AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲ್ಲಿಕಾರ್ಜುನ ಖರ್ಗೆ, ರಾಹುಲ್​ ಗಾಂಧಿ ಭೇಟಿ ಬೆನ್ನಲ್ಲೇ ಡಿಕೆ ಶಿವಕುಮಾರ್ ಬಣದಲ್ಲಿ ಹೆಚ್ಚಾಯ್ತು ಉತ್ಸಾಹ!

ಸಂಕ್ರಾಂತಿ ಹಬ್ಬ ಮುಗಿದಿದೆ. ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿರುವ ಕ್ರಾಂತಿ ಮಾತ್ರ ಮುಗಿಯುತ್ತಿಲ್ಲ. ಸಂಕ್ರಾಂತಿ ಕಳೆದು ಶಿವರಾತ್ರಿ ಬಂದರೂ ಕುರ್ಚಿ ಕಾಳಗ ಮುಂದುವರಿಯುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಆದರೆ, ಡಿಸಿಎಂ ಡಿಕೆ ಶಿವಕುಮಾರ್ ಬಣ ಮಾತ್ರ ಕ್ರಾಂತಿಯ ನಿರೀಕ್ಷೆಯಲ್ಲಿದೆ. ದಕ್ಷಿಣಾಯಣದಿಂದ ಉತ್ತರಾಯಣ ಕಡೆಗೆ ಸೂರ್ಯ ಪಥ ಬದಲಿಸಿದಂತೆ ನಮ್ಮ ಪಥವೂ ದೆಹಲಿ ಕಡೆಗೆ ಬದಲಾಗಿದೆ ಎನ್ನುತ್ತಿರುವ ಡಿಕೆಶಿ ಬಣ ಪಟ್ಟ ಸಿಗುವ ನಿರೀಕ್ಷೆಯಲ್ಲಿದೆ.

ಮಲ್ಲಿಕಾರ್ಜುನ ಖರ್ಗೆ, ರಾಹುಲ್​ ಗಾಂಧಿ ಭೇಟಿ ಬೆನ್ನಲ್ಲೇ ಡಿಕೆ ಶಿವಕುಮಾರ್ ಬಣದಲ್ಲಿ ಹೆಚ್ಚಾಯ್ತು ಉತ್ಸಾಹ!
ಡಿಕೆ ಶಿವಕುಮಾರ್
ಪ್ರಸನ್ನ ಗಾಂವ್ಕರ್​
| Edited By: |

Updated on: Jan 17, 2026 | 7:57 AM

Share

ನವದೆಹಲಿ, ಜನವರಿ 17: ಸಂಕ್ರಾಂತಿ ಮುಗಿಯುತ್ತಿದ್ದಂತೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ದೆಹಲಿಗೆ ಹಾರಿದ್ದಾರೆ. ಅಸ್ಸಾಂ ಚುನಾವಣಾ ವೀಕ್ಷಕರಾಗಿರುವ ಡಿಕೆಶಿ ಎಐಸಿಸಿ ಸಭೆಯಲ್ಲಿ ಭಾಗಿಯಾಗಿ ಚರ್ಚಿಸಿದ್ದಾರೆ. ದೆಹಲಿಯಲ್ಲಿರುವ ಡಿಕೆ ಶಿವಕುಮಾರ್ ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ರಾಹುಲ್ ಗಾಂಧಿಯವರನ್ನೂ ಭೇಟಿಯಾಗಿದ್ದಾರೆ. ಖರ್ಗೆ ಮತ್ತು ರಾಹುಲ್​ ಗಾಂಧಿ ಭೇಟಿ ಬಳಿಕ ಮಾತನಾಡಿದ ಡಿಸಿಎಂ, ಅಲ್ಲಿ ಚರ್ಚೆ ಆಗಿದ್ದನ್ನೆಲ್ಲ ಹೇಳಲಾಗದು. ಬೇರೆ ಏನೂ ಮಾತನಾಡಲು ನಾನು ತಯಾರಿಲ್ಲ ಎಂದಿದ್ದಾರೆ.

ಡಿಕೆಶಿ ಬಣದಲ್ಲಿ ಹೆಚ್ಚಾಯ್ತು ಉತ್ಸಾಹ

ಮೊನ್ನೆ ತಮಿಳುನಾಡಿಗೆ ಹೋಗುತ್ತಿದ್ದ ರಾಹುಲ್ ಗಾಂಧಿ ಮೈಸೂರು ವಿಮಾನ ನಿಲ್ದಾಣದಲ್ಲಿ, ‘ದೆಹಲಿಗೆ ಬನ್ನಿ’ ಎಂದು ಡಿಸಿಎಂಗೆ ಹೇಳಿದ್ದರು. ಇದರ ಬೆನ್ನಲ್ಲೇ ಡಿಕೆಶಿ ದೆಹಲಿಗೆ ತೆರಳಿದ್ದು, ಇವತ್ತೂ ದೆಹಲಿಯಲ್ಲೇ ಇರಲಿದ್ದಾರೆ. ನಮ್ಮ ಪಥ ದೆಹಲಿ ಕಡೆಗೆ ಬದಲಾಗಿದೆ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಹೇಳಿದ್ದಾರೆ. ಸಂಕ್ರಾಂತಿ ಮುಗಿಯಿತು. ಈ ನಡುವೆ ಇನ್ನೇನಿದ್ರೂ ಯುಗಾದಿಗೆ ನೋಡೋಣ ಎಂದು ಸಚಿವ ಜಮೀರ್ ಹೇಳಿದ್ದಾರೆ.

ಅತ್ತ ಡಿಕೆ ಶಿವಕುಮಾರ್ ದೆಹಲಿಯಲ್ಲಿದ್ದರೆ, ಇತ್ತ ಸಿಎಂ ಸಿದ್ದರಾಮಯ್ಯ ಮಾಜಿ ಸಚಿವ ರಾಜಣ್ಣ ನಿವಾಸದಲ್ಲಿ ನಾಟಿಕೋಳಿ ಸಾರು, ರಾಗಿ ಮುದ್ದೆ ಸವಿದಿದ್ದಾರೆ. ರಾಜಣ್ಣಗೆ ಮತ್ತೆ ಸಚಿವ ಸ್ಥಾನದ ನೀಡುವ ಬಗ್ಗೆ ಹೈಕಮಾಂಡ್ ಜೊತೆ ಮಾತಾಡ್ತೀನಿ ಎಂದಿದ್ದಾರೆ. ಆದರೆ ಡಿಕೆಶಿ ದೆಹಲಿಗೆ ತೆರಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ‘ಗೊತ್ತಿಲ್ಲಪ್ಪ’ ಎಂದರು.

ಇದನ್ನೂ ಓದಿ: 2 ದಿನಗಳ ಕಾಲ ಡಿಕೆ ಶಿವಕುಮಾರ್ ದೆಹಲಿ ಪ್ರವಾಸ: ರಾಹುಲ್ ಗಾಂಧಿ ಭೇಟಿಯಾಗ್ತಾರಾ, ಸಿಗುತ್ತಾ ಕುರ್ಚಿ ಅಭಯ?

ಏತನ್ಮಧ್ಯೆ, ವಿಶೇಷ ಅಧಿವೇಶನ, ಸಂಸತ್ ಬಜೆಟ್ ಸೆಷನ್ ನಡುವೆ ಕಾಂಗ್ರೆಸ್ ಹೈಕಮಾಂಡ್​ಗೆ ಸಮಯ ಸಿಗುತ್ತಾ? ರಾಜ್ಯ ನಾಯಕತ್ವದ ಬಗ್ಗೆ ಚರ್ಚಿಸುತ್ತಾರಾ ಎಂಬುದೇ ಸದ್ಯದ ಪ್ರಶ್ನೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ