ಕೇರಳದಲ್ಲಿ ಆರೋಪಿಯಿಂದ ಹಣ ಪಡೆದ ಆರೋಪ, ಬೆಂಗಳೂರಿನ ಇನ್ಸ್ಪೆಕ್ಟರ್ ಸಹಿತ ನಾಲ್ವರು ಸಸ್ಪೆಂಡ್
ಕೇರಳ ಪೊಲೀಸರಿಂದ ವೈಟ್ಫೀಲ್ಡ್ ಸಿಇಎನ್ ಪೊಲೀಸರನ್ನು ವಶಕ್ಕೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ಪೆಕ್ಟರ್ ಶಿವಪ್ರಕಾಶ್ ಸೇರಿ ನಾಲ್ವರನ್ನು ಅಮಾನತು ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು, ಆ.4: ಕೇರಳ ಪೊಲೀಸರಿಂದ ವೈಟ್ಫೀಲ್ಡ್ ಸಿಇಎನ್ ಪೊಲೀಸ(CEN Police)ರನ್ನು ವಶಕ್ಕೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ಪೆಕ್ಟರ್ ಶಿವಪ್ರಕಾಶ್ ಸೇರಿ ನಾಲ್ವರನ್ನು ಅಮಾನತು ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಆದೇಶ ಹೊರಡಿಸಿದ್ದಾರೆ. ಇನ್ಸ್ಪೆಕ್ಟರ್ ಶಿವಪ್ರಕಾಶ್, ಹೆಡ್ ಕಾನ್ಸ್ಟೇಬಲ್ಗಳಾದ ಶಿವಾನಿ, ವಿಜಯ್ ಕುಮಾರ್ ಹಾಗೂ ಕಾನ್ಸ್ಟೇಬಲ್ ಸಂದೇಶ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಘಟನೆ ಕುರಿತು ಎಸಿಪಿ ವರದಿ ಆಧರಿಸಿ ಪ್ರಕರಣದ ತನಿಖೆ ಕಾರ್ಯವಿಧಾನದಲ್ಲಿ ಲೋಪ ಹಿನ್ನೆಲೆ ಈ ನಿರ್ಧಾರ ಮಾಡಲಾಗಿದೆ.
ಘಟನೆ ವಿವರ
ಉದ್ಯೋಗ ಕೊಡಿಸುವುದಾಗಿ ಹೇಳಿ ಸಾಫ್ಟ್ವೇರ್ ಇಂಜಿನಿಯರ್ ಬಳಿ ಆನ್ಲೈನ್ ಮೂಲಕ 26 ಲಕ್ಷ ರೂ. ಹಣವನ್ನ ಪಡೆದು ವಂಚನೆ ಮಾಡಿದ ಆರೋಪದ ಹಿನ್ನಲೆ ಚಂದಕ್ ಶ್ರೀಕಾಂತ್ ಎಂಬುವವರು ವೈಟ್ ಫೀಲ್ಡ್ ಸೈಬರ್ ಠಾಣೆಗೆ ದೂರು ಕೊಟ್ಟಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಇಎನ್ ಪೊಲೀಸರಿಗೆ ಸಿಕ್ಕ ಸುಳಿವಿನ ಮೇರೆಗೆ ಮಡಿಕೇರಿಯ ಆರೋಪಿ ಐಸಾಕ್ ಬಳಿ ಹೋಗಿ ಪರಿಶೀಲನೆ ನಡೆಸಿದಾಗ ಐಸಾಕ್ ಅಕೌಂಟ್ನಲ್ಲಿ 2 ಕೋಟಿ ಹಣ ವರ್ಗಾವಣೆ ಆಗಿರುವುದು ಪತ್ತೆಯಾಗಿತ್ತು. ಇದರ ಜಾಡು ಹಿಡಿದು ವೈಟ್ ಫೀಲ್ಡ್ ಸಿಇಎನ್ ಇನ್ಸ್ಪೆಕ್ಟರ್ ಶಿವಪ್ರಕಾಶ್ ಹಾಗೂ ಅವರ ತಂಡ ಕೇರಳದ ಕೊಚ್ಚಿ ನಗರದ ಕಲ್ಲಂಚೇರಿಗೆ ಹೋಗಿದ್ದರು. ಆಲ್ಲಿ ಆರೋಪಿಗಳಾದ ನೌಶಾದ್ ಹಾಗೂ ಅಕೀಲ್ ಎಂಬುವವರಿಂದ ಆನ್ ಲೈನ್ ಫ್ರಾಡ್ ಆಗಿರುವ ಬಗ್ಗೆ ಸಾಕ್ಷಿ ಸಿಕ್ಕಿತ್ತು. ಈ ಹಿನ್ನಲೆ ಅರೆಸ್ಟ್ ಮಾಡಲು ಪೊಲೀಸರು ತೆರಳಿದ್ದರು.
ಇದನ್ನೂ ಓದಿ:ಬೆಂಗಳೂರು ಪೊಲೀಸರ ವಿರುದ್ಧ ಕೇರಳದಲ್ಲಿ ಎಫ್ಐಆರ್; ಇನ್ಸ್ಪೆಕ್ಟರ್ ಸೇರಿ ನಾಲ್ವರು ವಶಕ್ಕೆ; ಕಾರಣವೇನು ಗೊತ್ತಾ?
ಆರೋಪಿಯಿಂದಲೇ ಪೊಲೀಸರ ವಿರುದ್ದ ದೂರು
ಇನ್ನು ಈ ವೇಳೆ ಆರೋಪಿ ಅಕೀಲ್ ಪೊಲೀಸರು ನಮ್ಮ ಬಳಿ ಹಣ ಪಡೆದ ಆರೋಪದ ಮೇಲೆ ಕೇರಳದ ಕಲ್ಲಂಚೇರಿ ಠಾಣೆಯಲ್ಲಿ ದೂರು ನೀಡಿದ್ದ. ಹೌದು, ಎಫ್ಐಆರ್ನಲ್ಲಿ ಇನ್ನೋವಾ ಕಾರಿನಲ್ಲಿದ್ದ 3.95 ಲಕ್ಷ ಹಣವನ್ನ ಪಡೆದಿರುವುದಾಗಿ ಉಲ್ಲೇಖ ಮಾಡಲಾಗಿದೆ. ಜೊತೆಗೆ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ಬಳಿಕ ಜಪ್ತಿ ಮಾಡಬೇಕಿತ್ತು. ಆದರೆ, ಪೊಲೀಸರು ಹಣ ನೀಡದಿದ್ರೆ, ಕ್ರಿಪ್ಟೋ ಕರೆನ್ಸಿ ಪ್ರಕರಣದಲ್ಲಿ ಆರೋಪಿ ಮಾಡುವುದಾಗಿ ನಿಖಿಲ್, ನೌಷಾದ್ ಹಾಗೂ ಅಖಿಲ್ಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಿರುವ ಆರೋಪ ಮಾಡಲಾಗಿತ್ತು. ಇದೀಗ ಎಸಿಪಿ ವರದಿ ಆಧರಿಸಿ ನಾಲ್ವರನ್ನು ಅಮಾನತುಗೊಳಿಸಲಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ