ಜನಿವಾರ ವಿವಾದ: ಬೀದರ್‌ನ ಸುಚಿವ್ರತ್ ಕುಲಕರ್ಣಿಗೆ ಸರ್ಕಾರದಿಂದ ಎರಡು ಆಯ್ಕೆ
ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆಗೆ ಅವಕಾಶ ನಿರಾಕರಿಸಲ್ಪಟ್ಟ ಬೀದರ್‌ನ ಸುಚಿವ್ರತ್ ಕುಲಕರ್ಣಿ ಅವರಿಗೆ ಕರ್ನಾಟಕ ಸರ್ಕಾರ ಎರಡು ಆಯ್ಕೆಗಳನ್ನು ನೀಡಿದೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಈ ಬಗ್ಗೆ ವಿದ್ಯಾರ್ಥಿಯನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಸರ್ಕಾರ ನೀಡಿರುವ ಎರಡು ಆಯ್ಕೆಗಳೇನು? ಇಲ್ಲಿದೆ ವಿವರ

ಬೆಂಗಳೂರು, ಏಪ್ರಿಲ್ 25: ಜನಿವಾರ (Janivara) ಹಾಕಿದ್ದಕ್ಕೆ ಸಿಇಟಿ ಪರೀಕ್ಷೆಗೆ (CET Exam) ಅವಕಾಶ ನೀಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷೆಯಿಂದ ವಂಚಿತರಾದ ಬೀದರ್‌ನ (Bidar) ವಿದ್ಯಾರ್ಥಿ ಸುಚಿವ್ರತ್ ಕುಲಕರ್ಣಿ ಅವರಿಗೆ ಸರ್ಕಾರ ಎರಡು ಆಯ್ಕೆಗಳನ್ನು ನೀಡಿದೆ. ಭೌತವಿಜ್ಞಾನ ಹಾಗೂ ರಾಸಯನ ವಿಜ್ಞಾನ ವಿಷಯಗಳಲ್ಲಿ ಪಡೆದ ಸರಾಸರಿ ಅಂಕಗಳನ್ನು ಗಣಿತ ವಿಷಯಕ್ಕೆ ನೀಡುವುದು. ಬೇಡವೆಂದರೆ ಮತ್ತೊಮ್ಮೆ ಪರೀಕ್ಷೆ ಬರೆಯುವ ಅವಕಾಶವನ್ನು ಸರ್ಕಾರ ವಿದ್ಯಾರ್ಥಿ ಮುಂದಿಟ್ಟಿದೆ.
ಈ ಮಾಹಿತಿಯನ್ನು ಸ್ವತಃ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ಅವರು ವಿದ್ಯಾರ್ಥಿ ಸುಚಿವ್ರತ್ ಕುಲಕರ್ಣಿ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ವಿದ್ಯಾರ್ಥಿ ಸುಚಿವ್ರತ್ ಕುಲಕರ್ಣಿ ಆಯ್ಕೆಯ ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಒಪ್ಪಿಗೆ ನೀಡಲಿದೆ ಎಂದು ಸಚಿವರು ಹೇಳಿದ್ದಾರೆ.
ಉಚಿತವಾಗಿ ಸೀಟ್ ಕೊಡಿಸುವುದಾಗಿ ಖಂಡ್ರೆ ಭರವಸೆ
ಪರೀಕ್ಷೆಯಿಂದ ವಂಚಿತನಾದ ವಿದ್ಯಾರ್ಥಿ ಸುಚಿವ್ರತ್ ಕುಲಕರ್ಣಿ ಅವರಿಗೆ ಉಚಿತವಾಗಿ ಇಂಜಿನಿಯರಿಂಗ್ ಸೀಟ್ ಕೊಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಭರವಸೆ ನೀಡಿದ್ದರು. ಘಟನೆ ನಡೆದ ಬಳಿಕ ಸುಚಿವ್ರತ್ ಕುಲಕರ್ಣಿ ಮನೆಗೆ ಭೇಟಿ ನೀಡಿದ್ದ ಸಚಿವ ಈಶ್ವರ್ ಖಂಡ್ರೆ ವಿದ್ಯಾರ್ಥಿ ಹಾಗೂ ಕುಟುಂಬದ ಸದಸ್ಯರಿಗೆ ಆತ್ಮಸ್ಥೈರ್ಯ ತುಂಬಿ, ಉಚಿತವಾಗಿ ಇಂಜಿನಿಯರಿಂಗ್ ಸೀಟ್ ಕೊಡಿಸುವುದಾಗಿ ಹೇಳಿದ್ದರು.
ಇದನ್ನೂ ಓದಿ: ಕರ್ನಾಟಕ ಸಿಇಟಿ ಪರೀಕ್ಷೆ ಮತ್ತು ಜನಿವಾರ ವಿವಾದ: ಈವರೆಗೆ ನಡೆದಿದ್ದೇನು? ಇಲ್ಲಿದೆ ವಿವರ
ಏನಿದು ಪ್ರಕರಣ?
ಸುಚಿವೃತ ಕುಲಕರ್ಣಿ ಬೀದರ್‌ನ ಮನ್ನಳ್ಳಿ ರಸ್ತೆಯಲ್ಲಿರುವ ಸಾಯಿಸ್ಫೂರ್ತಿ ಕಾಲೇಜಿಗೆ ಸಿಇಟಿ ಪರೀಕ್ಷೆ ಬರೆಯಲು ತೆರಳಿದ್ದರು. ಈ ವೇಳೆ, ಅಲ್ಲಿನ ಸಿಬಂದಿ ಜನಿವಾರ ತೆಗೆದು ಪರೀಕ್ಷೆ ಹಾಜರಾಗುವಂತೆ ಸೂಚಿಸಿದ್ದರು. ಇದಕ್ಕೆ ಒಪ್ಪದ ಸುಚಿವೃತ ಕುಲಕರ್ಣಿಯವರು ಜನಿವಾರ ತೆಗೆಯದೆ ವಾಪಸ್ ಮನೆಗೆ ಹೋಗಿದ್ದರು.
ಅಧಿಕಾರಿಗಳ ಈ ಕ್ರಮದ ವಿರುದ್ಧ ಬ್ರಾಹ್ಮಣ ಮಹಾಸಭಾ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಹಾಗೇ, ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಹಲವು ರಾಜಕೀಯ ನಾಯಕರು ಕೂಡ ಈ ಘಟನೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.








