
ಬೆಂಗಳೂರು, ಆಗಸ್ಟ್ 17: ಶನಿವಾರ ನಗರ್ತಪೇಟೆಯಲ್ಲಿ ಸಂಭವಿಸಿರುವ ಘೋರ ಅಗ್ನಿ ದುರಂತ (fire accident) ಐವರನ್ನ ಬಲಿ ಪಡೆದಿದೆ. ಹಲವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ಇಲ್ಲಿ ಅವೈಜ್ಞಾನಿಕವಾಗಿ ಕಟ್ಟಡಗಳನ್ನು ಕಟ್ಟಿದ್ದಾರೆ. ಅನಧಿಕೃತ ಕಟ್ಟಡಗಳಿಗೆ ನೋಟಿಸ್ ನೀಡುವಂತೆ ಬಿಬಿಎಂಪಿ ಸೂಚನೆ ನೀಡಿದ್ದು, ಅಕ್ರಮವಾಗಿ ಕಟ್ಟಡ ನಿರ್ಮಿಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಅಗ್ನಿ ಅವಘಡ ಸಂಭವಿಸಿದ ಕಟ್ಟಡ ಪರಿಶೀಲನೆ ಮಾಡಿದರು. ದುರಂತ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಕ್ರವಾಗಿ ಈ ಕಟ್ಟಡ ಕಟ್ಟಲಾಗಿದೆ. ಈ ಪರಿಸ್ಥಿತಿಗೆ ನಮ್ಮ ಸಾರ್ವಜನಿಕರನ್ನೇ ದೂರಬೇಕು ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಕೃಷ್ಣ ಜನ್ಮಾಷ್ಟಮಿಯಂದೇ ಅಗ್ನಿ ಅವಘಡ, ಐವರು ಸಾವು
ಅವಘಡ ಸಂಭವಿಸಿದಾಗ ಅಗ್ನಿಶಾಮಕ ವಾಹನ ಬರುವುದಕ್ಕೆ ಆಗಿಲ್ಲ. ಒಂದೂವರೆ ಕಿಲೋ ಮೀಟರ್ನಿಂದ ನೀರು ತಂದು ಹಾಕಿದ್ದಾರೆ. ಈ ದುರಂತದಲ್ಲಿ ಮೃತಪಟ್ಟವರು ರಾಜಸ್ಥಾನ ಮೂಲದವರು. ಈಗಾಗಲೇ ಈ ಬಿಲ್ಡಿಂಗ್ ಮಾಲಿಕರಿಗೆ ನೋಟಿಸ್ ನೀಡಿ ಅರೆಸ್ಟ್ ಮಾಡಲಾಗಿದೆ. ಅಕ್ರಮವಾಗಿ ಕಟ್ಟಡ ಕಟ್ಟುವವರಿಗೆ ನೋಟಿಸ್ ನೀಡಬೇಕು. ಇಲ್ಲಿ ಒಂದು ಬಿಲ್ಡಿಂಗ್ ಬಿದ್ದರೆ ಅಕ್ಕ-ಪಕ್ಕದ ಕಟ್ಟಡಗಳು ಬೀಳುತ್ತೆ ಎಂದರು.
ಮೊನ್ನೆ ವಿಲ್ಸನ್ ಗಾರ್ಡನ್ನಲ್ಲಿ ಮನೆಯಲ್ಲಿ ಸ್ಫೋಟ ಆಯ್ತು. ಇದೆಲ್ಲ ಬೆಂಗಳೂರಿಗೆ ಶೋಭೆ ತರುವಂತಹದಲ್ಲ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡುತ್ತೇವೆ. ಬಾಡಿಗೆ ಮಾತ್ರ ತೆಗೆದುಕೊಳ್ಳುತ್ತೀರಾ ಅಂದರೆ ಸೇಫ್ಟಿ ಮಾಡಬೇಕು. ಸೇಫ್ಟಿ ಮಾಡಿಕೊಳ್ಳಲಿಲ್ಲ ಅಂದರೆ ಕಟ್ಟಡ ಮಾಲೀಕರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಇನ್ನು ನಿನ್ನೆ ಘಟನಾ ಸ್ಥಳಕ್ಕೆ ಗೃಹಸಚಿವ ಪರಮೇಶ್ವರ್, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಶಾಸಕರಾದ ಆರ್‌ವಿ ದೇವರಾಜ್, ಉದಯ್ ಗರುಡಾಚಾರ್ ಸೇರಿದಂತೆ ಎಲ್ಲರೂ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳಕ್ಕೆ ಬಂದಿದ್ದ ಸಚಿವ ಜಮೀರ್ ಅಹ್ಮದ್ ಖಾನ್, ಮೃತರ ಕುಟುಂಬಕ್ಕೆ ವೈಯಕ್ತಿಯವಾಗಿ ಐದು ಲಕ್ಷ ರೂ. ಪರಿಹಾರ ಘೋಷಿಸಿದ್ದು, ಸರ್ಕಾರದಿಂದಲೂ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.