ರಾಜ್ಯದಲ್ಲಿ ತಗ್ಗಿದ ಮಳೆ ಪ್ರಮಾಣ: ಮುಂದಿನ ಐದು ದಿನಗಳ ಹವಾಮಾನ ವರದಿ ಹೇಗಿರಲಿದೆ?
ಕರಾವಳಿ ಪ್ರದೇಶ ರೆಡ್ ಅಲರ್ಟ್ ನಿಂದ ಆರೆಂಜ್ ಅಲರ್ಟ್ ಗೆ ಮರಳಲಿದೆ. ಕರಾವಳಿಯಲ್ಲಿ ಇಂದಿನಿಂದ ಮೂರು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು ಕರಾವಳಿಯಲ್ಲಿ ಕೊನೆಯ ಎರಡು ದಿನ ಯಲ್ಲೋ ಅಲರ್ಟ್ ಇರಲಿದೆ.
ಬೆಂಗಳೂರು: ಮಹಾಮಳೆಗೆ ತತ್ತರಿಸಿದ್ದ ರಾಜ್ಯಕ್ಕೆ ಸದ್ಯ ಕೊಂಚ ರಿಲೀಫ್ ಸಿಗಲಿದೆ. ರಾಜ್ಯದಲ್ಲಿ ಮಳೆ ಪ್ರಮಾಣ ತಗ್ಗಿದ್ದು ರೆಡ್ ಅಲರ್ಟ್ ನಿಂದ ಆರೆಂಜ್ ಅಲರ್ಟ್ ಗೆ ಕರಾವಳಿ ಪ್ರದೇಶ ಮರಳಲಿದೆ ಎಂದು ರಾಜ್ಯ ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಮುಂದಿನ ಐದು ದಿನಗಳ ಹವಾಮಾನ ವರದಿ ಹೇಗಿರಲಿದೆ
ಕರಾವಳಿ ಪ್ರದೇಶ ರೆಡ್ ಅಲರ್ಟ್ ನಿಂದ ಆರೆಂಜ್ ಅಲರ್ಟ್ ಗೆ ಮರಳಲಿದೆ. ಕರಾವಳಿಯಲ್ಲಿ ಇಂದಿನಿಂದ ಮೂರು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು ಕರಾವಳಿಯಲ್ಲಿ ಕೊನೆಯ ಎರಡು ದಿನ ಯಲ್ಲೋ ಅಲರ್ಟ್ ಇರಲಿದೆ. ಇಂದು ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಬೆಳಗಾವಿ, ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಹಾಗೂ ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರಿನಲ್ಲಿ ಮುಂದಿನ ಮೂರು ದಿನ ಆರೆಂಜ್ ಅಲರ್ಟ್ ಇರಲಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಹಾಸನ ಜಿಲ್ಲೆಗೆ ಮಾತ್ರ ಯಲ್ಲೋ ಅಲರ್ಟ್ ಇರಲಿದೆ. ಉಳಿದಂತೆ ರಾಜ್ಯದ ಯಾವ ಜಿಲ್ಲೆಗಳಿಗೂ ಯಾವುದೇ ಅಲರ್ಟ್ ಇಲ್ಲ ಎಂದು ರಾಜ್ಯ ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಮತ್ತೊಂದೆಡೆ ಉಡುಪಿಯಲ್ಲಿ ಭಾರಿ ಮಳೆ ಎಡೆಬಿಡದೆ ಸುರಿಯುತ್ತಿದೆ. ಮಳೆಗೆ ಮೀನುಗಾರಿಕಾ ಉದ್ಯಮ ತತ್ತರಿಸಿದೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಜಿಲ್ಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ನಿರಂತರ ಮಳೆಯಿಂದಾಗಿ ಜನರು ರೋಸಿ ಹೋಗಿದ್ದಾರೆ. ಆದ್ರೆ ಕೃಷಿಕರಿಗೆ ತುಂತುರು ಮಳೆ ಖುಷಿ ನೀಡಿದೆ. ನಾಡ ದೋಣಿ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಆಳ ಸಮುದ್ರ ಮೀನುಗಾರಿಕೆಯನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ. ಇನ್ನೂ ಎರಡು ದಿನ ಆಳ ಸಮುದ್ರಕ್ಕೆ ಹೋಗದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕರಾವಳಿ ಭಾಗದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ
ರಾಜ್ಯದ ಮಳೆ ಮತ್ತು ಮುಂದಿನ 48 ಗಂಟೆಗಳ ಹವಾಮಾನ ವರದಿ ಪ್ರಕಾರ ನೈರುತ್ಯ ಮುಂಗಾರು ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕಾಗಿದೆ. ನಿನ್ನೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಮಳೆಯಾಗಿದೆ. ಅತಿ ಭಾರಿ ಮಳೆಯ ಪ್ರಮಾಣ ಉಡುಪಿ ಜಿಲ್ಲೆ ಕೊಲ್ಲೂರು, ಕೊಡಗು ಜಿಲ್ಲೆಯ ಭಾಗಮಂಡಲ ತಲಾ 16 ಸೆ.ಮಿ ಮಳೆ ದಾಖಲಾಗಿದೆ. ಭಾರಿ ಮಳೆಯ ಪ್ರಮಾಣ ಕ್ಯಾಸಲ್ ರಾಕ್, ಸಿದ್ದಾಪುರ, ಉಡುಪಿ, ಮೂರ್ನಾಡು ಕೊಡಗು ಜಿಲ್ಲೆ ತಲಾ 11 ಸೆ.ಮಿ, ನಿಲ್ಕುಂದ್ , ಕೋಟ, ಮಂಗಳೂರು ವಿಮಾನ ನಿಲ್ದಾಣ, ಸೋಮವಾರಪೇಟೆ ತಲಾ 10 ಸೆ.ಮೀ, ಪಣಂಬೂರು, ಧರ್ಮಸ್ಥಳ, ಬೆಳ್ತಂಗಡಿ, ಸಿದ್ದಾಪುರ, ಕುಂದಾಪುರ, ನಾಪೋಕ್ಲು ತಲಾ 9 ಸೆ.ಮಿ. ಹೊನ್ನಾವರ, ಪುತ್ತೂರು,ಕಳಸ, ಕೊಪ್ಪ, ಹುಂಚದಕಟ್ಟೆ ತಲಾ 8 ಸೆ.ಮಿ ಮಳೆಯಾಗಿದೆ. ಮುಂದಿನ 24 ಘಂಟೆಗಳು ರಾಜ್ಯಾದ್ಯಂತ ಬಹುತೇಕ ಕಡೆಗಳಲ್ಲಿ ಮಳೆ/ ಗುಡುಗಿನಿಂದ ಕೂಡಿದ ಮಳೆಯಾಗುವ ಬಹಳಷ್ಟು ಸಾಧ್ಯತೆಯಿದೆ.
ಹಾಸನ ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾಗಿದೆ. ಕಾವೇರಿ ನದಿ ದಂಡೆಯ ರಾಮನಾಥಪುರ ಗ್ರಾಮದಲ್ಲಿ ಹಲವು ಮನೆಗಳು ಜಲಾವೃತಗೊಂಡಿವೆ. ಮಳೆಯ ಪ್ರಮಾಣ ಹೆಚ್ಚಾಗಿ ರಾಜಕಾಲುವೆ ಬಂದ್ ಆಗಿದ್ದರಿಂದ ಮನೆಗಳಿಗೆ ಮಳೆನೀರು ನುಗ್ಗಿದೆ.
ಜೀವ ಪಣಕ್ಕಿಟ್ಟು ಪ್ರವಾಹ ದಾಟುತ್ತಿರುವ ಗ್ರಾಮಸ್ಥರು
ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ಮಳೆಯಿಂದ ಗ್ರಾಮದ 400 ಕುಟುಂಬಕ್ಕೆ ಜಲ ದಿಗ್ಬಂಧನವಾಗಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ನಾಪೋಕ್ಲು ಬಳಿ ಚೆರಿಯಪರಂಬು ಗ್ರಾಮದಲ್ಲಿ ಗ್ರಾಮಸ್ಥರು ಜೀವ ಪಣಕ್ಕಿಟ್ಟು ಪ್ರವಾಹ ದಾಟುತ್ತಿದ್ದಾರೆ. ಪೊಲೀಸ್ ಠಾಣೆಯಿಂದ ಮರಳು ತೆಪ್ಪ ತರಲಾಗಿದೆ. ಮರಳು ತೆಪ್ಪದ ಮೂಲಕ ಗ್ರಾಮಸ್ಥರು ಓಡಾಡುತ್ತಿದ್ದಾರೆ. ಹೀಗಾಗಿ ಸ್ಥಳೀಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
Published On - 3:45 pm, Sun, 7 August 22