ಬ್ಯಾನರ್ ಗಲಾಟೆಗಳ ಬೆನ್ನಲ್ಲೇ ಎಚ್ಚೆತ್ತ ಜಿಬಿಎ: ಬೆಂಗಳೂರಿನಾದ್ಯಂತ ಅನಧಿಕೃತ ಬ್ಯಾನರ್ ತೆರೆವು ಕಾರ್ಯ ಚುರುಕು

ಡಿಸಿಎಂ ಡಿಕೆ ಶಿವಕುಮಾರ್ ಸೂಚನೆಯಂತೆ ಬೆಂಗಳೂರಿನಲ್ಲಿ ಅನಧಿಕೃತ ಬ್ಯಾನರ್, ಫ್ಲೆಕ್ಸ್‌ಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಚುರುಕುಗೊಂಡಿದೆ. ಸ್ಕೈವಾಕ್ ಮತ್ತು ಬಸ್ ಶೆಲ್ಟರ್ ಸಮೀಪದ ವಿವಿಧ ವಿಭಾಗಗಳಲ್ಲಿ ಅನಧಿಕೃತ ಬ್ಯಾನರ್​​ಗಳನ್ನು ತೆಗೆದುಹಾಕಲಾಗುತ್ತಿದೆ. ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 473 ಬ್ಯಾನರ್‌ಗಳನ್ನು ತೆರವುಗೊಳಿಸಿ 15,000 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಬ್ಯಾನರ್ ಗಲಾಟೆಗಳ ಬೆನ್ನಲ್ಲೇ ಎಚ್ಚೆತ್ತ ಜಿಬಿಎ: ಬೆಂಗಳೂರಿನಾದ್ಯಂತ ಅನಧಿಕೃತ ಬ್ಯಾನರ್ ತೆರೆವು ಕಾರ್ಯ ಚುರುಕು
ಸಾಂದರ್ಭಿಕ ಚಿತ್ರ

Updated on: Jan 21, 2026 | 7:05 AM

ಬೆಂಗಳೂರು, ಜನವರಿ 21: ಬಳ್ಳಾರಿ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದ ಬ್ಯಾನರ್ ಗಲಾಟೆಗಳ ಬೆನ್ನಲ್ಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಧಿಕಾರಿಗಳು ಬೆಂಗಳೂರಿನಾದ್ಯಂತ (Bangalore) ಅಕ್ರಮವಾಗಿ ಅಳವಡಿಸಿರುವ ಬ್ಯಾನರ್, ಫ್ಲೆಕ್ಸ್​​ಗಳ ತೆರೆವು ಕಾರ್ಯ ಚರುಕುಗೊಳಿಸಿದ್ದಾರೆ. ನಗರದಾದ್ಯಂತ ಸ್ಕೈವಾಕ್ ಮತ್ತು ಬಸ್ ಶೆಲ್ಟರ್‌ಗಳ ಸಮೀಪ ಅನಧಿಕೃತವಾಗಿ ಅಳವಡಿಸಲಾಗಿದ್ದ ಫ್ಲೆಕ್ಸ್‌ಗಳು ಮತ್ತು ಬ್ಯಾನರ್‌ಗಳನ್ನು ತೆಗೆದುಹಾಕಲಾಗಿದೆ. ಶಾಂತಿನಗರ ವಿಭಾಗದಲ್ಲಿ ಏಳು, ಸಿ.ವಿ. ರಾಮನ್ ನಗರದಲ್ಲಿ ಆರು, ಶಿವಾಜಿನಗರದಲ್ಲಿ ಹದಿಮೂರು, ಚಿಕ್ಕಪೇಟೆಯಲ್ಲಿ ಇಪ್ಪತ್ತೆರಡು ಹಾಗೂ ಗಾಂಧಿನಗರದಲ್ಲಿ ಮೂರು ಹೋರ್ಡಿಂಗ್ಸ್‌ಗಳನ್ನು ತೆರವು ಮಾಡಲಾಗಿದೆ.

ಇದಲ್ಲದೆ, ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 473 ಫ್ಲೆಕ್ಸ್‌ಗಳು ಮತ್ತು ಬ್ಯಾನರ್‌ಗಳನ್ನು ತೆರವುಗೊಳಿಸಿ 15,000 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಹೆಚ್ಚುತ್ತಿರುವ ಅನಧಿಕೃತ ಫ್ಲೆಕ್ಸ್‌ಗಳು ಮತ್ತು ಬ್ಯಾನರ್‌ಗಳ ಪಿಡುಗು ನಿವಾರಣೆಗೆ ಕಠಿಣ ಕ್ರಮ ಕೈಗೊಳ್ಳುವಂತೆ ಇತ್ತೀಚೆಗೆ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದರು. ಅದರಂತೆ ಕ್ರಮ ಕೈಗೊಳ್ಳುತ್ತಿರುವ ಜಿಬಿಎ, ಅನಧಿಕೃತವಾಗಿ ಬ್ಯಾನರ್ ಹಾಗೂ ಫ್ಲೆಕ್ಸ್ ಅಳವಡಿಸುವವರ ವಿರುದ್ಧ ಪ್ರಕರಣ ದಾಖಲಿಸುವುದಾಗಿಯೂ ಎರಡು ದಿನಗಳ ಹಿಂದೆ ಎಚ್ಚರಿಕೆ ನೀಡಿತ್ತು.

ಜಂಕ್ಷನ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಬ್ಯಾನರ್‌ಗಳು ಮತ್ತು ಫ್ಲೆಕ್ಸ್‌ಗಳು ತೀವ್ರವಾಗಿ ಹೆಚ್ಚಿವೆ. ಇಂಥ ಪ್ರಕರಣಗಳನ್ನು ಹಗುರವಾಗಿ ಪರಿಗಣಿಸುವುದಿಲ್ಲ. ಇದು ನಗರದ ನೋಟವನ್ನು ಹಾಳು ಮಾಡುವುದಲ್ಲದೆ, ಪ್ರಯಾಣಿಕರಿಗೆ ಸುರಕ್ಷತೆಯ ಅಪಾಯಗಳನ್ನುಂಟುಮಾಡುತ್ತದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಹೇಳಿದ್ದರು.

ಇದನ್ನೂ ಓದಿ: ಬೆಂಗಳೂರು: ಜಿಬಿಎ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಕಾಂಗ್ರೆಸ್​​​ನಲ್ಲೇ ಅಪಸ್ವರ!

ಈವರೆಗೆ ಅಧಿಕಾರಿಗಳು ನೋಟಿಸ್ ನೀಡುವುದು ಅಥವಾ ಹೊಣೆಗಾರರಿಗೆ ದಂಡ ವಿಧಿಸುವುದನ್ನಷ್ಟೇ ಮಾಡುತ್ತಿದ್ದರು. ಇನ್ನು ಮುಂದೆ, ಅನುಮೋದನೆಯಿಲ್ಲದೆ ಬ್ಯಾನರ್‌ಗಳನ್ನು ಹಾಕುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಮುಖ್ಯ ಆಯುಕ್ತರು ಎಚ್ಚರಿಕೆ ನೀಡಿದ್ದರು. ಈ ಕ್ರಮದಿಂದ ಪುನರಾವರ್ತಿತ ನಿಯಮ ಉಲ್ಲಂಘನೆಗಳನ್ನು ತಡೆಯಬಹುದು ಎಂದು ಅವರು ಆಶಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:03 am, Wed, 21 January 26