Nandini Products: ಇನ್ಮುಂದೆ ಇಂದಿರಾ ಕ್ಯಾಂಟೀನ್​ಗಳಲ್ಲೂ ಸಿಗಲಿದೆ ನಂದಿನಿ ಉತ್ಪನ್ನ! ಜಿಬಿಎ ಹೊಸ ಪ್ಲಾನ್

ಬೆಂಗಳೂರಿನಲ್ಲಿ ಕಡಿಮೆ ದುಡ್ಡಿನಲ್ಲಿ ಬಡವರ ಹೊಟ್ಟೆ ತುಂಬಿಸುವ ತಾಣ ಎಂದರೆ ಅದು ಇಂದಿರಾ ಕ್ಯಾಂಟೀನ್. ತಿಂಡಿ, ಊಟ ಕೊಡುವ ಸಮಯ ಬಿಟ್ಟರೆ ಉಳಿದ ಸಂದರ್ಭಗಳಲ್ಲಿ ಇಂದಿರಾ ಕ್ಯಾಂಟೀನ್ ಖಾಲಿ ಹೊಡೆಯುತ್ತಿರುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇಂದಿರಾ ಕ್ಯಾಂಟೀನ್​ಗಳಲ್ಲಿ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕೊಡೋಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚಿಂತನೆ ನಡೆಸಿದೆ.

Nandini Products: ಇನ್ಮುಂದೆ ಇಂದಿರಾ ಕ್ಯಾಂಟೀನ್​ಗಳಲ್ಲೂ ಸಿಗಲಿದೆ ನಂದಿನಿ ಉತ್ಪನ್ನ! ಜಿಬಿಎ ಹೊಸ ಪ್ಲಾನ್
ಇಂದಿರಾ ಕ್ಯಾಂಟೀನ್​ (ಸಾಂದರ್ಭಿಕ ಚಿತ್ರ)

Updated on: Dec 12, 2025 | 7:37 AM

ಬೆಂಗಳೂರು, ಡಿಸೆಂಬರ್ 12: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವದ ಯೋಜನೆ ಇಂದಿರಾ ಕ್ಯಾಂಟೀನ್ (Indira Canteen). ಇದು ಬಡವರಿಗೆ ಕಡಿಮೆ ದುಡ್ಡಿನಲ್ಲಿ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದೆ. ಆದರೆ ಹಿತಾಸಕ್ತಿ ಕೊರತೆಯಿಂದಾಗಿ ನಗರದಲ್ಲಿ ಈ ಕ್ಯಾಂಟೀನ್​ಗಳ ಸಮರ್ಪಕ ನಿರ್ವಹಣೆ ಅಷ್ಟಕಷ್ಟೇ ಎಂಬಂತಾಗಿದೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಊಟ ನೀಡುವ ಒಂದೊಂದು ಗಂಟೆ ಮಾತ್ರ ಇಂದಿರಾ ಕ್ಯಾಂಟೀನ್​ಗಳಲ್ಲಿ ಜನರಿಗೆ ಎಂಟ್ರಿ ಇರುತ್ತದೆ. ಹೀಗಾಗಿ ಉಳಿದ ವೇಳೆಯಲ್ಲಿ ಮುಚ್ಚುವ ಬದಲು ಅನ್ಯ ಉದ್ದೇಶಕ್ಕೂ ಬಳಕೆಗೂ ಮಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚಿಂತನೆ ನಡೆಸಿದೆ.

ಈ ವಿಚಾರವಾಗಿ ಮಾತನಾಡಿರುವ ಜಿಬಿಎ ಮುಖ್ಯ ಆಯುಕ್ತ ಎಂ ಮಹೇಶ್ವರ ರಾವ್, ನಗರದ ಬಹತೇಕ ವಾರ್ಡ್​​ಗಳಲ್ಲಿ ಸುಸಜ್ಜಿತ ರೀತಿಯಲ್ಲಿ ಇಂದಿರಾ ಕ್ಯಾಂಟೀನ್​ಗಳ ನಿರ್ಮಾಣ ಆಗಿದೆ. ಊಟ, ತಿಂಡಿ ಕೊಡಲು ಇಂತಿಷ್ಟು ಸಮಯ ನಿಗದಿಯಾಗಿದೆ. ಉಳಿದ ವೇಳೆ ಅಮೂಲ್ಯವಾದ ಜಾಗವನ್ನು ಖಾಲಿ ಬಿಡುವುದಕ್ಕಿಂತ ಕೆಎಂಎಫ್​ ನಂದಿನಿಯ ಹಾಲು, ಮೊಸರು ಸೇರಿ ಇತರ ಉತ್ಪನ್ನಗಳ ಮಾರಾಟಕ್ಕೆ ಅನುವು ಮಾಡಿಕೊಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಜಿಬಿಎ ಪ್ರಸ್ತಾವನೆ ಕೆಎಂಎಫ್ ಬೆಳವಣಿಗೆಗೆ ಪೂರಕವಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ನಂದಿನಿ ಬೂತ್​ಗಳಲ್ಲಿ ಬೇರೆ ಬ್ರಾಂಡ್ ಪ್ರಾಡಕ್ಟ್ ಗೆ ಬ್ರೇಕ್; ಕೆಎಂಎಫ್ ಹೊಸ ರೂಲ್ಸ್

ಒಟ್ಟಾರೆಯಾಗಿ, ನಗರದ ಇಂದಿರಾ ಕ್ಯಾಂಟೀನ್​​ಗಳಲ್ಲಿ ಮುಂದಿನ ದಿನಗಳಲ್ಲಿ ಊಟ ತಿಂಡಿ ಮಾತ್ರವಲ್ಲದೆ ಹಾಲು, ಮೊಸರು, ಮಜ್ಜಿಗೆ ಸೇರಿ ನಂದಿನಿಯ ತರಹೇವಾರಿ ಉತ್ಪನ್ನಗಳು ಜನರಿಗೆ ಸಿಗುವ ಸಾಧ್ಯತೆ ಇದೆ.

ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ