ಬೆಂಗಳೂರು: ಕನ್ನಡವನ್ನು ‘ಭಾರತದ ಅತ್ಯಂತ ಕುರೂಪಿ ಭಾಷೆ’ (ugliest language in India) ಎಂದು ತೋರಿಸಿದ್ದ ಗೂಗಲ್ ಈ ಸಂಬಂಧ ಬುಧವಾರ ಕರ್ನಾಟಕ ಹೈಕೋರ್ಟ್ ಎದುರು ಕ್ಷಮೆಯಾಚಿಸಿದೆ. ಗೂಗಲ್ ಕ್ಷಮೆಯನ್ನು ಒಪ್ಪಿಕೊಂಡಿರುವ ಹೈಕೋರ್ಟ್, ಅದರ ವಿರುದ್ಧ ದಾಖಲಾಗಿದ್ದ ಅರ್ಜಿಯನ್ನು ಹಿಂಪಡೆಯಲು ಅರ್ಜಿದಾರರಿಗೆ ಸೂಚಿಸಿತು.
ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ಅವರಿದ್ದ ವಿಭಾಗೀಯ ನ್ಯಾಯಪೀಠವು ಗೂಗಲ್ಗೆ ಕ್ಷಮೆ ನೀಡಿತು.
ಕನ್ನಡ ಭಾಷೆಯ ಬಗ್ಗೆ ಗೂಗಲ್ನಲ್ಲಿ ಅವಹೇಳನ ಮಾಡಲಾಗಿದೆ ಎಂದು ದೂರಿದ್ದ ಅರ್ಜಿದಾರರು, ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಪತ್ರಿಕೆಯ ತುಣುಕನ್ನು ಲಗತ್ತಿಸಿದ್ದರು. ಮುಂದಿನ ದಿನಗಳಲ್ಲಿ ಹೀಗೆ ಆಗದಂತೆ ಎಚ್ಚರ ವಹಿಸಲಾಗುವುದು ಎಂಬ ಗೂಗಲ್ನ ಭರವಸೆಯನ್ನೂ ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಲೀಗಲ್ ಅಟಾರ್ನಿಸ್ ಅಂಡ್ ಬ್ಯಾರಿಯಸ್ಟರ್ಸ್ ಲಾ ಫರ್ಮ್ ಮೂಲಕ ಆ್ಯಂಟಿ ಕರಪ್ಷನ್ ಕೌನ್ಸಿಲ್ ಆಫ್ ಇಂಡಿಯಾ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಗೂಗಲ್ ಇದೀಗ ಕ್ಷಮೆಯಾಚಿಸಿರುವುದರಿಂದ ಅರ್ಜಿ ಹಿಂಪಡೆಯುವುದಾಗಿ ಅರ್ಜಿದಾರರ ಪರ ವಕೀಲರು ನ್ಯಾಯಾಲಯದಲ್ಲಿ ಹೇಳಿದರು.
ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗಿರುವ ಬಗ್ಗೆ ಗೂಗಲ್ ಇಂಡಿಯಾ ಜೂನ್ 3ರಂದು ಟ್ವಿಟರ್ ಹ್ಯಾಂಡ್ಲ್ ಮೂಲಕ ಕ್ಷಮೆಯಾಚಿಸಿದೆ. ಈ ವಿಷಯವನ್ನು ಗಮನಿಸಿದ ನ್ಯಾಯಾಲಯವು ಅರ್ಜಿಯನ್ನು ಹಿಂಪಡೆಯಲು ಅವಕಾಶ ನೀಡಿತು.
‘ಅರ್ಜಿದಾರರ ಮನವಿಯ ಮೇರೆಗೆ ಅರ್ಜಿಯನ್ನು ಹಿಂಪಡೆಯಲು ಅವಕಾಶ ನೀಡಲಾಗಿದೆ’ ಎಂದು ನ್ಯಾಯಮೂರ್ತಿಗಳು ತಿಳಿಸಿದರು. ಭಾರತೀಯ ದಂಡ ಸಂಹಿತೆ (Indian Penal code – IPC) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ (Information Technology Act – IT Act) ಅನ್ವಯ ಗೂಗಲ್ ವಿರುದ್ಧ ಕ್ರಮ ಜರುಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾಗಳಿಗೆ ಸೂಚಿಸಬೇಕು ಎಂದು ಕೋರಿ ಅರ್ಜಿ ದಾಖಲಿಸಲಾಗಿತ್ತು. ಕನ್ನಡವನ್ನು ಅವಹೇಳನ ಮಾಡಿರುವುದರಿಂದ ಮಾನಹಾನಿಯಾಗಿದೆ. ಇದಕ್ಕೆ ದಂಡ ರೂಪದಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ₹ 10 ಕೋಟಿ ಪಾವತಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
(Google apologises in Karnataka High Court for showing Kannada as ugliest language)
ಇದನ್ನೂ ಓದಿ: ಗೂಗಲ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪತ್ರ; ಕೊನೆಗೂ ಮ್ಯಾಪ್ನಲ್ಲಿ ಸರಿಯಾಯ್ತು ಕರ್ನಾಟಕದ ಊರುಗಳ ಹೆಸರು
ಇದನ್ನೂ ಓದಿ: ಮತ್ತೊಮ್ಮೆ ಸಾಬೀತಾಯ್ತು ಕನ್ನಡಿಗರ ತಾಕತ್ತು; ಅಣ್ಣಾವ್ರ ವಿಚಾರದಲ್ಲಿ ತಪ್ಪು ತಿದ್ದಿಕೊಂಡ ಗೂಗಲ್