Ganesha Festival: ಗಣೇಶೋತ್ಸವಕ್ಕೆ ಈ ವರ್ಷ ಸರ್ಕಾರದ ನಿರ್ಬಂಧವಿಲ್ಲ; ಆರ್ ಅಶೋಕ್
Ganesh Chaturthi: ಕೊವಿಡ್ ಪಿಡುಗು ರಾಜ್ಯದಲ್ಲಿ ಆವರಿಸಿದ್ದ ಸಂದರ್ಭದಲ್ಲಿ ವಾರ್ಡ್ಗೆ ಒಂದು ಗಣಪತಿ ಕೂಡಿಸಬೇಕು ಎಂದು ಸರ್ಕಾರ ನಿರ್ಬಂಧ ವಿಧಿಸಿತ್ತು.
ಬೆಂಗಳೂರು: ಕರ್ನಾಟಕದಲ್ಲಿ ಈ ವರ್ಷ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಹಾಗೂ ಗಣೇಶೋತ್ಸವಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ವಿಧಾನಸೌಧದಲ್ಲಿ ಸೋಮವಾರ (ಆಗಸ್ಟ್ 8) ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶೋತ್ಸವದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತನಾಡಿದ್ದೇನೆ. ರಾಜ್ಯದಲ್ಲಿ ಈ ಹಿಂದೆ ಆಚರಿಸುತ್ತಿದ್ದ ರೀತಿಯಲ್ಲಿಯೇ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಲಿದೆ. ಸಾರ್ವಜನಿಕರು ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ಕೂಡಿಸಲು ಗಮನಹರಿಸಬೇಕು ಎಂದು ವಿನಂತಿಸಿದರು. ಕೊವಿಡ್ ಪಿಡುಗು ರಾಜ್ಯದಲ್ಲಿ ಆವರಿಸಿದ್ದ ಸಂದರ್ಭದಲ್ಲಿ ವಾರ್ಡ್ಗೆ ಒಂದು ಗಣಪತಿ ಕೂಡಿಸಬೇಕು ಎಂದು ಸರ್ಕಾರ ನಿರ್ಬಂಧ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಚಾಮರಾಜಪೇಟೆ ಮೈದಾನ: ಯಾರೂ ಅನುಮತಿ ಕೋರಿಲ್ಲ
ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಕುರಿತು ಪ್ರತಿಕ್ರಿಯಿಸಿದ ಅವರು, ಮೈದಾನವು ಕಂದಾಯ ಇಲಾಖೆಗೆ ಸೇರಿದ್ದು ಎಂದು ಪಾಲಿಕೆ ಘೋಷಿಸಿದೆ. ಮೈದಾನದ ಬಗ್ಗೆ ದಾಖಲೆ ಇರುವವರು ಸಲ್ಲಿಸಬಹುದು ಎಂದು ಈ ನಾವು ಕೇಳಿದ್ದೆವು. 1964ರಲ್ಲಿ ಮೈದಾನ ಕಂದಾಯ ಇಲಾಖೆಯ ಆಸ್ತಿಯಾಗಿತ್ತು. ಸುಪ್ರೀಂಕೋರ್ಟ್ ಆದೇಶವಿದೆ ಎಂದು ವಕ್ಫ್ ಮಂಡಳಿ ಈ ಹಿಂದೆ ಹೇಳಿತ್ತು. ಆದರೆ ಆ ದಾಖಲೆಯನ್ನು ವಕ್ಫ್ ಬೋರ್ಡ್ ಈವರೆಗೆ ಕೊಟ್ಟಿಲ್ಲ. ಹೀಗಾಗಿ ಮೈದಾನವು ಇಂದಿಗೂ ಅದು ಕಂದಾಯ ಇಲಾಖೆಯ ಸುಪರ್ದಿಯಲ್ಲಿಯೇ ಇದೆ. ಯಾವ ಆಚರಣೆಗೆ ಮೈದಾನ ಕೊಡಬೇಕು ಎನ್ನುವುದು ಕಂದಾಯ ಇಲಾಖೆಯ ವಿವೇಚನೆಗೆ ಬಿಟ್ಟ ಸಂಗತಿ ಎಂದು ಹೇಳಿದರು.
ಈದ್ಗಾ ಮೈದಾನದ ವಿಚಾರದಲ್ಲಿ ಯಾರೂ ಗೊಂದಲ ಸೃಷ್ಟಿಸಬೇಡಿ ಎಂದು ವಿನಂತಿಸಿದ ಅವರು, ಈ ವಿಚಾರದಲ್ಲಿ ಕಂದಾಯ ಇಲಾಖೆಯು ಕೂಲಂಕಷವಾಗಿ ಪರಿಶೀಲಿಸಿ ನಿರ್ಧರಿಸುತ್ತದೆ. ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡಲು ಯಾರೂ ಅನುಮತಿ ಕೇಳಿಲ್ಲ. ಸ್ವಾತಂತ್ರ್ಯ ದಿನಾಚರಣೆಗೆ ಯಾವುದಾದರೂ ಒಂದು ಸಂಘಟನೆ ಅಥವಾ ಸಂಘಕ್ಕೆ ಅವಕಾಶ ಕೊಡಬಹುದು. ಯಾವುದೇ ಆಚರಣೆ ಮಾಡಲು ಅನುಮತಿ ಪಡೆಯಬೇಕು ಎಂದು ಸ್ಪಷ್ಟಪಡಿಸಿದರು.
ಮಳೆ ಪರಿಹಾರಕ್ಕೆ ಸೂಚನೆ
ಕರ್ನಾಟಕದ ವಿವಿಧೆಡೆ ವ್ಯಾಪಕವಾಗಿ ಮಳೆಯಾಗಿದ್ದು, ಮಳೆ ನಿಂತ ಮೇಲೆ ಹಾನಿಯ ಅಂದಾಜು ಸಿಗುತ್ತದೆ. ಕರ್ನಾಟಕಕ್ಕೆ ಬರಬೇಕಿರುವ ಪರಿಹಾರ ಹಣವನ್ನು ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಫಂಡ್ಗಳ ಮೂಲಕ ಪಡೆಯುತ್ತೇವೆ. ನಿರಾಶ್ರಿತರಿಗೆ ಇಷ್ಟು ದಿನ ಗಂಜಿ ಮಾತ್ರ ನೀಡಲಾಗುತ್ತಿತ್ತು. ಕಾಳಜಿ ಕೇಂದ್ರದಲ್ಲಿ ಚಪಾತಿ, ಅನ್ನ, ಮೊಸರು, ಪಲ್ಯ ಸೇರಿದಂತೆ ಪೌಷ್ಟಿಕ ಆಹಾರ ನೀಡಲು ಸೂಚಿಸಿದ್ದೇನೆ. ಮೊಟ್ಟೆ ತಿನ್ನುವವರಿಗೆ ಅದನ್ನೂ ಒದಗಿಸುತ್ತೇವೆ ಎಂದು ತಿಳಿಸಿದರು.
ಸ್ವಾತಂತ್ರ್ಯ ದಿನಾಚರಣೆ
ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗದಂತೆ ಯಾರು ಬೇಕಾದರೂ ಬಾವುಟ ಹಾರಿಸಬಹುದು. ಆಗಸ್ಟ್ 15ರಂದು ಬಿಜೆಪಿ ಕಾರ್ಯಕರ್ತರು ಕಂಠೀರವ ಕ್ರೀಡಾಂಗಣದವರೆಗೆ ಬೈಕ್ ರ‍್ಯಾಲಿ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.
Published On - 1:54 pm, Mon, 8 August 22