ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ನಾಗಸಂದ್ರ ಮಾದಾವರ ಮಾರ್ಗ ಕೊನೆಗೂ ಕಾರ್ಯಾಚರಣೆಗೆ ಸಿದ್ಧ

ಅದು ನೆಲಮಂಗಲ, ಮಾಕಳಿ, ತುಮಕೂರು ಮಾರ್ಗದ ನಿವಾಸಿಗಳ ಹಲವು ವರ್ಷಗಳ ಕನಸು. ಏಳು ವರ್ಷಗಳಿಂದ ಕಾಮಗಾರಿ ನಡೆಯುತ್ತಲೇ ಇದೆ, ಆದರೆ ಮೆಟ್ರೋ ರೈಲು ಸಂಚಾರ ಶುರುವಾಗಿರಲೇ ಇಲ್ಲ. ಅದಕ್ಕೀಗ ಕಾಲ ಕೂಡಿ ಬಂದಿದ್ದು, ಮುಂದಿನ ವಾರದಲ್ಲಿ ನಾಗಸಂದ್ರ ಟು ಮಾದಾವರ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಲಿದೆ.

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ನಾಗಸಂದ್ರ ಮಾದಾವರ ಮಾರ್ಗ ಕೊನೆಗೂ ಕಾರ್ಯಾಚರಣೆಗೆ ಸಿದ್ಧ
ನಮ್ಮ ಮೆಟ್ರೋ (ಸಂಗ್ರಹ ಚಿತ್ರ)
Follow us
| Updated By: ಗಣಪತಿ ಶರ್ಮ

Updated on: Oct 21, 2024 | 8:17 AM

ಬೆಂಗಳೂರು, ಅಕ್ಟೋಬರ್ 21: ನಮ್ಮ ಮೆಟ್ರೋ ನಾಗಸಂದ್ರ ಟು ಮಾದಾವರ ಮಾರ್ಗ ಕೊನೆಗೂ ಕಾರ್ಯಾಚರಣೆಗೆ ಸಿದ್ಧವಾಗಿದ್ದು, ಇನ್ನೊಂದು ವಾರದಲ್ಲಿ ಕಾರ್ಯಾರಂಭ ಮಾಡಲಿದೆ. ನಮ್ಮ ಮೆಟ್ರೋದ ವಿಸ್ತರಿತ ಯೋಜನೆಯಾದ ನಾಗಸಂದ್ರ ಹಾಗೂ ಮಾದಾವರ ಮಾರ್ಗ ಉದ್ಘಾಟನೆಗೆ ಸಿದ್ದವಾಗಿದೆ. 3.14 ಕಿಮೀ ಮಾರ್ಗದಲ್ಲಿ ನಾಗಸಂದ್ರದಿಂದ ಮಾದಾವರ ನಡುವೆ ಮೂರು ನಿಲ್ದಾಣಗಳಿದ್ದು, ಮಂಜುನಾಥ ನಗರ, ಚಿಕ್ಕಬಿದರಕಲ್ಲು, ಮಾದಾವರ ಹೊಸದಾಗಿ ಹಸಿರು ಮಾರ್ಗಕ್ಕೆ ಸೇರ್ಪಡೆಯಾಗಲಿದೆ. ಒಂದು ವಾರದೊಳಗೆ ಉದ್ಘಾಟನಾ ಸಮಾರಂಭ ನಡೆಯುವ ನಿರೀಕ್ಷೆ ಇರುವುದರಿಂದ ನಿಲ್ದಾಣಗಳನ್ನ ಸುಸಜ್ಜಿತಗೊಳಿಸಲಾಗುತ್ತಿದೆ.

ಈ ಬಗ್ಗೆ ಐಟಿ ನೌಕರ ಸಜ್ಜನ್ ರೆಡ್ಡಿ ಪ್ರತಿಕ್ರಿಯಿಸಿದ್ದು, ಮಾದಾವರದಿಂದ ನಾಗಸಂದ್ರಕ್ಕೆ ಹೋಗಿ ಅಲ್ಲಿಂದ ಆಫೀಸಿಗೆ ಹೋಗಬೇಕಿತ್ತು. ಮೆಟ್ರೋ ಆರಂಭವಾದರೆ ಸಮಯ ಮತ್ತು ಹಣ ಉಳಿತಾಯ ಆಗಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಯಾವ ಪ್ರದೇಶದವರಿಗೆಲ್ಲ ಪ್ರಯೋಜನ?

ಏಷ್ಯಾದ ಅತಿ ದೊಡ್ಡ ಪ್ರದರ್ಶನ ಆಯೋಜಿಸುವ ಬೆಂಗಳೂರು ಇಂಟರ್‌ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ ಬಲಭಾಗಕ್ಕೆ ಚಿಕ್ಕ ಬಿದರಕಲ್ಲು ನಿಲ್ದಾಣವಿದೆ. ಈ ಮಾರ್ಗ ಪೂರ್ಣಗೊಳ್ಳುವುದರಿಂದ ನೆಲಮಂಗಲ, ಮಾದನಾಯಕನಹಳ್ಳಿ, ಮಾಕಳಿ ನಿವಾಸಿಗಳಿಗೆ, ನಾಗಸಂದ್ರ-ಮಾದಾವರ ಮಾರ್ಗದ ಮೂರು ನಿಲ್ದಾಣಗಳ ಸಮೀಪದ ಅಪಾಟ್ಮೆಂಟ್‌ಗಳ ನಿವಾಸಿಗಳು ಮತ್ತು ಸುತ್ತ ಮುತ್ತಲಿನ ನಿವಾಸಿಗಳಿಗೆ ಸಹಾಯ ಆಗಲಿದೆ.

ಕೇಂದ್ರ ಸರ್ಕಾರದ ಅನುಮತಿಷ್ಟೇ ಬಾಕಿ

ಈಗಾಗಲೇ ಮೂರು ಮೆಟ್ರೋ ಸ್ಟೇಷನ್​ಗಳು ಉದ್ಘಾಟನೆಗೆ ಸಿದ್ದವಾಗಿದ್ದು ಸಿವಿಲ್, ಪೇಂಟಿಂಗ್, ಸ್ಟೇಷನ್ ಕೆಲಸ ಸೇರಿದಂತೆ ಎಲ್ಲವೂ ಮುಗಿದಿದೆ. ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯಲಾಗುತ್ತಿದೆ. ಕೇಂದ್ರ ಸರ್ಕಾರ ಗ್ರೀನ್ ಕೊಟ್ಟಿದ್ದೇ ಆದಲ್ಲಿ ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಮಾಡಲಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್​ ದರ ಏರಿಕೆಗೆ ಅಭಿಪ್ರಾಯ ಸಂಗ್ರಹ ಅವಧಿ ವಿಸ್ತರಣೆ

ಒಟ್ಟಿನಲ್ಲಿ ಈ ಮಾರ್ಗದ ಮೆಟ್ರೋಗೆ ಈಗಾಗಲೇ ರೈಲ್ವೆ ಸುರಕ್ಷತಾ ಆಯುಕ್ತರು ಅನುಮತಿ ನೀಡಿದ್ದಾರೆ. ಆದರೆ, ರಾಜ್ಯ ಸರ್ಕಾರ ಕೇಂದ್ರದ ಅನುಮತಿಗೆ ಪತ್ರ ಬರೆದಿದ್ದು, ಗ್ರೀನ್​ ಸಿಗ್ನಲ್​ಗಾಗಿ ಕಾಯುತ್ತಿದೆ. ಕೇಂದ್ರ ಸರ್ಕಾರ ಶೀಘ್ರದಲ್ಲೇ ಗ್ರೀನ್ ಸಿಗ್ನಲ್ ಕೊಡುವ ನಿರೀಕ್ಷೆ ಇದ್ದು, ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗುವುದು ಖಚಿತವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ