ಡಿ. 31ರಿಂದ ಬೆಂಗಳೂರಿಗರಿಗೆ ಮತ್ತೊಂದು ಶಾಕ್, ಕಸ ಗುತ್ತಿಗೆ ದಾರರಿಂದಲೂ ಪ್ರತಿಭಟನೆಗೆ ಕರೆ, ಏನಿದೆ ಕರ್ನಾಟಕ ಬಂದ್​ ಪರಿಸ್ಥಿತಿ?

| Updated By: ಸಾಧು ಶ್ರೀನಾಥ್​

Updated on: Dec 27, 2021 | 10:50 AM

ಡಿಸೆಂಬರ್31 ರಿಂದ ಕಸ ಗುತ್ತಿಗೆದಾರರ ಸಂಘದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ತಮ್ಮ ಸಮಸ್ಯೆಗಳನ್ನ ಬಗೆಹರಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಒತ್ತಾಯಿಸಿದ್ದು ಬಿಲ್ ಪಾವತಿ ಸೇರಿದಂತೆ ಇತರೆ ಬೇಡಿಕೆಗಳನ್ನ ಈಡೇರಿಸಲು ಆಗ್ರಹಿಸಿ ಡಿ.31 ರಿಂದ ನಗರದಲ್ಲಿ ಕಸ ಸಂಗ್ರಹಣೆ ಮಾಡದಿರಲು ತೀರ್ಮಾನ ಮಾಡಿದ್ದಾರೆ.

ಡಿ. 31ರಿಂದ ಬೆಂಗಳೂರಿಗರಿಗೆ ಮತ್ತೊಂದು ಶಾಕ್, ಕಸ ಗುತ್ತಿಗೆ ದಾರರಿಂದಲೂ ಪ್ರತಿಭಟನೆಗೆ ಕರೆ, ಏನಿದೆ ಕರ್ನಾಟಕ ಬಂದ್​ ಪರಿಸ್ಥಿತಿ?
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಡಿಸೆಂಬರ್ 31ರಿಂದ ಬೆಂಗಳೂರಿಗರಿಗೆ ಮತ್ತೊಂದು ಶಾಕ್ ಎದುರಾಗಲಿದೆ. ಒಂದು ಕಡೆ MES ಸಂಘಟನೆ ರದ್ದುಗೊಳಿಸಬೇಕೆಂದು ಕನ್ನಡಪರ ಸಂಘಟನೆಗಳು ಡಿಸೆಂಬರ್ 31ರಂದು ಕರ್ನಾಟಕ ಬಂದ್ ಆಚರಿಸಲು ಮುಂದಾಗಿದ್ದು ಮತ್ತೊಂದೆಡೆ ಕಸದ ಸಮಸ್ಯೆ ಹಿನ್ನೆಲೆ ಡಿ.31ರಿಂದ ಕಸ ವಿಲೇವಾರಿ ಗುತ್ತಿಗೆದಾರರು ಪ್ರತಿಭಟನೆಗೆ ನಿರ್ಧರಿಸಿದ್ದಾರೆ.

ಡಿಸೆಂಬರ್31 ರಿಂದ ಕಸ ಗುತ್ತಿಗೆದಾರರ ಸಂಘದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ತಮ್ಮ ಸಮಸ್ಯೆಗಳನ್ನ ಬಗೆಹರಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಒತ್ತಾಯಿಸಿದ್ದು ಬಿಲ್ ಪಾವತಿ ಸೇರಿದಂತೆ ಇತರೆ ಬೇಡಿಕೆಗಳನ್ನ ಈಡೇರಿಸಲು ಆಗ್ರಹಿಸಿ ಡಿ.31 ರಿಂದ ನಗರದಲ್ಲಿ ಕಸ ಸಂಗ್ರಹಣೆ ಮಾಡದಿರಲು ತೀರ್ಮಾನ ಮಾಡಿದ್ದಾರೆ.

ಡಿ.31ರಂದು ಕರ್ನಾಟಕ ಬಂದ್ ಪಕ್ಕಾನಾ?
ಕನ್ನಡಪರ ಸಂಘಟನೆಗಳ MES ಸಂಘಟನೆ ರದ್ದುಗೊಳಿಸಬೇಕೆಂದು ಬಿಗಿಪಟ್ಟು ಹಿಡಿದಿವೆ. ಇದು ಸರ್ಕಾರಕ್ಕೆ ಇಕ್ಕಟ್ಟು ತಂದೊಡ್ಡಿದೆ. ಸರ್ಕಾರಕ್ಕೆ ನೀಡಿದ್ದ ಗಡುವು ಮುಗಿಯೋಕೆ 3 ದಿನವಷ್ಟೇ ಬಾಕಿ ಇದೆ. ಡಿ.29ರೊಳಗೆ ಸರ್ಕಾರ ಯಾವುದೇ ನಿರ್ಧಾರ‌ ಕೈಗೊಳ್ಳದಿದ್ದರೆ ಬಂದ್ ಪಕ್ಕ. ಬಂದ್ ನಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಈಗಾಗಲೇ ವಾಟಾಳ್ ನಾಗರಾಜ್ ಖಚಿತ ಪಡಿಸಿದ್ದಾರೆ.

ವಾಟಾಳ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ರಾಜ್ಯ ಬಂದ್ ಮಾಡಲಿದ್ದು ಸರ್ಕಾರ ಮಾತ್ರ ವಾಟಾಳ್ ನಾಗರಾಜ್ರನ್ನು ಇನ್ನೂ ಕೂಡ ಮಾತುಕತೆಗೆ ಆಹ್ವಾನಿಸಿಲ್ಲ. ಸದ್ಯ ವಾಟಾಳ್ ತಮ್ಮ ಬಂದ್ ಯಶಸ್ವಿಯಾಗಲೆಂದು ಪ್ರತಿ ದಿನ ಹೋರಾಟಕ್ಕೆ ಇಳಿದಿದ್ದಾರೆ. ಮೊನ್ನೆ ಫಿಲ್ಮ್ ಚೇಂಬರ್ ವಿರುದ್ಧ ಹೋರಾಟ ಮಾಡುದ್ರು. ನಿನ್ನೆ ಮಾಲ್ಗಳಿಗೆ ತೆರಳಿ ಬಂದ್ಗೆ ಬೆಂಬಲ ಸೂಚಿಸುವಂತೆ ಮನವಿ ಮಾಡುದ್ರು. ಬೆಳಗ್ಗೆ 6 ರಿಂದ ಸಂಜೆ 6ರ ತನಕ ಬಂದ್ ಮಾಡುವಂತೆ ಆಗ್ರಹಿಸಿದ್ರು. ಸದ್ಯ ಈಗ ಬಂದ್ಗೆ ಬೇಕಾದ ಸಿದ್ಧತೆಗಳಲ್ಲಿ ಸಂಘಟನೆಗಳು ತೊಡಗಿಕೊಂಡಿವೆ. ನೈತಿಕ ಬೆಂಬಲ ಅನ್ನೋರಿಂದ ಪೂರ್ಣ ಬೆಂಬಲ ಸ್ವೀಕರಿಸೋಕೆ ನಾನಾ ಕಸರತ್ತು ಮಾಡಲಾಗುತ್ತಿದೆ. ಫಿಲ್ಮ್ ಚೇಂಬರ್ಗೆ ಇಂದು ಕೆಲ ಕನ್ನಡಪರ ಸಂಘಟನೆಗಳು ಭೇಟಿ ಮಾಡಿ ಬಂದ್ಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಲಿದ್ದಾರೆ. ಜೊತೆಗೆ ಇಂದು ಕೂಡ ಕನ್ನಡಪರ ಸಂಘಟನೆಗಳಿಂದ ಉರುಳು ಸೇವೆ ನಡೆಯಲಿದೆ. ಇಂದು ಬೆಳಗ್ಗೆ 11:30ಕ್ಕೆ ಬೆಂಗಳೂರಿನ ಮಲ್ಲೇಶ್ವರಂ ವೃತ್ತದಲ್ಲಿ ಉರುಳು ಸೇವೆ ಮೂಲಕ ಪ್ರತಿಭಟನೆ ನಡೆಯಲಿದೆ. ವಾಟಾಳ್ ನಾಗರಾಜ್, ಸಾರಾ ಗೋವಿಂದು, ಶಿವರಾಮೇಗೌಡ, ಪ್ರವೀಣ್ ಗೌಡ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.

ಕರ್ನಾಟಕ ಬಂದ್​ಗೆ ಬೆಳಗಾವಿಯಲ್ಲಿ ಕೆಲ ಸಂಘಟನೆಗಳಿಂದ ಬೆಂಬಲ ಇಲ್ಲ
ಡಿಸೆಂಬರ್ 31ರ ಕರ್ನಾಟಕ ಬಂದ್‌ಗೆ ಬೆಳಗಾವಿಯಲ್ಲಿ ಕೆಲ ಸಂಘಟನೆಗಳಿಂದ ಬೆಂಬಲ ಇಲ್ಲ. ಬಂದ್ ಬೆಂಬಲಿಸದಿರಲು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ನಿರ್ಧಾರ ಮಾಡಿದೆ. ಈ ಸಂಬಂಧ ಮಂಗಳವಾರದಂದು ಬೆಳಗಾವಿ ಜಿಲ್ಲಾ ಕನ್ನಡಪರ ಸಂಘಟನೆಗಳ ಸಭೆ ನಡೆಯಲಿದೆ. ವಾಟಾಳ್ ನಾಗರಾಜ್‌ ನಿರ್ಧಾರಕ್ಕೆ ಅಶೋಕ ಚಂದರಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ವಾಟಾಳ್ ನಾಗರಾಜ್ ಬೆಂಗಳೂರಲ್ಲಿ ಕುಳಿತು ಕರ್ನಾಟಕ ಬಂದ್ ಅಂದ್ರೆ ಹೇಗೆ? ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ. ಕೊವಿಡ್‌ನಿಂದ ಜನ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಡಿಸೆಂಬರ್ 31 ಹೊಸ ವರ್ಷದ ಹಿಂದಿನ ದಿನ ವ್ಯಾಪಾರ ವಹಿವಾಟಿಗೆ ಹಾಗೂ ಜನಸಾಮಾನ್ಯರಿಗೆ ತೊಂದರೆ ಆಗುತ್ತೆ. ಹೀಗಾಗಿ ನಾವು ಕರ್ನಾಟಕ ಬಂದ್ ನಿರ್ಧಾರ ಒಪ್ಪೋದಿಲ್ಲ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಎಚ್ಚರಿಕೆ ನೀಡಿದ್ದಾರೆ. ಕರವೇ ಪ್ರವೀಣ್ ಶೆಟ್ಟಿ ಬಣ ಸೇರಿದಂತೆ ಕೆಲ ಸಂಘಟನೆಗಳು ಮಾತ್ರ ಬೆಳಗಾವಿಯಲ್ಲಿ ಬಂದ್‌ಗೆ ಬೆಂಬಲ ನೀಡಿವೆ.

ಸರ್ಕಾರದ ನಿರ್ಧಾರದ ಬಗ್ಗೆ ಆಟೋ ಚಾಲಕರ ಅಸಮಾಧಾನ
ಒಮಿಕ್ರಾನ್ ಆತಂಕದ ನಡುವೆ ಹೊಸ ವರ್ಷಾಚರಣೆ ಹಿನ್ನೆಲೆ ಡಿಸೆಂಬರ್ 28 ರಿಂದ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಆದ್ರೆ ಸರ್ಕಾರದ ನಿರ್ಧಾರದ ಬಗ್ಗೆ ಆಟೋ ಚಾಲಕರು ಅಸಮಾಧಾನ ಹೊರ ಹಾಕಿದ್ದಾರೆ. ನೈಟ್ ಕರ್ಫ್ಯೂ ರೂಲ್ಸ್ ಎಫೆಕ್ಟ್ ನಿಂದ ಆಟೋದವರಿಗೆ ಸಂಕಷ್ಟ ಎದುರಾಗಿದೆ. ನೈಟ್ ಸಂಚರಿಸುತ್ತಿದ್ದ ಆಟೋದವರಿಗೆ ಸಮಸ್ಯೆಯಾಗುತ್ತೆ. ಕೊರೊನಾ ನಂತರ ದುಡಿಮೆ ಇಲ್ಲದೇ ಸಾಕಷ್ಟು ಚಾಲಕರು ರಾತ್ರಿ ಕೆಲಸ ಮಾಡ್ತಾರೆ. ಈ ನೈಟ್ ಕರ್ಪ್ಯೂನಿಂದ ಆಟೋ ಚಾಲಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾತ್ರಿ ಸಮಯದಲ್ಲಿ ನಗರಕ್ಕೆ ಬರೊ ಗ್ರಾಹಕರ ಗತಿ ಏನು? ನೈಟ್ ಶಿಫ್ಟ್ ಕೆಲಸ ಮುಗಿಸಿ ಮನೆ ಸೇರೊ ಜನರಿಗೆ ಆಟೋ ಇಲ್ಲ ಅಂದ್ರೆ ಸಮಸ್ಯೆಯಾಗುತ್ತೆ. ಸರ್ಕಾರದ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ವರ್ತಿಸ್ತಿದೆ. ನೈಟ್ ಬಸ್ಸುಗಳ ಓಡಾಟಕ್ಕೆ ಅವಕಾಶ ನೀಡಿದ್ದೀರಾ. ಹಾಗೇ ಆಟೋ ಮತ್ತು ಟ್ಯಾಕ್ಸಿಗಳಿಗೂ ಓಡಾಡಲು ಅವಕಾಶ ಮಾಡಿಕೊಡಬೇಕು. ಈ ಹಿಂದಿನ ಕೊರೊನಾ ಹೊಡೆತಕ್ಕೆ ಆಟೋ ಚಾಲಕರು ನಲುಗಿ ಹೋಗಿದ್ದಾರೆ. ಈಗಷ್ಟೇ ಚೇತರಿಕೆ ಕಾಣುತ್ತಿರುವ ಈ ಸಂದರ್ಭಗಳಲ್ಲಿ ನೈಟ್ ಕರ್ಫ್ಯೂ ವಿಧಿಸಲಾಗಿದೆ. ಹೀಗಾಗಿ ಆಟೋ ಚಾಲಕರಿಗೆ ಸಂಕಷ್ಟ ಎದುರಾಗಲಿದೆ. ರಾತ್ರಿ ವೇಳೆ ಆಟೋ ಮತ್ತು ಟ್ಯಾಕ್ಸಿ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಆದರ್ಶ ಆಟೋ ಹಾಗೂ ಟ್ಯಾಕ್ಸಿ ಮಾಲೀಕರ ಸಂಘ್ ಅಧ್ಯಕ್ಷ ಮಂಜುನಾಥ್ ಒತ್ತಾಯಿಸಿದ್ದಾರೆ.

ನೈಟ್ ಕರ್ಫ್ಯೂಗೆ ಓಲಾ, ಉಬರ್, ಫುಡ್ ಶಾಪ್ಸ್ ಮಾಲೀಕರಿಂದ ವಿರೋಧ
ಓಲಾ, ಉಬರ್ ಚಾಲಕರು ಕೂಡ ನೈಟ್ ಕರ್ಫ್ಯೂಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನೈಟ್ ಕರ್ಫ್ಯೂ ಜಾರಿ ಮಾಡಿದರೆ ನಾವು ಸಾಯಬೇಕಷ್ಟೇ. ಈಗಾಗಲೇ ನಾವು 2 ವರ್ಷದಿಂದ ನಷ್ಟ ಅನುಭವಿಸಿದ್ದೇವೆ. ನಮಗೆ ರಾತ್ರಿ ವೇಳೆಯೇ ಹೆಚ್ಚು ಬಾಡಿಗೆಗಳು ಬರುವುದು. ನೈಟ್ ಕರ್ಫ್ಯೂ ಜಾರಿಯಾದರೆ ನಮಗೆ ಲಾಸ್ ಆಗುತ್ತದೆ. ಹೀಗಾಗಿ ದಯವಿಟ್ಟು ನೈಟ್ ಕರ್ಫ್ಯೂ ಜಾರಿ ಮಾಡಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಓಲಾ, ಉಬರ್ ಚಾಲಕರು ಮನವಿ ಮಾಡಿಕೊಂಡಿದ್ದಾರೆ.

ನೈಟ್ ಕರ್ಫ್ಯೂಗೆ ಬೀದಿಬದಿ ಫುಡ್ ಶಾಪ್ಸ್ ಮಾಲೀಕರು ಸಹ ವಿರೋಧಿಸಿದ್ದಾರೆ. ರಾತ್ರಿ ವೇಳೆಯೇ ನಮ್ಮ ವ್ಯಾಪಾರ ವಹಿವಾಟು ನಡೆಯುವುದು. ನೈಟ್ ಕರ್ಫ್ಯೂ ಜಾರಿ ಮಾಡುವುದರಿಂದ ನಮಗೆ ನಷ್ಟವಾಗುತ್ತೆ. ರಾತ್ರಿ ವೇಳೆ ವ್ಯಾಪಾರವಿಲ್ಲದೆ ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ನೈಟ್ ಕರ್ಫ್ಯೂ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.

ನೈಟ್ ಕರ್ಫ್ಯೂಗೆ ಹೋಟೆಲ್ ಮಾಲೀಕರು ಹಾಗು ಗ್ರಾಹಕರ ಬೇಸರ
ಡಿಸೆಂಬರ್ 28 ರಿಂದ ನೈಟ್ ಕರ್ಫ್ಯೂ ಜಾರಿಗೆ ಹೋಟೆಲ್ ಮಾಲೀಕರು ಹಾಗು ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ. ನೈಟ್ ಕೆಲಸ ಮುಗಿಸಿಕೊಂಡು ಬರುವವರಿಗೆ ಊಟದ ಸಮಸ್ಯೆಯಾಗುತ್ತೆ. ಸರ್ಕಾರದ ಈ ರೂಲ್ಸ್​ನಿಂದ ರಾತ್ರಿ 9ಗಂಟೆಯೊಳಗೆ ಊಟ ಮುಗಿಸಿಕೊಳ್ಳಬೇಕು. ಈ ನಿರ್ಧಾರದಿಂದ ಪ್ರಯೋಜನವೂ ಇದೆ, ಸಮಸ್ಯೆಯೂ ಆಗುತ್ತೆ ಎಂದು ಗ್ರಾಹಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೊರೊನಾ ನಂತರ ದುಡಿಮೆ ಇಲ್ಲದೇ ಹೋಟೆಲ್ ಉದ್ಯಮಕ್ಕೆ ಸಮಸ್ಯೆಯಾಗಿದೆ. ಈಗ ಮತ್ತೆ ಕರ್ಫ್ಯೂ ಮಾಡಿದ್ರೆ ಸಮಸ್ಯೆಯಾಗುತ್ತೆ. ಸರ್ಕಾರ ಹೋಟೆಲ್ ಉದ್ಯಮದ ಸಮಸ್ಯೆ ಅರ್ಥಮಾಡಿಕೊಳ್ಳಬೇಕು ಎಂದು ಮಾಲೀಕರು ಮನವಿ ಮಾಡಿದ್ದಾರೆ.

ರೆಸಾರ್ಟ್ ಮಾಲೀಕರ ಆಕ್ರೋಶ
ಸರ್ಕಾರದ ನಿರ್ಧಾರದ ವಿರುದ್ಧ ರೆಸಾರ್ಟ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಸ ವರ್ಷದ ಪಾರ್ಟಿಗೆ ರೆಸಾರ್ಟ್ ಮಾಲೀಕರು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಆದ್ರೆ ನೈಟ್ ಕರ್ಫ್ಯೂ ಜಾರಿ ಹಿನ್ನೆಲೆ ಬುಕ್ಕಿಂಗ್​ಗೆ ಜನ ಬರುತ್ತಿಲ್ಲ. ಲಕ್ಷ ಲಕ್ಷ ಖರ್ಚು ಮಾಡಿ ಸಿದ್ದತೆಗಳನ್ನು ಮಾಡಿಕೊಂಡಿದ್ದರೂ ಗ್ರಾಹಕರು ಬರ್ತಿಲ್ಲ ಎಂದು ಮಾಲೀಕರು ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಸಲ್ಮಾನ್​ ಖಾನ್​ ಜನ್ಮದಿನ ಸಂಭ್ರಮ; 56ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಸ್ಟಾರ್​ ನಟ

Published On - 8:47 am, Mon, 27 December 21