
ಬೆಂಗಳೂರು, (ಜನವರಿ 16): ಶುಚಿತ್ವದ ಕೊರತೆ, ಎಫ್‌ಎಸ್‌ಎಸ್‌ಎಐ ಮಾನದಂಡಗಳ ಉಲ್ಲಂಘನೆ, ಸುರಕ್ಷತಾ ಮಾರ್ಗಸೂಚಿಗಳ ಪಾಲಿಸದಿರುವುದು ಸೇರಿ ನಿಯಮಗಳನ್ನ ಪಾಲಿಸದ ಪಿಜಿಗಳ (paying guest )ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸಮರ ಸಾರಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಶಿವಾಜಿನಗರ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಆರೋಗ್ಯಾಧಿಕಾರಿಗಳು ಪಿಜಿ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ. ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ನಿರ್ದೇಶನದ ಮೇರೆಗೆ 204 ಪೇಯಿಂಗ್ ಗೆಸ್ಟ್(ಪಿಜಿ)ಗಳನ್ನ ಪರಿಶೀಲನೆ ನಡೆಸಿರುವ ಅಧಿಕಾರಿಗಳು, ಲೋಪ ಕಂಡುಬಂದ ಹಿನ್ನೆಲೆ 6 ಪಿಜಿಗಳಿಗೆ ಬೀಗ ಜಡಿದಿದ್ದಾರೆ. ಹಾಗೇ ಜೊತೆಗೆ 1.96 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.
ಶುದ್ಧ ಕುಡಿಯುವ ನೀರು, ಶುಚಿತ್ವ, ಅಡುಗೆ ಕೋಣೆ ನೈರ್ಮಲ್ಯ, ಸುರಕ್ಷತೆ, ಉತ್ತಮ ಶೌಚಾಲಯ ವ್ಯವಸ್ಥೆ, ಅಗ್ನಿಶಾಮಕ ಸಾಧನ, ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಕೆ ಮತ್ತು FSSAIನ ಆಹಾರ ಸುರಕ್ಷತಾ ಪ್ರಮಾಣ ಪತ್ರ ಸೇರಿದಂತೆ ಮೂಲಭೂತ ಸೌಕರ್ಯಗಳು ಇರುವ ಒಟ್ಟು 204 ಪೇಯಿಂಗ್ ಗೆಸ್ಟ್ ವಸತಿ ಗೃಹ ಉದ್ದಿಮೆಗಳ ತಪಾಸಣೆ ನಡೆಸಿದ್ದಾರೆ. 7 ದಿನಗಳ ಒಳಗಾಗಿ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಕಾರ್ಯನಿರ್ವಹಣೆ ಮಾಡುವುದಕ್ಕೆ ಪಿಜಿ ಮಾಲೀಕರಿಗೆ ತಿಳುವಳಿಕೆ ಪತ್ರ ನೀಡಿ, ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ವೇಳೆ ಚಿಕ್ಕಪೇಟೆ ಮತ್ತು ಶಿವಾಜಿನಗರ ಆರೋಗ್ಯ ವೈದ್ಯಾಧಿಕಾರಿಗಳಿದ್ದರು.
ಬೆಂಗಳೂರಿನಾದ್ಯಂತ ಸಾಕಷ್ಟು ಜೆಂಟ್ಸ್, ಗರ್ಲ್ಸ್ ಪಿಜಿಗಳು ಇದ್ದು. ರಾಜ್ಯದ ಬೇರೆ ಬೇರೆ ಭಾಗಗಳಿಂದ ನಗರಕ್ಕೆ ಬರುವ ಸಾವಿರಾರು ಜನರು ಪಿಜಿಗಳಲ್ಲಿ ವಾಸಿಸುತ್ತಿದ್ದಾರೆ. ಜನ ಹೆಚ್ಚಾದಂತೆ ಕಟ್ಟಡ ನಿಯಮ, ಸುರಕ್ಷತಾ ಮಾನದಂಡ ಉಲ್ಲಂಘಿಸಿ ಪಿಜಿಗಳನ್ನು ನಡೆಸಲಾಗುತ್ತಿದೆ. ಹೌದು.. ರಾಜಧಾನಿ ಬೆಂಗಳೂರಿನಲ್ಲಿ ಅಧಿಕೃತ ಪಿಜಿಗಳಿಗಿಂತ ಅನಧಿಕೃತ ಪಿಜಿಗಳ ಹಾವಳಿ ಹೆಚ್ಚಾಗಿದೆ. ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಪರವಾನಗಿ ಪಡೆಯದೆ ಕಾರ್ಯಾಚರಿಸುತ್ತಿರುವ 165 ಪಿಜಿಗಳು ಪತ್ತೆಯಾಗಿದ್ದವು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ನಿರಾತಂಕವಾಗಿ ಕಟ್ಟಡ ಬೈಲಾ, ಮಾರ್ಗಸೂಚಿ, ಪರವಾನಗಿ ನಿಯಮ ಉಲ್ಲಂಘನೆ, ಸುರಕ್ಷತಾ ಮಾನದಂಡಗಳನ್ನು ಅನುಸರಿಸದೇ ರಾಜಾರೋಷವಾಗಿ ಪಿಜಿಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ಪಿಜಿಗಳ ಮೇಲೆ ಬೆಂಗಳೂರು ಪೂರ್ವ ನಗರ ಪಾಲಿಕೆ ಆರೋಗ್ಯ ಅಧಿಕಾರಿಗಳ ತಂಡ, ದಾಳಿ ನಡೆಸಿ ಬಿಸಿ ಮುಟ್ಟಿಸುವ ಕೆಲಸ ಮಾಡಿತ್ತು.
ಕಳೆದ ವರ್ಷದ ಆಗಸ್ಟ್‌ನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ – 2020ರ ಕಾಯಿದೆಯಡಿ ಪಿಜಿಗಳಿಗೆ ಮಾರ್ಗಸೂಚಿ ಪ್ರಕಟಿಸಲಾಗಿತ್ತು. ಅಲ್ಲದೆ, ವಲಯ ಆರೋಗ್ಯಾಧಿಕಾರಿ, ಆರೋಗ್ಯ ವೈದ್ಯಾಧಿಕಾರಿಗಳು ಮತ್ತು ಹಿರಿಯ ಆರೋಗ್ಯ ಪರಿವೀಕ್ಷಕರು ತಮ್ಮ – ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಪಿಜಿಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಆದರೂ, ಮಾರ್ಗಸೂಚಿ ಪಾಲನೆ ಮಾಡದ 187 ಪಿಜಿಗಳಿಗೆ ಬೀಗ ಜಡಿದಿದ್ದರು.
ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ