ಬೆಂಗಳೂರು: ಕೊರೊನಾ ಸಮಯದಲ್ಲಿ ಶ್ಲಾಘನೀಯ ಸೇವೆ ಒದಗಿಸಿದ ಆಶಾ ಕಾರ್ಯಕರ್ತೆಯರನ್ನು ಸರ್ಕಾರ ಸಂಪೂರ್ಣವಾಗಿ ಮರೆತಿದೆ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು. ಅವರು ಎದುರಿಸುತ್ತಿರುವ ಸಂಕಷ್ಟದತ್ತ ಸರ್ಕಾರ ಕಣ್ತೆರೆದು ನೋಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ಹೇಳಿದರು. ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು, ಇವತ್ತು ಆಶಾ ಕಾರ್ಯಕರ್ತೆಯರು ನ್ಯಾಯಯುತ ಬೇಡಿಕೆ ಇರಿಸಿದ್ದಾರೆ. ಅವರಿಗೆ ಕನಿಷ್ಠ ವೇತನವನ್ನು ಖಾತ್ರಿಪಡಿಸಬೇಕು. ದೇಶದ ಸಂಪತ್ತು ಎಲ್ಲಿ ಹೋಗುತ್ತಿದೆ ಅಂತ ವಿಚಾರ ಮಾಡಬೇಕು. ಸಂವಿಧಾನದ 39ನೇ ವಿಧಿ ಹೇಳುವ ಸಂಪತ್ತು ಕೇವಲ ಕೆಲವರ ಕೈಗೆ ಮಾತ್ರ ಸೇರಬಾರದು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಆಶಾ ಕಾರ್ಯಕರ್ತೆಯರು ಕೋವಿಡ್ ಸಂಕಷ್ಟ ಸಮಯದಲ್ಲಿ ಜನರ ಸೇವೆ ಮಾಡಿದ್ದಾರೆ. ಆದರೆ ಅವರಿ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಿಮ್ಮ ಹೋರಾಟದಲ್ಲಿ ನಾನು ಭಾಗಿಯಾಗುತ್ತೇನೆ. ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ. ಸಮಾನ ವೇತನ ಸಿಗಬೇಕು ಎನ್ನುವುದು ಸಂವಿಧಾನ ನೀಡಿರುವ ಹಕ್ಕು. ಆದರೆ ಸರ್ಕಾರ ಕೇವಲ ಬಾಯಿಮಾತಿನ ಭರವಸೆಗಳನ್ನು ನೀಡುತ್ತಿದೆ. ಯಾವುದೇ ಭರವಸೆಯನ್ನು ಈಡೇರಿಸುತ್ತಿಲ್ಲ ಎಂದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂದು ಆಶಾ ಕಾರ್ಯಕರ್ತೆಯರಿಂದ ಬೃಹತ್ ಪ್ರತಿಭಟನೆ; ನಗರದಲ್ಲಿ ಟ್ರಾಫಿಕ್ ಜಾಮ್ ಸಾಧ್ಯತೆ
ನಾನು ರಾಜಕಾರಣಿಯೂ ಅಲ್ಲ, ರಾಜಕೀಯಕ್ಕೆ ಸೇರಿದವನೂ ಅಲ್ಲ. ಆದರೂ ನಾನು ಮೂರೂ ಪಕ್ಷದವರ ಕಾರ್ಯವೈಖರಿ ಗಮನಿಸಿದ್ದೇನೆ. ಸರ್ಕಾರಿ ನೌಕರರು ನಿಗದಿ ಸಮಯದಷ್ಟೆ ಕೆಲಸ ಮಾಡುತ್ತಾರೆ. ಆದರೆ ಆಶಾ ಕಾರ್ಯಕರ್ತೆಯರು ಎಡೆಬಿಡದೆ ಕೆಲಸ ಮಾಡುತ್ತಿದ್ದರೂ ಸರ್ಕಾರ ಇವರ ಕಡೆ ಗಮನ ಕೊಡುತ್ತಿಲ್ಲ. ಸಮಸ್ಯೆ ಉದ್ಭವವಾಗುವ ಮೊದಲೇ ಸರ್ಕಾರವು ಆಶಾ ಕಾರ್ಯಕರ್ತೆಯರಿಗೆ ನೆಮ್ಮದಿ ಮೂಡಿಸಬೇಕು ಎಂದು ಒತ್ತಾಯಿಸಿದರು.
ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ನಾಗಲಕ್ಷ್ಮೀ ಮಾತನಾಡಿ, ನಾವು ಇಂದು ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ ನಡೆಸುತ್ತಿದ್ದೇವೆ. 42 ಸಾವಿರ ಆಶಾ ಕಾರ್ಯಕರ್ತೆಯರು ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ. ದುಡಿಯುವ ಸೇವೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಸಹಾಯಧನವೇನೋ ಹೆಚ್ಚಾಗಿದೆ. ಆದರೆ ಮೂರು ತಿಂಗಳುಗಳಿಂದ ಸಂಬಳ ಸಿಕ್ಕಿಲ್ಲ. ಕೇಂದ್ರ ಸರ್ಕಾರದ ಆರ್ಸಿಎಚ್ ಪೋರ್ಟಲ್ನ ತಾಂತ್ರಿಕ ದೋಷದಿಂದ ಸಮಸ್ಯೆ ಹೆಚ್ಚಾಗಿದೆ ಎಂದು ಹೇಳಿದರು.
ಬಹುತೇಕ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 1 ಸಾವಿರ ರೂಪಾಯಿಯೂ ಸಿಗುತ್ತಿಲ್ಲ. ದಿನಕ್ಕೆ 2ರಿಂದ 3 ಗಂಟೆ ಕೆಲಸ ಮಾಡಿದರೆ ಸಾಕು ಎಂದು ಸರ್ಕಾರ ಹೇಳುತ್ತದೆ. ಆದರೆ ನಮಗೆ 32ಕ್ಕೂ ಹೆಚ್ಚು ಕೆಲಸಗಳನ್ನು ನೀಡಿದ್ದಾರೆ. ದಿನಕ್ಕೆ 11ರಿಂದ 12 ಗಂಟೆ ಕೆಲಸ ಮಾಡಿಸುತ್ತಾರೆ. ನಮ್ಮ ಬೇಡಿಕೆಗಳ ಬಗ್ಗೆ ಗಮನ ಕೊಡುವುದಿಲ್ಲ. ಇದು ನಮ್ಮ ಪ್ರತಿಭಟನೆಯ ಆರಂಭವಷ್ಟೇ. ನಮ್ಮ ಬೇಡಿಕೆ ಈಡೇರದಿದ್ದರೆ ಎಲ್ಲ 42 ಸಾವಿರ ಕಾರ್ಯಕರ್ತೆಯರೂ ಬೆಂಗಳೂರಿಗೆ ಲಗ್ಗೆ ಇಡುತ್ತೇವೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು.
ಮಳೆ ಮಧ್ಯೆಯೂ ಮುಂದುವರಿದ ಪ್ರತಿಭಟನೆ
ಮಳೆ ಮಧ್ಯೆಯೂ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಮುಂದುವರಿದಿದೆ. ಬಹುತೇಕ ಕಾರ್ಯಕರ್ತೆಯರು ಕೊಡೆ ಹಿಡಿದೇ ಪ್ರತಿಭಟಿಸುತ್ತಿದ್ದಾರೆ. ಇತ್ತ ಪ್ರತಿಭಟನೆ ಹಾಗೂ ಮಳೆ ಹಿನ್ನಲೆಯಲ್ಲಿ ಸಾಕಷ್ಟು ವಾಹನ ಸವಾರರು ಟ್ರಾಫಿಕ್ ಜಾಂನಲ್ಲಿ ಸಿಲುಕಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಆರೋಗ್ಯ ಇಲಾಖೆಯ ನಿರ್ದೇಶಕ ಪ್ರಭುಗೌಡ ಆಶಾ ಕಾರ್ಯಕರ್ತೆಯರ ಸಮಸ್ಯೆ ಆಲಿಸಿದರು.
ತಾಜಾ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:41 pm, Tue, 17 May 22