ಬೆಂಗಳೂರು: ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾ.ಪಂ. ನೌಕರರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಸಿದ್ಧರಾಗಿದ್ದಾರೆ. ಬೆಂಗಳೂರಿನ ಕೆಎಸ್ಆರ್ ರೈಲ್ವೆ ನಿಲ್ದಾಣದಿಂದ ಗ್ರಾಮ ಪಂಚಾಯಿತಿ ನೌಕರರ ಸಂಘ ಱಲಿ ಆರಂಭ ಮಾಡಿದ್ದು ಸಚಿವ ಈಶ್ವರಪ್ಪನ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ಈಗ ಫ್ರೀಡಂ ಪಾರ್ಕ್ ಪಕ್ಕದ ಕಾಳಿದಾಸ ರೋಡ್ನಲ್ಲಿ ಪ್ರತಿಭಟನಾ ಸಮಾವೇಶ ಶುರುವಾಗಿದೆ. ಸಚಿವ ಈಶ್ವರಪ್ಪ ಸ್ಥಳಕ್ಕೆ ಬರುವವರೆಗೆ ಪ್ರತಿಭಟನೆ ಕೈಬಿಡದಿರಲು ನೌಕರರು ತೀರ್ಮಾನ ಮಾಡಿದ್ದಾರೆ.
ಗ್ರಾ.ಪಂ. ನೌಕರರ ಬೇಡಿಕೆ
-ಪ್ರತಿ ತಿಂಗಳು ಸರಿಯಾಗಿ ವೇತನ ಬಿಡುಗಡೆ ಮಾಡಬೇಕು
-ವೇತನಕ್ಕಾಗಿ 700 ಕೋಟಿ ರೂ. ಬಿಡುಗಡೆ ಮಾಡಬೇಕು
-10 ವರ್ಷ ಮೇಲ್ಪಟ್ಟವರ ಬಡ್ತಿಗೆ ಅರ್ಹತಾ ಪರೀಕ್ಷೆ ರದ್ದು ಮಾಡಿ
-ಪಿಂಚಣಿ ಫೈಲ್ ರೆಡಿ ಇದ್ದು ಪಿಂಚಣಿ ನೀಡುವ ಆದೇಶ ಆಗಬೇಕು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಗ್ರಾಮ ಪಂಚಾಯಿತಿ ನೌಕರರಿಗೆ 10 ರಿಂದ 15 ತಿಂಗಳುಗಳಿಂದ ಸರ್ಕಾರ ವೇತನ ನೀಡಿಲ್ಲ. 10 ರಿಂದ 15 ತಿಂಗಳುಗಳಿಂದ ವೇತನ ಇಲ್ಲದೇ ಕೆಲಸ ಮಾಡುತ್ತಿದ್ದೇವೆ. 2021 ಸೆಪ್ಟೆಂಬರ್ ತಿಂಗಳಲ್ಲಿ ಸರ್ಕಾರದ ನಿಧಿಯಿಂದ ಇಎಫ್ಎಂಎಸ್ ಮೂಲಕ ವೇತನ ನೀಡಲು ರಾಜ್ಯ ಸರ್ಕಾರ ಆದೇಶ ಮಾಡಿತ್ತು. ಆದ್ರೆ ಗ್ರಾಮಪಂಚಾಯಿತಿ ನೌಕರರಿಗೆ ಇಲ್ಲಿಯವರೆಗೆ ವೇತನ ಬಿಡುಗಡೆ ಸರಿಯಾಗಿ ಆಗುತ್ತಿಲ್ಲ ಎಂದು ನೌಕರರು ಅಸಮಾಧಾನ ಹೊರ ಹಾಕಿದ್ದಾರೆ.
ಸಂಗೊಳ್ಳಿ ರಾಯಣ್ಣ ಫ್ಲೈ ಓವರ್ ಸಂಪೂರ್ಣ ಬಂದ್
ಸಾವಿರಾರು ಸಂಖ್ಯೆಯಲ್ಲಿ ಗ್ರಾಮ ಪಂಚಾಯತಿ ನೌಕರರ ರ್ಯಾಲಿ ಮಾಡುತ್ತಿರುವ ಹಿನ್ನೆಲೆ ಸಂಗೊಳ್ಳಿ ರಾಯಣ್ಣ ಫ್ಲೈ ಓವರ್ ಸಂಪೂರ್ಣ ಬಂದ್ ಆಗಿದೆ. ಪೊಲೀಸ್ ಸರ್ಪಗಾವಲಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಮೆಜೆಸ್ಟಿಕ್ ನಿಂದ ಫ್ರೀಡಂ ಪಾರ್ಕ್ ವರೆಗೆ ಮಾತ್ರ ರ್ಯಾಲಿಗೆ ಅವಕಾಶ ನೀಡಲಾಗಿದೆ. ಭದ್ರತೆಗಾಗಿ 500 ರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ಕಾಬೂಲ್‌ನಲ್ಲಿ ಬಂದೂಕು ತೋರಿಸಿ ಭಾರತ ಮೂಲದ ವ್ಯಕ್ತಿಯ ಅಪಹರಣ
Published On - 2:41 pm, Wed, 15 September 21