ರಾಜ್ಯದಲ್ಲಿ ಅನಧಿಕೃತವಾಗಿ ನೆಲೆಸಿರುವ ಪಾಕಿಸ್ತಾನಿಗಳ ವಿರುದ್ಧ ಕ್ರಮ: ಪರಮೇಶ್ವರ್
ಏಪ್ರಿಲ್ 23 ರಂದು ಜಮ್ಮು-ಕಾಶ್ಮೀರದ ಪೆಹಲ್ಗಾವ್ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ಮಾಡಿದ್ದರು. ಈ ಗುಂಡಿನ ದಾಳಿಯಲ್ಲಿ ಕರ್ನಾಟಕದ ಇಬ್ಬರು ಪ್ರವಾಸಿಗರು ಸೇರಿದಂತೆ 27 ಮಂದಿ ಮೃತಪಟ್ಟಿದ್ದಾರೆ. ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಭಾರತದಲ್ಲಿ ನೆಲೆಸಿರುವ ಪಾಕಿಸ್ಥಾನ ಪ್ರಜೆಗಳು ದೇಶ ತೊರೆಯುವಂತೆ ಸೂಚನೆ ನೀಡಿದೆ. ಈ ವಿಚಾರವಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು, ಏಪ್ರಿಲ್ 25: ಜಮ್ಮು ಮತ್ತು ಕಾಶ್ಮೀರದ (Jammu and Kashmir)ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ (Pahalgam Terror Attack) ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ಥಾನ ಪ್ರಜೆಗಳು ಭಾರತ ತೊರೆಯಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ರಾಜ್ಯದಲ್ಲಿ ಅನಧಿಕೃತವಾಗಿ ಪಾಕಿಸ್ತಾನ ಪ್ರಜೆಗಳು ನೆಲೆಸಿದ್ದರೆ ಕ್ರಮ ಕೈಗೊಳ್ಳಲಾಗುವುದು. ಸ್ಲೀಪರ್ ಸೆಲ್ಗಳ ಪತ್ತೆ ಕಾರ್ಯವೂ ನಡೆಯುತ್ತಿದೆ. ಸ್ಲೀಪರ್ ಸೆಲ್ಗಳು ಪತ್ತೆಯಾದರೆ NIAಗೆ ಮಾಹಿತಿ ನೀಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶದ ಭದ್ರತೆ ವಿಚಾರವಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಕೇಂದ್ರ ಸರ್ಕಾರ ಮತ್ತಷ್ಟು ಕಠಿಣ ನಿರ್ಧಾರ ಕೈಗೊಳ್ಳಬಹುದು. ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರಗಳ ಬಗ್ಗೆ ಮಾತನಾಡಲ್ಲ ಎಂದರು.
ಇದು ರಾಜಕೀಯ ಮಾಡುವ ವಿಚಾರ ಅಲ್ಲ: ಡಿಕೆ ಶಿವಕುಮಾರ್
ಕೇಂದ್ರ ಸರ್ಕರ ಕೈಗೊಂಡಿರುವ ನಿರ್ಧಾರಗಳ ವಿಚಾರವಾಗಿ ನಾನು ಯಾರನ್ನೂ ದೂರುವುದಿಲ್ಲ, ಮಾತನಾಡಲ್ಲ. ಇದು ರಾಜಕೀಯ ಮಾಡುವ ವಿಚಾರವಲ್ಲ. ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಹೊರದೇಶದಿಂದ ಬಂದು ಶಾಂತಿ ಕದಡುವ ಕೆಲಸ ಮಾಡಿದ್ದಾರೆ. ಅವರನ್ನು ಮುಗಿಸುವ ಕೆಲಸ ಆಗಬೇಕು. ಕೇಂದ್ರ ಸರ್ಕಾರ ಈಗಾಗಲೇ ಈ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ. ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಅಂತ ಜಿಲ್ಲಾಧ್ಯಕ್ಷರುಗಳಿಗೆ ಹೇಳಿದ್ದೇನೆ. ಈ ಘಟನೆಯನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ನಾವು ಈ ದೇಶದ ಐಕ್ಯತೆ, ಶಾಂತಿ ಕಾಪಾಡಲು ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದರು.
ಇದನ್ನೂ ಓದಿ: ಭಾರತ, ಸೌತ್ ಕೊರಿಯಾಗಿಂತಲೂ ಶ್ರೀಮಂತವಾಗಿದ್ದ ಪಾಕಿಸ್ತಾನ ಎಡವಿದ್ದು ಎಲ್ಲಿ? ಇಲ್ಲಿವೆ ರೋಚಕ ಅಂಶಗಳು
ಕೇಂದ್ರ ಸರಕಾರಕ್ಕೆ ಬೆಂಬಲ ನೀಡುತ್ತೇವೆ: ಜಾರ್ಜ್
ಕಾಶ್ಮೀರದಲ್ಲಿ ಇಂತಹ ಘಟನೆ ಆಗಬಾರದಿತ್ತು. ಆದರೆ, ಘಟನೆ ನಡೆದಾಗ ಅಲ್ಲಿಯ ಜನತೆ ಪ್ರವಾಸಿಗರಿಗೆ ಸಹಕಾರ ನೀಡಿದ್ದಾರೆ. ಭಯೋತ್ಪಾದನೆಯನ್ನು ಎಲ್ಲಾರೂ ಖಂಡಿಸಬೇಕು. ನಾವೆಲ್ಲ ಭಾರತೀಯರು ಪಕ್ಷಭೇದ ಮರೆತು ಕೇಂದ್ರ ಸರಕಾರಕ್ಕೆ ಬೆಂಬಲ ನೀಡುತ್ತೇವೆ. ಇಂತಹ ಘಟನೆ ಮರು ಕಳುಹಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:34 pm, Fri, 25 April 25







