ನಾಳೆಯಿಂದ ಹೆಬ್ಬಾಳ ಫ್ಲೈಓವರ್ ರ್ಯಾಂಪ್ ವಾಹನ ಸಂಚಾರಕ್ಕೆ ಮುಕ್ತ: ಮೇಖ್ರಿ ಸರ್ಕಲ್ ಗೆ ಕಂಟಕ
ಬೆಂಗಳೂರಿನ ಹೆಬ್ಬಾಳದ ಹೊಸ ಮೇಲ್ಸೇತುವೆ ರ್ಯಾಂಪ್ ಸೋಮವಾರ ಉದ್ಘಾಟನೆಗೊಳ್ಳಲಿದ್ದು, ಇದರಿಂದ ಹೆಬ್ಬಾಳದ ಟ್ರಾಫಿಕ್ ದಟ್ಟಣೆ ಶೇಕಡಾ 30 ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಆದರೆ, ಮೇಖ್ರಿ ಸರ್ಕಲ್‌ನಲ್ಲಿ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ. ಇನ್ನು ಹೊಸ ಮೇಲ್ಸೇತುವೆ ಎಷ್ಟು ಅನುದಾನದಲ್ಲಿ ನಿರ್ಮಿಸಲಾಗಿದೆ. ಇದರ ಅನುಕೂಲ ಅನಾನುಕೂಲಗಳೇನು ಎನ್ನುವ ಮಾಹಿತಿ ಇಲ್ಲಿದೆ.

ಬೆಂಗಳೂರು, (ಆಗಸ್ಟ್ 17): ಹೆಬ್ಬಾಳದ ಹೊಸ ಮೇಲ್ಸೇತುವೆ ರ್ಯಾಂಪ್ (Hebbal flyover loop) ನಾಳೆ ಅಂದರೆ ಸೋಮವಾರದಿಂದ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ. ಈಗಾಗಲೇ 2 ದಿನಗಳ ಟ್ರಯಲ್ ರನ್ ನಡೆಸಲಾಗಿದ್ದು, ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೆಬ್ಬಾಳದ ಹೊಸ ಮೇಲ್ಸೇತುವೆ ರ್ಯಾಂಪ್ ಅನ್ನು ಉದ್ಘಾಟಿಸಲಿದ್ದಾರೆ. ನಾಗವಾರದಿಂದ ಬರುವ ವಾಹನಗಳು ರ್ಯಾಂಪ್ ಮೂಲಕ ಸುಲಭವಾಗಿ ಸಂಚರಿಸಬಹುದಾಗಿದೆ. ಇದರಿಂದ ಹೆಬ್ಬಾಳದ ಶೇಕಡಾ 30ರಷ್ಟು ಟ್ರಾಫಿಕ್ ದಟ್ಟಣೆ ನಿವಾರಣೆಯಾಗುವ ನಿರೀಕ್ಷೆ ಇದೆ.ಆದ್ರೆ, ಇದರಿಂದ ಮೆಖ್ರಿ ಸರ್ಕಲ್‌ನಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗಬಹುದು ಎಂದು ಟ್ರಯಲ್ ರನ್‌ನಲ್ಲಿ ತಿಳಿದುಬಂದಿದೆ.
700 ಮೀಟರ್ ಉದ್ದದ ಹೆಬ್ಬಾಳ ಪ್ಲೈ ಓವರ್ ಸುಮಾರು 80 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಈ ಫ್ಲೈಓವರ್ ಕೆ.ಆರ್ ಪುರಂ (KR Puram) ಕಡೆಯಿಂದ ಮೇಖ್ರೀ ಸರ್ಕಲ್‌ವರೆಗೆ (Mekhri Circle) ನಿರ್ಮಾಣ ಮಾಡಲಾಗಿದೆ. ಇದರ ಕಾಮಗಾರಿಯು 2023ರಲ್ಲಿ ಆರಂಭ ಆಗಿದ್ದು, ಒಂದೂವರೆ ವರ್ಷಗಳ ಬಳಿಕ ಫ್ಲೈಓವರ್ ಕಾರ್ಯ ಪೂರ್ಣಗೊಂಡಿದ್ದು, ನಾಳೆ ಬೆಳಗ್ಗೆ 9 ಗಂಟೆಗೆ ಫೈಓವರ್ ಉದ್ಘಾಟನೆ ಆಗಲಿದೆ. ಹೀಗಾಗಿ ಫ್ಲೈಓವರ್ ರ‍್ಯಾಂಪ್‌ಗೆ ಹೂವುಗಳ ಸರಮಾಲೆ ಹಾಕಿ ಸಿಂಗರಿಸಲಾಗುತ್ತಿದೆ. ಈ ಫ್ಲೈಓವರ್‌ನಿಂದ ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಲಿದೆ.
ಇದನ್ನೂ ಓದಿ: ಹೆಬ್ಬಾಳ ಫ್ಲೈ ಓವರ್‌ನ ಲೂಪ್ ರಾಂಪ್ ಪೂರ್ಣ: ಟ್ರಾಫಿಕ್ ಸಮಸ್ಯೆಗೆ ಮುಕ್ತಿ
ಮೇಖ್ರಿ ಸರ್ಕಲ್ ಬಳಿ ಜಾಮ್
ಹೆಬ್ಬಾಳ ಜಂಕ್ಷನ್‌ನಲ್ಲಿ ರಾಂಪ್ ನಿರ್ಮಾಣದಿಂದ ಟ್ರಾಫಿಕ್ ಕಡಿಮೆಯಾಗಲಿದೆ. ಆದರೆ, ಮೆಖ್ರಿ ಸರ್ಕಲ್‌ನಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆಯಿದೆ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ. “ರಾಂಪ್ ತೆರೆಯುವುದರಿಂದ ವಾಹನಗಳು ಹೆಬ್ಬಾಳ ಜಂಕ್ಷನ್ ಅನ್ನು ಸುಲಭವಾಗಿ ದಾಟಲು ಸಹಾಯವಾಗುತ್ತದೆ. ಆದರೆ, ಟ್ರಯಲ್ ರನ್ ಸಮಯದಲ್ಲಿ, ಮೇಖ್ರಿ ಸರ್ಕಲ್ ಅಂಡರ್‌ಪಾಸ್ ಬಳಿ ಟ್ರಾಫಿಕ್ ಜಾಮ್ ಉಂಟಾಗುವುದನ್ನು ನಾವು ಗಮನಿಸಿದ್ದೇವೆ. ಇದು ಇತರ ರಸ್ತೆಗಳ ಮೇಲೆ ಪರಿಣಾಮ ಬೀರಿತು” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗಾಗಿ ಮೇಖ್ರಿ ಸರ್ಕಲ್ ಬಳಿ ರಸ್ತೆ ವಿಸ್ತರಣೆ ಮಾಡುವುದು ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಮೇಖ್ರಿ ಸರ್ಕಲ್ ರಸ್ತೆಯನ್ನು ವಿಸ್ತರಿಸಲು ಬಿಬಿಎಂಪಿ ಈಗಾಗಲೇ ರಕ್ಷಣಾ ಇಲಾಖೆಗೆ ಸೇರಿದ ಜಾಗವನ್ನು ಗುರುತಿಸಿದೆ. ರಸ್ತೆ ವಿಸ್ತರಣೆಯಾದರೆ, ಆರ್.ಟಿ.ನಗರ, ಜಯಮಹಲ್ ಮತ್ತು ವಸಂತ ನಗರದ ಕಡೆಗೆ ಹೋಗುವ ವಾಹನಗಳು ಮೇಖ್ರಿ ಸರ್ಕಲ್‌ನಲ್ಲಿ ಫ್ರೀ ಲೆಫ್ಟ್ ತೆಗೆದುಕೊಳ್ಳಬಹುದು. ಇದರಿಂದ ಟ್ರಾಫಿಕ್ ಕಡಿಮೆಯಾಗುತ್ತದೆ.
ಏರ್‌ಪೋರ್ಟ್, ನಾಗವಾರ (ಹೊಸ ರಾಂಪ್ ಮೂಲಕ) ಮತ್ತು ಭೂಪಸಂದ್ರದಿಂದ ಬರುವ ಟ್ರಾಫಿಕ್ ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿ ಸೇರುವುದರಿಂದ ಅಲ್ಲಿಯೂ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆಸ್ಪತ್ರೆ ಬಳಿಯಿರುವ ಬಸ್ ನಿಲ್ದಾಣಗಳನ್ನು ಸ್ಥಳಾಂತರಿಸುವ ಸಾಧ್ಯತೆಯಿದೆ. ಆದರೆ, ಎರಡು ವಾರಗಳ ಕಾಲ ಟ್ರಾಫಿಕ್ ಗಮನಿಸಿದ ನಂತರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.




