ಮಿಗಳಿಂದ ಹಲ್ಲೆ ಮಾಡಲಾಗಿತ್ತು. ಸಾಮಾಜಿಕ ಕಾರ್ಯಕರ್ತ ಹನುಮಂತ ಶಿಂಧೆ ಜೊತೆ ಕಾರಿನಲ್ಲಿ ತೆರಳುತ್ತಿದ್ದಾಗ ಯಲ್ಲಪ್ಪ ಮೇಲೆ ಹಲ್ಲೆ ನಡೆಸಿದ್ದು, ನಿರಾಣಿ ಸಹೋದರರ ಆರು ಗೂಂಡಾಗಳು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿತ್ತು.
ಬೆಂಗಳೂರು: ಕಾಂಕ್ರಿಟ್ ಮಿಕ್ಸಿಂಗ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಯಲಹಂಕದ ಅಟ್ಟೂರು ಲೇಔಟ್ನಲ್ಲಿ ನಡೆದಿದೆ. ದೇವೇಂದ್ರಪ್ಪ(21) ಬೈಕ್ ಸವಾರ. ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕೊಡಗು: ವಿರಾಜಪೇಟೆ ತಾಲೂಕಿನ ಕುಟ್ಟಂದಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಚೆಸ್ಕಾಂ ಲೈನ್ಮ್ಯಾನ್ ಬಸವರಾಜ್ ತೆಗ್ಗಿ(26) ಮೃತಪಟ್ಟಿದ್ದಾರೆ. ಮೃತ ಚೆಸ್ಕಾಂ ಸಿಬ್ಬಂದಿ ಬಸವರಾಜ್ ಬಾಗಲಕೋಟೆ ಜಿಲ್ಲೆಯ ಮಾರ್ನಾಲು ನಿವಾಸಿ. ಮನೆಯೊಂದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ವೇಳೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಳೆದ 5 ವರ್ಷಗಳಿಂದ ವಿರಾಜಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:38 pm, Sun, 10 September 23