‘ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ’: ಕಾಮನ್‌ವೆಲ್ತ್ ಮಹಿಳಾ ಸಂಸದೀಯರ ಮೊದಲ ಸಮ್ಮೇಳನದಲ್ಲಿ ಸಿಎಂ ಡಿಕೆಶಿ
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕಾಮನ್‌ವೆಲ್ತ್ ಮಹಿಳಾ ಸಂಸದೀಯಪಟುಗಳ ಭಾರತ ಪ್ರಾದೇಶಿಕ ವಿಭಾಗದ ಮೊದಲ ಸಮ್ಮೇಳನವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಸಿಎಂ ಡಿ.ಕೆ. ಶಿವಕುಮಾರ್ ಉದ್ಘಾಟಿಸಿ, ಮಹಿಳಾ ಸಬಲೀಕರಣ ಮತ್ತು ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ಪಾತ್ರವನ್ನು ಶ್ಲಾಘಿಸಿದ್ದಾರೆ. ಕಾರ್ಯಕ್ರಮದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು, ನವೆಂಬರ್ 17: ಮಹಿಳೆಯರನ್ನು ಗೌರವಿಸೋದು ನಮ್ಮ ಸಂಸ್ಕೃತಿಯಾಗಿದ್ದು, ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾಮನ್ವೆಲ್ತ್ ಮಹಿಳಾ ಸಂಸದೀಯಪಟುಗಳ ಭಾರತ ಪ್ರಾದೇಶಿಕ ವಿಭಾಗದ ಮೊದಲ ಸಮ್ಮೇಳನವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಬಲಿಷ್ಠರಾಗಬೇಕೆಂಬ ನಿಟ್ಟಿನಲ್ಲಿ ಶಕ್ತಿ, ಗೃಹಲಕ್ಷ್ಮಿಯಂತಹ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ವಿಪಕ್ಷಗಳ ವಿರೋಧದ ನಡುವೆಯೂ ಯೋಜನೆ ಮುಂದುವರಿದ್ದೇವೆ ಎಂದು ತಿಳಿಸಿದ್ದಾರೆ.
‘ಸೇನೆಯಿಂದ ಹಿಡಿದು ಅಂತರಿಕ್ಷದಲ್ಲೂ ಮಹಿಳೆಯರ ಛಾಪು’
ಮಹಿಳಾ ಸಮಾನತೆ ಬಗ್ಗೆ 12 ಶತಮಾನದಲ್ಲಿಯೇ ಚರ್ಚೆ ನಡೆಸಲಾಗಿತ್ತು. ಅನುಭವ ಮಂಟಪದಲ್ಲಿ ಮಹಿಳೆಯರಿಗೂ ಅವಕಾಶ ಸಿಕ್ಕಿತ್ತು. ಮಹಿಳೆಯರ ಭಾಗಿಯಿಂದ ದೇಶದ ಪ್ರಜಾಪ್ರಭುತ್ವ ಮತ್ತಷ್ಟು ಬಲಗೊಳ್ಳಲಿದೆ. ಆಧುನಿಕ ಭಾರತದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿದ್ದಾರೆ. ಸೇನೆಯಿಂದ ಹಿಡಿದು ಅಂತರಿಕ್ಷದಲ್ಲೂ ಛಾಪು ಮೂಡಿಸಿದ್ದಾರೆ ಎಂದು ಲೋಕಸಭಾ ಸ್ಪೀಕರ್ ಓಂಬಿರ್ಲಾ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: 29ನೇ ಆವೃತ್ತಿಯ ಬೆಂಗಳೂರು ಟೆಕ್ ಸಮಿಟ್ಗೆ ಸಿಎಂ ಡಿಕೆ ಶಿವಕುಮಾರ್ ಚಾಲನೆ
‘ಸಂಖ್ಯೆ ಆಧಾರದ ಮೇಲೆ ಮಹಿಳಾ ಸಬಲೀಕರಣ ಅಳೆಯಲಾಗಲ್ಲ’
ಮಹಿಳಾ ಸಬಲೀಕರಣ ಮತ್ತು ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಸಂಸದೀಯ ಸಂಸ್ಥೆಗಳು ಕೇವಲ ಪ್ರಾತಿನಿಧ್ಯಕ್ಕೆ ಸೀಮಿತವಾಗದೆ ಸೂಕ್ಷ್ಮತೆ, ಸ್ಪಂದನೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಕಾರ್ಯವೈಖರಿ ಹೊಂದಿರಬೇಕು. ಮಹಿಳೆಯರ ಸಂಖ್ಯೆಯ ಆಧಾರದ ಮೇಲೆ ಮಾತ್ರ ಮಹಿಳಾ ಸಬಲೀಕರಣವನ್ನು ಅಳೆಯಲು ಸಾಧ್ಯವಿಲ್ಲ. ಶಾಸಕಾಂಗದ ಚರ್ಚೆಗಳಲ್ಲಿ ಅರ್ಥಪೂರ್ಣವಾಗಿ ಭಾಗವಹಿಸುವುದು, ನೀತಿ ನಿರ್ಧಾರಗಳ ಮೇಲೆ ಪ್ರಭಾವ ಬೀರುವುದು ಸಬಲೀಕರಣದ ಪ್ರಮುಖ ಅಂಶಗಳಾಗಿವೆ ಎಂದು CWP ಭಾರತ ವಲಯದ ಅಧ್ಯಕ್ಷೆ ಡಿ. ಪುರಂದೇಶ್ವರಿ ಅಭಿಪ್ರಾಯಪಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್, ರಾಜ್ಯಸಭೆಯ ಉಪಸಭಾಪತಿ ಹರಿವಂಶ್, ವಿಧಾನಸಭಾಧ್ಯಕ್ಷ ಜಿ. ಎಸ್ ಪಾಟೀಲ, ವಿಧಾನಪರಿಷತ್ ಸಭಾಪತಿ ಸಲೀಂ ಅಹ್ಮದ್, ವಿಧಾನಸಭೆ ಉಪಾಧ್ಯಕ್ಷ ಮಂಕಾಳ ವೈದ್ಯ, ಉಪಸಭಾಪತಿ ಉಮಾಶ್ರೀ ಉಪಸ್ಥಿತರಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




