Namma BMTC: ಕೊನೆಗೂ ಅಸ್ತಿತ್ವಕ್ಕೆ ಬಂತು ‘ನಮ್ಮ ಬಿಎಂಟಿಸಿ’ ಬಸ್ ಟ್ರ್ಯಾಕಿಂಗ್ ಮೊಬೈಲ್​ ಆ್ಯಪ್

| Updated By: Digi Tech Desk

Updated on: Apr 20, 2023 | 6:23 PM

ಹಲವು ದಿನಗಳ ಕಾಯುವಿಕೆ ನಂತರ ಇದೀಗ ‘ನಮ್ಮ ಬಿಎಂಟಿಸಿ’ ಬಸ್ ಟ್ರ್ಯಾಕಿಂಗ್ ಮೊಬೈಲ್​ ಆ್ಯಪ್ ಅನಾವರಣಗೊಂಡಿದೆ. ಈ ಆ್ಯಪ್ ಬಳಸಿಕೊಂಡು ಇದೀಗ ಬೆಂಗಳೂರಿಗರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳನ್ನು ಟ್ರ್ಯಾಕ್ ಮಾಡಬಹುದಾಗಿದೆ.

Namma BMTC: ಕೊನೆಗೂ ಅಸ್ತಿತ್ವಕ್ಕೆ ಬಂತು ‘ನಮ್ಮ ಬಿಎಂಟಿಸಿ’ ಬಸ್ ಟ್ರ್ಯಾಕಿಂಗ್ ಮೊಬೈಲ್​ ಆ್ಯಪ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಹಲವು ದಿನಗಳ ಕಾಯುವಿಕೆ ನಂತರ ಇದೀಗ ‘ನಮ್ಮ ಬಿಎಂಟಿಸಿ (Namma BMTC)’ ಬಸ್ ಟ್ರ್ಯಾಕಿಂಗ್ ಮೊಬೈಲ್​ ಆ್ಯಪ್ ಅನಾವರಣಗೊಂಡಿದೆ. ಈ ಆ್ಯಪ್ ಬಳಸಿಕೊಂಡು ಇದೀಗ ಬೆಂಗಳೂರಿಗರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳನ್ನು ಟ್ರ್ಯಾಕ್ ಮಾಡಬಹುದಾಗಿದೆ. ಆ್ಯಪ್ ಅನ್ನು ಬುಧವಾರ ರಾತ್ರಿ ಲೈವ್ ಮಾಡಲಾಗಿದ್ದು, ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಡೌನ್‌ಲೋಡ್ ಮಾಡಬಹುದು ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ‘ನ್ಯೂಸ್ 9’ಗೆ ತಿಳಿಸಿದ್ದಾರೆ. ಆ್ಯಪ್ ಬೀಟಾ ಪರೀಕ್ಷೆಯ ಹಂತದಲ್ಲಿದ್ದಾಗ ಅದನ್ನು ‘ನಿಮ್ ಬಸ್ (NIMMBUS)’ ಎಂದು ಕರೆಯಲಾಗುತ್ತಿತ್ತು. ಇದೀಗ ಲೈವ್ ಮಾಡುವ ವೇಳೆ ಅದನ್ನು ‘ನಮ್ಮ ಬಿಎಂಟಿಸಿ’ ಎಂದು ಹೆಸರಿಸಲಾಗಿದೆ.

‘ನಮ್ಮ ಬಿಎಂಟಿಸಿ’ ಆ್ಯಪ್ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಲಭ್ಯವಿದೆ. ಭಾಷೆ ಬದಲಾಯಿಸಲು ಸರಳವಾದ ಆಯ್ಕೆಯನ್ನೂ ನೀಡಲಾಗಿದೆ. ಸೈನ್ ಇನ್ ಮಾಡುವುದರೊಂದಿಗೆ ಅಥವಾ ಗೆಸ್ಟ್ ಯೂಸರ್ ಆಗಿಯೂ ಜನರು ಆ್ಯಪ್ ಅನ್ನು ಆನ್‌ಲೈನ್‌ನಲ್ಲಿ ಬಳಸಬಹುದು. ಸೈನ್​-ಇನ್​ ಮಾಡದೇ ಎಸ್ಒಎಸ್​, ವಿಶ್ವಾಸಾರ್ಹ ಸಂಪರ್ಕ, ನೋಟಿಫಿಕೇಶನ್​​​ ಅಲರ್ಟ್​ ಮತ್ತು ಪ್ರೊಫೈಲ್​ಗಳಂತಹ ಕೆಲವು ವೈಶಿಷ್ಟ್ಯಗಳು ಲಭ್ಯವಿರುವುದಿಲ್ಲ

ರಿಯಲ್ ಟೈಮ್ ಟ್ರ್ಯಾಕಿಂಗ್ ಮತ್ತು ಇತರ ಆಯ್ಕೆಗಳು

ಮಾರ್ಚ್​​ನಲ್ಲಿ ‘ನ್ಯೂಸ್ 9’ ವರದಿ ಮಾಡಿದಂತೆ, ಬಳಕೆದಾರ ಸ್ನೇಹಿ ಇಂಟರ್ಫೇಸ್ ಮತ್ತು ರಿಯಲ್ ಟೈಮ್ ಟ್ರ್ಯಾಕಿಂಗ್, ಹತ್ತಿರದ ನಿಲ್ದಾಣಗಳ ಮಾಹಿತಿ, ಪ್ರಯಾಣದ ಯೋಜನೆ ಮತ್ತು ಇತರ ಹಲವು ಪ್ರಮುಖ ವೈಶಿಷ್ಟ್ಯಗಳೊಂದಿಗೆ ನ್ಯಾವಿಗೇಟ್ ಮಾಡಲು ಸುಲಭವಾಗುವಂತೆ ಆ್ಯಪ್ ರೂಪಿಸಲಾಗಿದೆ.

ತುರ್ತು ಸಂದರ್ಭಗಳಲ್ಲಿ ಬಳಕೆದಾರರಿಗೆ ಸಹಾಯ ಮಾಡಲು ಎಸ್​​ಒಎಸ್ ವೈಶಿಷ್ಟ್ಯವನ್ನು ಅಪ್ಲಿಕೇಶನ್‌ನಲ್ಲಿ ಎಂಬೆಡ್ ಮಾಡಲಾಗಿದೆ. ಬಿಎಂಟಿಸಿ ಸಹಾಯವಾಣಿಗಳಿಗೆ ಸಂಪರ್ಕಿಸಲು ಆ್ಯಪ್​ನಲ್ಲಿ ಲಿಂಕ್ ಸಹ ನೀಡಲಾಗಿದೆ.

ವಾಹನ ನಿಲುಗಡೆ, ವಿಶ್ರಾಂತಿ ಕೊಠಡಿಗಳು, ಸ್ವಯಂಚಾಲಿತ ಟೆಲ್ಲರ್ ಯಂತ್ರಗಳು (ಎಟಿಎಂಗಳು), ಕುಡಿಯುವ ನೀರಿನ ಸೌಲಭ್ಯ, ನಿರ್ದಿಷ್ಟವಾಗಿ ಬಸ್ ನಿಲ್ದಾಣಗಳು ಮತ್ತು ಟ್ರಾಫಿಕ್ ಮತ್ತು ಟ್ರಾನ್ಸಿಟ್ ಮ್ಯಾನೇಜ್‌ಮೆಂಟ್ ಸೆಂಟರ್ (ಟಿಟಿಎಂಸಿಗಳು) ಒದಗಿಸುವ ಸೌಲಭ್ಯಗಳನ್ನು ಬಳಕೆದಾರರು ತಿಳಿದುಕೊಳ್ಳಬಹುದಾದ ವೈಶಿಷ್ಟ್ಯವನ್ನು ಆ್ಯಪ್ ಹೊಂದಿದೆ.

ಇದನ್ನೂ ಓದಿ: BMTC NIMMBUS App: ಬಿಎಂಟಿಸಿ ಬಹುನಿರೀಕ್ಷಿತ ನಿಮ್ ಬಸ್ ಮೊಬೈಲ್​ ಆ್ಯಪ್ ಮುಂದಿನವಾರ ಬಿಡುಗಡೆ

‘ಸಮೀಪದ ನಿಲ್ದಾಣಗಳು’ ವೈಶಿಷ್ಟ್ಯವನ್ನು ಬಳಸಿಕೊಂಡು, ಬಳಕೆದಾರರು ಬಿಎಂಟಿಸಿ, ಚಾರ್ಟರ್ಡ್ ಬಸ್‌ಗಳು, ನಮ್ಮ ಮೆಟ್ರೋ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್‌ಗಳ ನಿಲ್ದಾಣಗಳನ್ನು ತಿಳಿದುಕೊಳ್ಳಬಹುದು. ‘ಶುಲ್ಕ ಕ್ಯಾಲ್ಕುಲೇಟರ್’ ವೈಶಿಷ್ಟ್ಯವನ್ನು ಶೀಘ್ರದಲ್ಲೇ ಸೇರಿಸಲಾಗುತ್ತದೆ ಎಂದು ಬಿಎಂಟಿಸಿ ತಿಳಿಸಿದೆ.

ಆ್ಯಪ್ ಅನ್ನು 2022 ರ ಡಿಸೆಂಬರ್​​ನಲ್ಲಿ ಮತ್ತು ನಂತರ 2023 ರ ಜನವರಿ ಮತ್ತು ಮಾರ್ಚ್​ನಲ್ಲಿ ಪ್ರಾರಂಭಿಸಲು ನಿರೀಕ್ಷಿಸಲಾಗಿತ್ತು. ಆದರೆ ತಾಂತ್ರಿಕ ದೋಷಗಳು ಮತ್ತು ಇತರ ಸಮಸ್ಯೆಗಳನ್ನು ಸರಿಪಡಿಸಿ ಅನಾವರಣಗೊಳಿಸಲು ವಿಳಂಬವಾಯಿತು.

ಬೆಂಗಳೂರಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 4:29 pm, Thu, 20 April 23