ಬೆಂಗಳೂರಿನಲ್ಲಿ ಕೇರಳ ಮೂಲದ ಸೊಸೈಟಿ ಮಹಾದೋಖಾ: ಆಕರ್ಷಕ ಬಡ್ಡಿ ಆಮಿಷ ತೋರಿಸಿ ಗ್ರಾಹಕರ ಬಳಿ ಕೋಟಿ ಕೋಟಿ ರೂ. ಲೂಟಿ

ಕರ್ನಾಟಕದಲ್ಲಿ ಕೇರಳ ಮೂಲದ ಮತ್ತೊಂದು ‘ಕೋ ಆಪರೇಟಿವ್ ಸೊಸೈಟಿ’ ಮಹಾಮೋಸ ಬೆಳಕಿಗೆ ಬಂದಿದೆ. ಅತಿ ಹೆಚ್ಚಿನ ಬಡ್ಡಿ ನೀಡುವುದಾಗಿ ಆಮಿಷ ತೋರಿಸಿ ಬೆಂಗಳೂರು ಹೊರವಲಯದಲ್ಲಿ ಸಾವಿರಾರು ಜನರಿಗೆ ಕೋಟಿ ಕೋಟಿ ರೂಪಾಯಿ ಪಂಗನಾಮ ಹಾಕಲಾಗಿದೆ. ಅಷ್ಟಕ್ಕೂ ದುಬಾರಿ ಬಡ್ಡಿ ನೆಪದಲ್ಲಿ ಜನರಿಗೆ ದೋಖಾ ಮಾಡಿದ ಆ ಸೊಸೈಟಿ ಯಾವುದು? ವಿವರಗಳಿಗೆ ಮುಂದೆ ಓದಿ.

ಬೆಂಗಳೂರಿನಲ್ಲಿ ಕೇರಳ ಮೂಲದ ಸೊಸೈಟಿ ಮಹಾದೋಖಾ: ಆಕರ್ಷಕ ಬಡ್ಡಿ ಆಮಿಷ ತೋರಿಸಿ ಗ್ರಾಹಕರ ಬಳಿ ಕೋಟಿ ಕೋಟಿ ರೂ. ಲೂಟಿ
ವಂಚನೆಗೊಳಗಾದವರು ಪ್ರದರ್ಶಿಸಿದ ದಾಖಲೆಗಳು
Edited By:

Updated on: Apr 22, 2025 | 9:20 AM

ಅನೇಕಲ್, ಏಪ್ರಿಲ್ 22: ಕೇರಳ ಮೂಲದ ‘ದಿ ಮಲಬಾರ್ ಮಲ್ಟಿ ಸ್ಟೇಟ್ ಆಗ್ರೋ ಕೋ ಆಪರೇಟಿವ್ ಸೊಸೈಟಿ (Malabar Multi State Agro Co-operative Society Limited)ಬೆಂಗಳೂರು ಹೊರವಲಯ ಸರ್ಜಾಪುರ (Sarjapur) ಸುತ್ತಮುತ್ತ ಸಾವಿರಾರು ಗ್ರಾಹಕರಿಗೆ ವಂಚನೆ ಎಸಗಿರುವ ಆರೋಪ ಕೇಳಿಬಂದಿದೆ. 2019ರಲ್ಲಿ ಸರ್ಜಾಪುರದ ದೊಮ್ಮಸಂದ್ರದಲ್ಲಿ ಶಾಖೆ ಆರಂಭಿಸಿದ ‘ದಿ ಮಲಬಾರ್ ಸ್ಟೇಟ್ ಆಗ್ರೋ ಕೋ ಆಪರೇಟಿವ್ ಸೊಸೈಟಿ’ ಆಕರ್ಷಕ ಬಡ್ಡಿ ದರ ನೀಡುವುದಾಗಿ ಜನ ಸಾಮಾನ್ಯರನ್ನು ತನ್ನತ್ತ ಸೆಳೆದುಕೊಂಡಿದೆ. ಆದರಲ್ಲೂ ಹಿರಿಯ ನಾಗರೀಕರನ್ನು ಟಾರ್ಗೆಟ್ ಮಾಡಿ ಲಕ್ಷ ಲಕ್ಷ ಸ್ಥಿರ ಠೇವಣಿ (Fixed deposit) ಮತ್ತು ಡೈಲಿ, ವೀಕ್ಲಿ ಮತ್ತು ಮಂತ್ಲಿ ಪಿಗ್ಮಿ ಕೂಡ ಸಂಗ್ರಹ ಮಾಡಿ ಆರಂಭದಲ್ಲಿಯೇ ಭರ್ಜರಿ ಸಂಗ್ರಹ ಮಾಡಿದೆ. ಆರಂಭದಲ್ಲಿ ಗ್ರಾಹಕರಿಗೆ ಹಣ ಕೂಡ ಹಿಂದಿರುಗಿಸಿದೆ. ಅದೇ ನಂಬಿಕೆಯಲ್ಲಿ ಗ್ರಾಹಕರು ಬೇರೆ ಬೇರೆ ಬ್ಯಾಂಕುಗಳಲ್ಲಿದ್ದ ಹಣವನ್ನು ಸೊಸೈಟಿಗೆ ಜಮಾ ಮಾಡಿದ್ದಾರೆ. ಆದರೆ 2024ರಲ್ಲಿ ದಿಢೀರ್ ಮಲಬಾರ್ ಸೊಸೈಟಿ ಬಾಗಿಲು ಬಂದ್ ಮಾಡಿದ್ದು, ಸಿಬ್ಬಂದಿ ಪರಾರಿಯಾಗಿದ್ದಾರೆ.

ಕ್ಯಾನ್ಸರ್ ರೋಗಿಯಾದ ರೈತ ಚಂದ್ರಾರೆಡ್ಡಿ ಎಂಬವರು ಕೊನೆ ದಿನಗಳಲ್ಲಿ ತನ್ನ ಜೀವನಕ್ಕಾಗಿ ಕೂಡಿಟ್ಟಿದ್ದ ಹಣವನ್ನು ಕೂಡ ಹೆಚ್ಚಿನ ಬಡ್ಡಿ ಆಸೆಗೆ ಬಿದ್ದು ದಿ ಮಲಬಾರ್ ಸೊಸೈಟಿಯಲ್ಲಿ ಎಫ್​ಡಿ ಮಾಡಿದ್ದು, ಇದೀಗ ಚಿಕಿತ್ಸೆಗೆ ಹಣವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿ ಮಲಬಾರ್ ಸೊಸೈಟಿ ಅಧಿಕಾರಿ ಮತ್ತು ಸಿಬ್ಬಂದಿ ಬಣ್ಣಬಣ್ಣದ ಮಾತುಗಳಿಗೆ ಬೆರಗಾಗಿ ಹತ್ತು ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ತನಗೆ ನ್ಯಾಯ ದೊರಕಿಸಿ ಕೊಡುವಂತೆ ಸರ್ಜಾಪುರ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಐದಾರು ತಿಂಗಳ ಅಲೆದಾಟದ ಬಳಿಕ ಕೇವಲ ಎನ್ಸಿಆರ್ ದಾಖಲಿಸಿ ಕೈ ತೊಳೆದುಕೊಂಡಿದ್ದಾರೆ. ಹೇಗಾದರೂ ಮಾಡಿ ಹಣ ಪಡೆದುಕೊಳ್ಳಬೇಕು ಎಂದು ದೂರದ ಕೇರಳಕ್ಕೆ ಹೋಗಿ ಬಂದರು ಪ್ರಯೋಜನ ಆಗಿಲ್ಲ. ಸೊಸೈಟಿ ಅಧ್ಯಕ್ಷ ರಾಹುಲ್ ಚಕ್ರಪಾಣಿ, ಕಾರ್ಯನಿರ್ವಾಹಕ ಅಧಿಕ ಅಬ್ದುಲ್ ಅಜೀಜ್ ಸೇರಿದಂತೆ ಸಿಬ್ಬಂದಿಯ ಮೇಲೆ ಎಫ್​ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸಿದರೆ ನೊಂದ ಗ್ರಾಹಕರಿಗೆ ನ್ಯಾಯ ಸಿಗಲಿದೆ ಎಂದು ಹಣ ಕಳೆದುಕೊಂಡ ಗ್ರಾಹಕ ಚಂದ್ರಾರೆಡ್ಡಿ ಸರ್ಜಾಪುರ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: 30 ವರ್ಷಗಳಲ್ಲಿ ಮುಸ್ಲಿಮರ ಜನಸಂಖ್ಯೆ ಶೇ 90ರಷ್ಟು ಏರಿಕೆ: ಜಾತಿ ಗಣತಿ ವರದಿಯ ಮತ್ತಷ್ಟು ಮಾಹಿತಿ ಬಹಿರಂಗ

ಇದನ್ನೂ ಓದಿ
ಶಾಲಾ ಶುಲ್ಕ ಆಯ್ತು, ಇದೀಗ ಪಠ್ಯ ಪುಸ್ತಕಗಳ ಬೆಲೆ ಶೇ 10 ಏರಿಕೆ‌
30 ವರ್ಷಗಳಲ್ಲಿ ಮುಸ್ಲಿಮರ ಜನಸಂಖ್ಯೆ ಶೇ 90ರಷ್ಟು ಏರಿಕೆ: ಜಾತಿ ಗಣತಿ ವರದಿ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್

ಒಟ್ಟಿನಲ್ಲಿ ದಿ ಮಲಬಾರ್ ಸ್ಟೇಟ್ ಆಗ್ರೋ ಕೋ ಆಪರೇಟಿವ್ ಸೊಸೈಟಿ ಬೆಂಗಳೂರು ಅಲ್ಲದೆ ಕೇರಳದಲ್ಲಿಯೂ ನೂರಾರು ಕೋಟಿ ರೂಪಾಯಿ ವಂಚನೆ ಮಾಡಿ, ಅದರ ಅಧ್ಯಕ್ಷ ಸೇರಿದಂತೆ ಸಿಬ್ಬಂದಿ ಜೈಲು ಸೇರಿದ್ದಾರೆ. ಕರ್ನಾಟಕ ಪೊಲೀಸರು ಸಹ ಕಾನೂನು ಅಡಿಯಲ್ಲಿ ಕ್ರಮ ಜರುಗಿಸಿ ವಂಚನೆಗೊಳದವರಿಗೆ ನ್ಯಾಯ ಕೊಡಿಸಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ