AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ರೋ ಮಾಜಿ ಅಧ್ಯಕ್ಷ ಕೆ ಕಸ್ತೂರಿರಂಗನ್ ನಿಧನ

ಪ್ರಸಿದ್ಧ ವಿಜ್ಞಾನಿ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಾಜಿ ಅಧ್ಯಕ್ಷ ಡಾ. ಕೆ. ಕಸ್ತೂರಿರಂಗನ್ (84) ಅವರು ನಿಧನರಾಗಿದ್ದಾರೆ. ಬೆಂಗಳೂರಿನಲ್ಲಿ ನಿಧನರಾದ ಅವರು 1994 ರಿಂದ 2003 ರವರೆಗೆ ಇಸ್ರೋ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಅವರು ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ.

ಇಸ್ರೋ ಮಾಜಿ ಅಧ್ಯಕ್ಷ ಕೆ ಕಸ್ತೂರಿರಂಗನ್ ನಿಧನ
ಕೆ. ಕಸ್ತೂರಿರಂಗನ್
ವಿವೇಕ ಬಿರಾದಾರ
|

Updated on:Apr 25, 2025 | 2:36 PM

Share

ಬೆಂಗಳೂರು, ಏಪ್ರಿಲ್​ 25: ಇಸ್ರೋ (ISRO) ಮಾಜಿ ಅಧ್ಯಕ್ಷ, ಪದ್ಮಶ್ರೀ ಕೆ.ಕಸ್ತೂರಿರಂಗನ್ (K.Kasturirangan) (84) ವಿಧಿವಶರಾಗಿದ್ದಾರೆ. ಅನಾರೋಗ್ಯಕ್ಕೆ ಒಳಗಾಗಿದ್ದ ಕೆ.ಕಸ್ತೂರಿರಂಗನ್ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಇಂದು ಬೆಳ್ಳಗ್ಗೆ 10.43ಕ್ಕೆ ಕೊನೆಯುಸಿರು ಎಳೆದಿದ್ದಾರೆ. ಕೃಷ್ಣಸ್ವಾಮಿ ಕಸ್ತೂರಿರಂಗನ್ ಅವರು 1994ರಿಂದ 2003ರವರೆಗೆ ಇಸ್ರೋ ಅಧ್ಯಕ್ಷರಾಗಿದ್ದರು. ಕೆ. ಕೃಷ್ಣಸ್ವಾಮಿ ಅವರು ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ 9 ವರ್ಷಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದ್ದರು.

ಡಾ. ಕೃಷ್ಣಸ್ವಾಮಿ ಕಸ್ತೂರಿರಂಗನ್ ಅವರು  1940 ಅಕ್ಟೋಬರ್ 24 ರಂದು ಕೇರಳದ ಎರ್ನಾಕುಲಂನಲ್ಲಿ ಜನಿಸಿದರು.  ಡಾ. ಕಸ್ತೂರಿರಂಗನ್ ಅವರು ಬಾಂಬೆ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದರು. 1971 ರಲ್ಲಿ ಅಹಮದಾಬಾದ್‌ನಲ್ಲಿ ಖಗೋಳಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದರು.

ಭಾರತದ ಮೊದಲ ಎರಡು ಪ್ರಾಯೋಗಿಕ ಭೂ ವೀಕ್ಷಣಾ ಉಪಗ್ರಹಗಳಾದ ಭಾಸ್ಕರ-I ಮತ್ತು II ರ ಯೋಜನಾ ನಿರ್ದೇಶಕರಾಗಿದ್ದರು. ಭಾರತೀಯ ರಿಮೋಟ್ ಸೆನ್ಸಿಂಗ್ ಉಪಗ್ರಹ IRS-1A ಯ ನೇತೃತ್ವ ವಹಿಸಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಸಭೆಯ ಸದಸ್ಯರಾಗಿ ಮತ್ತು ಯೋಜನಾ ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಕರಡು ಸಮಿತಿಯ ಅಧ್ಯಕ್ಷತೆ ವಹಿಸಿದ್ದರು. ಹೊಸ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಹೊಂದಿರುವ 12 ಸದಸ್ಯರ ಸ್ಟೀರಿಂಗ್ ಸಮಿತಿಯ ನೇತೃತ್ವ ವಹಿಸಿದ್ದರು. ಇವರ ನೇತೃತ್ವದ ಪಶ್ಚಿಮ ಘಟ್ಟಗಳ ಕಸ್ತೂರಿರಂಗನ್ ಸಮಿತಿ ಪಶ್ಚಿಮ ಘಟ್ಟಗಳ ನೈಸರ್ಗಿಕ ಭೂದೃಶ್ಯದ 59,940 ಚ.ಕಿ.ಮೀ ಪ್ರದೇಶವನ್ನು 2013 ರಲ್ಲಿ ಪರಿಸರ ಸೂಕ್ಷ್ಮ ಎಂದು ಗುರುತಿಸಿತ್ತು.

ಇದನ್ನೂ ಓದಿ
Image
ವಿದ್ಯಾರ್ಥಿಗಳಿಗಾಗಿ 'ಯುವ ವಿಜ್ಞಾನಿ ಕಾರ್ಯಕ್ರಮ' ಪ್ರಾರಂಭಿಸಿದ ಇಸ್ರೋ
Image
ಇಸ್ರೋದ ನೂತನ ಅಧ್ಯಕ್ಷರಾಗಿ ವಿ ನಾರಾಯಣನ್ ನೇಮಕ
Image
2025, ಇಸ್ರೋ ಪಾಲಿಗೆ ಬ್ಯುಸಿ ಕ್ಯಾಲಂಡರ್
Image
ಈ ವರ್ಷ ಇಸ್ರೋ ಮಾಡಿದ ಮಹತ್ವದ ಸಾಧನೆಗಳ ಪಟ್ಟಿ ಇಲ್ಲಿದೆ

ಇವರು ಅಧ್ಯಕ್ಷರಾಗಿದ್ದ ಸಮಯದಲ್ಲಿ ಇಸ್ರೋ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದೆ. ಉಡಾವಣಾ ವಾಹನವಾದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಯಶಸ್ವಿ ಉಡಾವಣೆ ಮತ್ತು ಕಾರ್ಯಾಚರಣೆ ಮತ್ತು ಇತ್ತೀಚೆಗೆ, ಎಲ್ಲ ಪ್ರಮುಖ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್‌ಎಲ್‌ವಿ) ಯ ಮೊದಲ ಯಶಸ್ವಿ ಹಾರಾಟ ಪರೀಕ್ಷೆ ಇವರ ನಾಯಕತ್ವದಲ್ಲೇ ನಡೆದಿದೆ.

ಇದನ್ನೂ ಓದಿ: ಚಂದ್ರಯಾನ-5 ಯೋಜನೆಗೆ ಕೇಂದ್ರ ಅನುಮೋದನೆ: ಇಸ್ರೋ ಅಧ್ಯಕ್ಷ ನಾರಾಯಣನ್

ಕೆ. ಕಸ್ತೂರಿರಂಗನ್​ ಅವರು ವಿಶ್ವಸಂಸ್ಥೆಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣ ಕೇಂದ್ರದ (UN-CSSTE) ಆಡಳಿತ ಮಂಡಳಿ, ಐಐಟಿ ಚೆನ್ನೈನ ಆಡಳಿತ ಮಂಡಳಿ, ರಾಮನ್ ಸಂಶೋಧನಾ ಸಂಸ್ಥೆಯ ಆಡಳಿತ ಮಂಡಳಿ ಮತ್ತು ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯದ ಸಂಶೋಧನಾ ಮಂಡಳಿಯ ಅಧ್ಯಕ್ಷರಾಗಿದ್ದರು.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಮತ್ತು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಖಗೋಳಶಾಸ್ತ್ರ, ಬಾಹ್ಯಾಕಾಶ ವಿಜ್ಞಾನ, ಬಾಹ್ಯಾಕಾಶ ಅನ್ವಯಿಕೆಗಳ ಕ್ಷೇತ್ರಕ್ಕೆ ಸಂಬಂಧಿಸಿದ 200 ಕ್ಕೂ ಹೆಚ್ಚು ಪ್ರಬಂಧಗಳು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು 6 ಪುಸ್ತಕಗಳನ್ನು ಬರೆದಿದ್ದಾರೆ. ಕೆ. ಕಸ್ತೂರಿರಂಗನ್​ ಅವರಿಗೆ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳು ಸಂದಿವೆ.

ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಭಾನುವಾರ (ಏ.27) ರ ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:54 pm, Fri, 25 April 25