ಶೇ 30ರಷ್ಟು ಬೆಡ್ಗಳನ್ನು ಮೀಸಲಿರಿಸಲು ಖಾಸಗಿ ಆಸ್ಪತ್ರೆಗಳಿಗೆ ಕರ್ನಾಟಕ ಸರ್ಕಾರ ಸೂಚನೆ
Coronavirus 3rd Wave: ಜ.10ರ ಒಳಗೆ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ಶೇ 75ರಷ್ಟು ಬೆಡ್ಗಳನ್ನು ಮೀಸಲಿಡಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ.
ಬೆಂಗಳೂರು: ಕೊರೊನಾ 3ನೇ ಅಲೆಯ ಭೀತಿ (Coronavirus 3rd Wave) ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಎಲ್ಲ ಖಾಸಗಿ ಆಸ್ಪತ್ರೆ, ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ತಕ್ಷಣದಿಂದ ಶೇ 30ರಷ್ಟು ಬೆಡ್ಗಳನ್ನು ಸೋಂಕಿತರ ಚಿಕಿತ್ಸೆಗೆ ಮೀಸಲಿಡಬೇಕು ಎಂದು ರಾಜ್ಯ ಸರ್ಕಾರವು ಸೂಚಿಸಿದೆ. ಜ.7ರ ಒಳಗೆ ಖಾಸಗಿ ಆಸ್ಪತ್ರೆಗಳು ಶೇ 50ರಷ್ಟು ಬೆಡ್ಗಳನ್ನು ಮೀಸಲಿಡಬೇಕು. ಜ.10ರ ಒಳಗೆ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ಶೇ 75ರಷ್ಟು ಬೆಡ್ಗಳನ್ನು ಮೀಸಲಿಡಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಆರೋಗ್ಯ ಇಲಾಖೆಯಿಂದ ಶಿಫಾರಸಾಗುವ ರೋಗಿಗಳ ಚಿಕಿತ್ಸೆಗೆ ಈ ಬೆಡ್ಗಳು ಮೀಸಲಿರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕಡ್ಡಾಯ ಲಸಿಕೆಗೆ ಸೂಚನೆ ರಾಜ್ಯದಲ್ಲಿ ಕೊರೊನಾ ಸೊಂಕು ಪ್ರಕರಣಗಳು ಹೆಚ್ಚಳ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಗೆ ಮಾರ್ಗಸೂಚಿ ನಿಯಮವನ್ನು ರೂಪಿಸಿ, ತಕ್ಷಣದಿಂದ ಜಾರಿಗೆ ತರುವಂತೆ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಆದೇಶ ಮಾಡಿದ್ದಾರೆ. ಕೈಗಾರಿಕೆ, ಮಾಹಿತಿ ತಂತ್ರಜ್ಞಾನ ವಲಯದ ಎಲ್ಲ ಉದ್ಯೋಗಿಗಳು ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು. ಕೆಲಸದ ಸ್ಥಳದಲ್ಲಿ ಕೊವಿಡ್ ಮಾರ್ಗಸೂಚಿ ಪಾಲನೆಯಾಗುವುದನ್ನು. ಸ್ಥಳೀಯ ಕಾರ್ಮಿಕ ಅಧಿಕಾರಿ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಗಡಿ ಚೆಕ್ಪೋಸ್ಟ್ಗಳಿಗೆ ಡಿಸಿ, ಎಸ್ಪಿ ದಿಢೀರ್ ಭೇಟಿ ಕಾರವಾರ: ಕರ್ನಾಟಕದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಕಠಿಣ ಕ್ರಮಗಳನ್ನು ರಾಜ್ಯ ಸರ್ಕಾರ ಘೋಷಿಸಿದೆ. ಇದರ ಭಾಗವಾಗಿ ಬುಧವಾರ ಗೋವಾ ಗಡಿಯ ಚೆಕ್ಪೋಸ್ಟ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾಧಿಕಾರಿ ಮುಲೈ ಮುಗಿಲನ್, ಎಸ್ಪಿ ಸುಮನ್ ಪೆನ್ನೆಕರ್ ಕಾರವಾರದ ಮಾಜಾಳಿ ಚೆಕ್ಪೋಸ್ಟ್ಗೆ ದಿಢೀರ್ ಭೇಟಿ ನೀಡಿದರು. ನಾಳೆಯಿಂದ (ಜ.6) ಗೋವಾದಿಂದ ಕಾರವಾರಕ್ಕೆ ಬರುವವರಿಗೆ ಡಬಲ್ ಡೋಸ್ ಲಸಿಕೆ ಜತೆಗೆ ಆರ್ಟಿಪಿಸಿರ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಆರ್ಟಿಪಿಸಿಆರ್ ಇಲ್ಲದೆ ಬಂದವರಿಗೆ ಕಾರವಾರಕ್ಕೆ ಪ್ರವೇಶ ಇರುವುದಿಲ್ಲ. ಗೋವಾದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಜಾರಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಗಡಿಯಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ. ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಡಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಹೊಸದಾಗಿ 4,246 ಕೊರೊನಾ ಪ್ರಕರಣಗಳು ಪತ್ತೆ; ಬೆಂಗಳೂರಿನಲ್ಲಿ ಮಾತ್ರವೇ 3,605 ಕೊವಿಡ್ ಪಾಸಿಟಿವ್ ಇದನ್ನೂ ಓದಿ: ಕೊವ್ಯಾಕ್ಸಿನ್ ಲಸಿಕೆ ಪಡೆದ ಮಕ್ಕಳಿಗೆ ಪ್ಯಾರಾಸೆಟಮಾಲ್ ಅಥವಾ ನೋವು ನಿವಾರಕ ಅಗತ್ಯವಿಲ್ಲ: ಭಾರತ್ ಬಯೊಟೆಕ್