ಬೆಂಗಳೂರು: ಹಲವು ಸಾಫ್ಟ್‌ವೇರ್ ಕಂಪನಿಗಳ ಕಚೇರಿ ಇರುವ ನಗರದ ಬಾಗಮನೆ ಟೆಕ್ಪಾರ್ಕ್ನಲ್ಲಿ (Bagmane Tech Park) ಶನಿವಾರ ರಾತ್ರಿ 10 ಗಂಟೆ ವೇಳೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಶಾರ್ಟ್ ಸರ್ಕೀಟ್ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿ ನಂದಿಸಲು ಬಂದಿದ್ದ ಅಗ್ನಿಶಾಮಕ ದಳದ ಸಿಬ್ಬಂದಿಯ ಪೈಕಿ ಒಬ್ಬರಿಗೆ ತೀವ್ರ ಗಾಯಗಳಾಗಿವೆ. ಬೆಂಕಿ ನಂದಿಸುವ ವೇಳೆ ಆಯತಪ್ಪಿ 4ನೇ ಅಂತಸ್ತಿನಿಂದ ಕೆಳಗೆಬಿದ್ದ ಮಹದೇವಪುರ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ವಿನಯ್ ಕುಮಾರ್ ಅವರ ಕೈಕಾಲು ಮತ್ತು ತಲೆಯ ಭಾಗಕ್ಕೆ ಗಾಯವಾಗಿದೆ. ಅವರನ್ನು ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. 4ನೇ ಮಹಡಿಯಿಂದ ಕೆಳಗೆ ಬಿದ್ದ ರಭಸಕ್ಕೆ ವಿನಯ್ ಕುಮಾರ್ ಅವರ ಕೈ, ಕಾಲು ಹಾಗೂ ತಲೆಗೆ ಪೆಟ್ಟು ಬಿದ್ದಿದೆ. ಪ್ರಸ್ತುತ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬೆಂಗಳೂರಿನ ಮಾರತ್ತಹಳ್ಳಿಯಲ್ಲಿರುವ ಸಾಫ್ಟ್‌ವೇರ್ ಕಂಪನಿ ‘ಲೊಗ್ಯಾಟೋ’ದ 5 ಮತ್ತು 6 ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ರಾತ್ರಿಯೇ ಸ್ಥಳಕ್ಕೆ ಧಾವಿಸಿದ 12 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯಚರಣೆ ಆರಂಭಿಸಿದವು. ಬೆಂಕಿಯಿಂದ ಆಗಿರುವ ನಷ್ಟದ ಅಂದಾಜಿನ ನಿಖರ ಮಾಹಿತಿ ಲಭ್ಯವಾಗಿಲ್ಲ. 11 ಅಗ್ನಿಶಾಮಕ ವಾಹನಗಳು ಮತ್ತು 30 ಸಿಬ್ಬಂದಿ ಸತತ 3 ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. 7 ಅಂತಸ್ತಿನ ಸಾಫ್ಟ್‌ವೇರ್ ಕಂಪನಿಯ ಕಟ್ಟಡ ದುರಸ್ತಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ 5, 6ನೇ ಅಂತಸ್ತಿನಲ್ಲಿ ದುರಸ್ತಿಗೆ ಬೇಕಾದ ವಸ್ತುಗಳನ್ನು ಇರಿಸಲಾಗಿತ್ತು. ಶಾರ್ಟ್ಸರ್ಕೀಟ್ನಿಂದಾಗಿ ಕಿಡಿಬಿದ್ದು ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಐದು ಮತ್ತು ಆರನೇ ಅಂತಸ್ತಿನಲ್ಲಿ ಥರ್ಮಾಕೋಲ್ ಸೇರಿದಂತೆ ಒಳಾಂಗಣ ವಿನ್ಯಾಸಕ್ಕೆ ಬಳಸುವ ವಸ್ತುಗಳು ಇದ್ದವು. ರಾತ್ರಿ 10 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದರು. ಅಗ್ನಿ ನಂದಿಸುವ ಕಾರ್ಯಾಚರಣೆ ಸತತ ಮೂರು ಗಂಟೆಗಳ ಕಾಲ ನಿರಂತರವಾಗಿ ನಡೆಯಿತು. ಏರಿಯಲ್ ಲ್ಯಾಡರ್ ಮುಖಾಂತರ ಐದು ಮತ್ತು ಆರನೇ ಅಂತಸ್ಥಿನಲ್ಲಿ ಬೆಂಕಿ ನಂದಿಸುವ ಕಾರ್ಯ ಆರಂಭವಾಯಿತು. ಮಾರತ್ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅಗ್ನಿ ಅನಾಹುತ ಸಂಭವಿಸಿದ ಕಟ್ಟದ ವಿಡಿಯೊ ಇಲ್ಲಿದೆ.
ಇದನ್ನೂ ಓದಿ: Crime News: ಬೈಕ್ ಕಳ್ಳರ ಬಂಧನ, ಪತ್ರಕರ್ತನ ವಿರುದ್ಧ ಎಫ್ಐಆರ್ ದಾಖಲು, ನಕಲಿ ಸಿಮೆಂಟ್ ಘಟಕದ ಮೇಲೆ ಪೊಲೀಸರ ದಾಳಿ