Karnataka Text Book Price: ಶಾಲಾ ಶುಲ್ಕ ಆಯ್ತು, ಇದೀಗ ಪಠ್ಯ ಪುಸ್ತಕಗಳ ಬೆಲೆ ಶೇ 10 ಏರಿಕೆ
ಕರ್ನಾಟಕ ಪಠ್ಯ ಪುಸ್ತಕ ದರ ಹೆಚ್ಚಳ: ಶಾಲಾ ಫೀಸ್, ಶಾಲೆ ಬಸ್ ಶುಲ್ಕ ಹೆಚ್ಚಳ, ಲೇಖನ ಸಾಮಗ್ರಿಗಳ ದರ ಹೆಚ್ಚಳ ನಿರ್ಧಾರ ಈಗಾಗಲೇ ಪೋಷಕರ ನಿದ್ದೆಗೆಡಿಸಿದೆ. ಇದೀಗ ವಿದ್ಯಾರ್ಥಿಗಳಿಗೆ ಮತ್ತೊಂದು ಬರೆ ಎಳೆಯಲು ಕರ್ನಾಟಕ ಪಠ್ಯ ಪುಸ್ತಕ ಸಂಘ ಮುಂದಾಗಿದೆ. ಪಠ್ಯ ಪುಸ್ತಕ ದರ ಏರಿಕೆ ಮಾಡಲು ನಿರ್ಧರಿಸಲಾಗಿದೆ.

ಬೆಂಗಳೂರು, ಏಪ್ರಿಲ್ 22: ಹಾಲು, ನೀರು, ಕರೆಂಟ್, ಬಸ್ ದರ ಸೇರಿದಂತೆ ಪ್ರತಿನಿತ್ಯ ಬಳಸುವಂತಹ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ನೂರಾರು ಕನಸುಗಳನ್ನು ಹೊತ್ತು ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಡಿಸಬೇಕು ಎಂದು ಪೋಷಕರು ಖಾಸಗಿ ಶಾಲೆಗಳಿಗೆ (Private Schools) ಮಕ್ಕಳ ದಾಖಲಾತಿ ಮಾಡಿಸುತ್ತಾರೆ. ಆದರೆ ಶಾಲಾ ಶುಲ್ಕವು (School Fee) ಏರಿಕೆಯಾಗಿದ್ದು, ಫೀಸ್ ಕಟ್ಟಲು ಪೋಷಕರು ಒದ್ದಾಡುತ್ತಿರುವ ಸಂದರ್ಭದಲ್ಲಿ ಇದೀಗ ಪಠ್ಯ ಪುಸ್ತಕದ (Text Book Price) ದರ ಶೇ 10 ರಷ್ಟು ಏರಿಕೆಯಾಗಿದೆ ಎಂಬುದು ತಿಳಿದುಬಂದಿದೆ. ಖಾಸಗಿ ಶಾಲೆಗಳ ಒಕ್ಕೂಟ ಈ ಬಗ್ಗೆ ಬೇಸರ ವ್ಯಕ್ತಪಡಿಸಿದೆ.
ಕರ್ನಾಟಕ ಪಠ್ಯ ಪುಸ್ತಕ ಸಂಘವು 2025-2026 ನೇ ಸಾಲಿನ ಪಠ್ಯ ಪುಸ್ತಕ ದರವನ್ನು ಶೇ 10 ರಷ್ಟು ಏರಿಕೆ ಮಾಡಿದೆ. ಈಗಾಗಲೇ ಕೆಲವು ಪಠ್ಯ ಪುಸ್ತಕಗಳ ಬೆಲೆ ಶೇ 100 ರಷ್ಟು ಹೆಚ್ಚಾಗಿದ್ದು, ಈ ವರ್ಷವೂ ಕರ್ನಾಟಕ ಪಠ್ಯ ಪುಸ್ತಕ ಸಂಘ ಪಠ್ಯ ಪುಸ್ತಕಗಳ ದರ ಏರಿಕೆ ಮಾಡಿದೆ.
ಪಠ್ಯ ಪುಸ್ತಕಕ್ಕೆ ಹೆಚ್ಚು ದರ ಕೇಳುತ್ತಿರುವ ಪಠ್ಯ ಪುಸ್ತಕ ಸಂಘ
ಖಾಸಗಿ ಶಾಲೆಗಳಿಂದ ಡಿಸೆಂಬರ್ ತಿಂಗಳಲ್ಲಿ ಇಂಡೆಂಟ್ ಪಡೆದಿದ್ದ ಪಠ್ಯ ಪುಸ್ತಕ ಸಂಘ, ಮುಂಗಡ ಶೇ 10ರಷ್ಟು ಹಣವನ್ನು ಆನ್ ಲೈನ್ ಮೂಲಕ ಪಾವತಿಸಿಕೊಂಡಿತ್ತು. ಈಗ ಖಾಸಗಿ ಶಾಲೆಗೆ ಇಂಡೆಂಟ್ ಪಡೆದಿದ್ದಕ್ಕಿಂತ ಶೇ 10 ರಷ್ಟು ಹೆಚ್ಚು ಕೇಳುತ್ತಿದೆ. ಇದರ ನೇರ ಪರಿಣಾಮ ಪೋಷಕರಿಗೆ ತಟ್ಟಲಿದೆ. ಖಾಸಗಿ ಶಾಲೆಗಳು ಈ ಬೆಲೆ ಏರಿಕೆಯ ಹೊರೆಯನ್ನು ಪೋಷಕರ ಮೇಲೆ ಹಾಕಲು ಮುಂದಾಗಿವೆ.
ಪೋಷಕರಿಗೆ ಹೊರೆ ವರ್ಗಾಯಿಸುತ್ತಿರುವ ಖಾಸಗಿ ಶಾಲೆಗಳು
ಎಲ್ಲದರ ಬೆಲೆ ಏರಿಕೆಯಾಗಿರುವುದರಿಂದ ಜನರಿಗೆ ತೊಂದರೆ ಆಗುತ್ತಿದೆ ಎಂದು ಸಾಕಷ್ಟು ಬಾರಿ ನಾವು ಸರ್ಕಾರಕ್ಕೂ ಮನವಿ ಮಾಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಪಠ್ಯ ಪುಸ್ತಕ ದರವನ್ನು ಅನಿವಾರ್ಯವಾಗಿ ಏರಿಕೆ ಮಾಡಬೇಕಿದೆ. ಈ ಏರಿಕೆಯ ಹೊರೆಯನ್ನು ನಾವು ಪೋಷಕರ ಮೇಲೆ ಹಾಕಬೇಕಿದೆ ಎಂದು ಖಾಸಗಿ ಶಾಲೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದ್ದಾರೆ. ಆದರೆ, ಕರ್ನಾಟಕ ಪಠ್ಯ ಪುಸ್ತಕ ಸಂಘ ಮಾತ್ರ ಈ ಬಗ್ಗೆ ಯಾವುದೇ ಸ್ಪಷ್ಟವಾದ ಉತ್ತರ ನೀಡುತ್ತಿಲ್ಲ.
ಇದನ್ನೂ ಓದಿ: ಒಂದನೇ ತರಗತಿ ಸೇರ್ಪಡೆಗೆ ವಯೋಮಿತಿ ಸಡಿಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಹತ್ವದ ಘೋಷಣೆ
ಅಗತ್ಯ ವಸ್ತುಗಳ ಸತತವಾಗಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಈ ಬೆಲೆ ಏರಿಕೆಗಳಿಗೆ ಹೋಲಿಸಿದರೆ ಒಂದು ಕಡೆ ಬರುವ ಸಂಬಳವೂ ಕೂಡ ಕಡಿಮೆಯಾಗಿದೆ. ಶಾಲಾ ಶುಲ್ಕ ಹೇಗೂ ಹೆಚ್ಚಾಗಿದೆ. ಅದರ ಜತೆ ಪಠ್ಯ ಪುಸ್ತಕದ ಹೊರೆಯೂ ಹೆಚ್ಚಾಗುತ್ತಿರುವುದು ಪೋಷಕರ ನಿದ್ದೆಗೆಡಿಸಿದೆ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:58 am, Tue, 22 April 25