ಜನಿವಾರ ವಿವಾದ; ಬೀದರ್ನ ಸಾಯಿ ಸ್ಪೂರ್ತಿ ಕಾಲೇಜಿನ ಪ್ರಿನ್ಸಿಪಾಲ್, ಸಿಬ್ಬಂದಿ ಅಮಾನತು
ಸಿಇಟಿ ಬರೆಯಲು ಬಂದಿದ್ದ ಅಭ್ಯರ್ಥಿಯ ಜನಿವಾರ ತೆಗೆಸಿದ ಆರೋಪದಲ್ಲಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಕಾಲೇಜು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಸಿಇಟಿ ಪರೀಕ್ಷಾರ್ಥಿಗೆ ಪರೀಕ್ಷೆಗೆ ಅವಕಾಶ ನೀಡದ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ. ಬೀದರ್ನ ಸಾಯಿ ಸ್ಪೂರ್ತಿ ಪಿಯು ಕಾಲೇಜಿನ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ. ಇಂದು ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದ್ದ ಬೀದರ್ ಜಿಲ್ಲಾಧಿಕಾರಿ ಈ ಘಟನೆಯಲ್ಲಿ ಅಧಿಕಾರದ್ದೇ ತಪ್ಪು ಎಂದು ವರದಿ ಸಲ್ಲಿಸಿದ್ದರು.

ಬೆಂಗಳೂರು, ಏಪ್ರಿಲ್ 19: ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿ ಜನಿವಾರ ಹಾಕಿದ್ದಾನೆಂಬ ಕಾರಣಕ್ಕೆ ಆತನಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದ ಘಟನೆ ಬೀದರ್‌ನಲ್ಲಿ ನಡೆದಿತ್ತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇಂದು ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದ್ದ ಬೀದರ್ ಜಿಲ್ಲಾಧಿಕಾರಿ ಈ ಘಟನೆಯಲ್ಲಿ ಅಧಿಕಾರದ್ದೇ ತಪ್ಪು ಎಂದು ವರದಿ ಸಲ್ಲಿಸಿದ್ದರು. ಅದರ ಬೆನ್ನಲ್ಲೇ ಈ ಘಟನೆ ನಡೆದ ಬೀದರ್ನ ಖಾಸಗಿ ಕಾಲೇಜಿನ ಪ್ರಾಂಶುಪಾಲ ಮತ್ತು ಆ ಕಾಲೇಜಿನ ಕೆಲವು ಸಿಬ್ಬಂದಿಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.
ಸಿಇಟಿ ಬರೆಯಲು ಬಂದಿದ್ದ ಅಭ್ಯರ್ಥಿಯ ಜನಿವಾರ ತೆಗೆಸಿದ ಆರೋಪದಲ್ಲಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಕಾಲೇಜು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಪರೀಕ್ಷಾರ್ಥಿಗೆ ಪರೀಕ್ಷೆಗೆ ಅವಕಾಶ ನೀಡದ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ. ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಕೆ.ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ. ಬೀದರ್ ಜಿಲ್ಲಾಧಿಕಾರಿಯಿಂದ ವರದಿ ಸಲ್ಲಿಕೆ ಬೆನ್ನಲ್ಲೇ ಕ್ರಮ ಕೈಗೊಳ್ಳಲಾಗಿದೆ. ಬೀದರ್ನಲ್ಲಿರುವ ಸಾಯಿ ಸ್ಫೂರ್ತಿ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಚಂದ್ರಶೇಖರ ಬಿರಾದಾರ್ ಹಾಗೂ ಆ ಕಾಲೇಜಿನ ತಪಾಸಣಾ ಸಿಬ್ಬಂದಿ ಸತೀಶ್ ಪವಾರ್ ಅವರನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ: ಸಿಇಟಿ ಅಭ್ಯರ್ಥಿಗಳ ಜನಿವಾರ ತೆಗೆಸಿದ ಪ್ರಕರಣ; ಅಧಿಕಾರಿಗಳದ್ದೇ ತಪ್ಪೆಂದು ವರದಿ ಸಲ್ಲಿಸಿದ ಡಿಸಿ
ಬೀದರ್ನ ಸಾಯಿ ಸ್ಫೂರ್ತಿ ಪದವಿ ಪೂರ್ವ ಕಾಲೇಜು ಖಾಸಗೀ ಕಾಲೇಜಾಗಿರುವುದರಿಂದ ಹಾಗೂ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಈ ಆದೇಶ ಹೊರಡಿಸಲಾಗಿದೆ. ಚಂದ್ರಶೇಖರ ಬಿರಾದಾರ್, ಪ್ರಾಂಶುಪಾಲರು ಮತ್ತು ಕಾಲೇಜಿನ ತಪಾಸಣಾ ಸಿಬ್ಬಂದಿ ಸತೀಶ್ ಪವಾರ್ ಇವರುಗಳನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಶಿಸ್ತು ಕ್ರಮ ಜರುಗಿಸಲು ಆಡಳಿತ ಮಂಡಳಿಗೆ ನಿರ್ದೇಶನ ನೀಡುವಂತೆ ಸೂಚಿಸಲಾಗಿದೆ.
ಬೀದರ್ ಜಿಲ್ಲಾಧಿಕಾರಿಯ ವರದಿಯಲ್ಲೇನಿತ್ತು?:
ಸಿಇಟಿ ಬರೆಯಲು ಬಂದಿದ್ದ ಅಭ್ಯರ್ಥಿಗಳ ಜನಿವಾರ ತೆಗೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಬೀದರ್ ಜಿಲ್ಲಾಧಿಕಾರಿ ಸಂಪೂರ್ಣ ವರದಿ ಸಲ್ಲಿಕೆ ಮಾಡಿದ್ದರು. ಈ ವರದಿಯಲ್ಲಿ ಅಧಿಕಾರಿಗಳದ್ದೇ ತಪ್ಪು ಎಂದು ಉಲ್ಲೇಖಿಸಲಾಗಿತ್ತು. ಪರೀಕ್ಷಾ ವೀಕ್ಷಕರಾಗಿದ್ದ ಔರಾದ್ ಆರ್ಎಫ್ಒ ಮೊದ್ದಶೀರ್ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ. ಪರೀಕ್ಷಾರ್ಥಿ ಪರೀಕ್ಷೆಗೆ ಕಾದು ನಿಂತರೂ ಅವಕಾಶ ಸಿಕ್ಕಿಲ್ಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನಿಯಮ ಪಾಲಿಸದೆ ಮೊದ್ದಶೀರ್ ಎಡವಟ್ಟು ಮಾಡಿದ್ದಾರೆ ಎಂದು ವರದಿಯಲ್ಲಿ ಡಿಸಿ ತಿಳಿಸಿದ್ದರು.
ಇದನ್ನೂ ಓದಿ: ಸಿಇಟಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದು ಜನರ ನಂಬಿಕೆ ಮೇಲಿನ ದಾಳಿ; ಪ್ರಲ್ಹಾದ್ ಜೋಶಿ
ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಯ ಜನಿವಾರ ಮತ್ತು ಕೈಗೆ ಕಟ್ಟಿದ್ದ ಕಾಶಿ ದಾರವನ್ನು ತೆಗೆಸಿ ಅಧಿಕಾರಿಗಳು ಕಸದ ಬುಟ್ಟಿಗೆ ಎಸೆದಿದ್ದರು. ಬೀದರ್‌ನಲ್ಲಿ ಜನಿವಾರ ಹಾಕಿದ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿರಲಿಲ್ಲ. ಅಧಿಕಾರಿಗಳ ಈ ಕ್ರಮದ ವಿರುದ್ಧ ಬ್ರಾಹ್ಮಣ ಮಹಾಸಭಾ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇದೀಗ ಬೀದರ್ನ ಸಾಯಿ ಸ್ಪೂರ್ತಿ ಪಿಯು ಕಾಲೇಜಿನ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ದೂರು:
ಜನಿವಾರ ತೆಗೆಯದ್ದಕ್ಕೆ ಪರೀಕ್ಷೆಗೆ ಅವಕಾಶ ನೀಡದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ದೂರು ದಾಖಲಿಸಿಕೊಳ್ಳಲಾಗಿದೆ. ಈ ಘಟನೆ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಬೀದರ್ನ ಖಾಸಗಿ ಕಾಲೇಜಿನಲ್ಲಿ ನಿನ್ನೆ ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಳ್ಳಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:28 pm, Sat, 19 April 25