ಗ್ರೇಟರ್ ಬೆಂಗಳೂರು ವಾರ್ಡ್ ಪುನರ್ ವಿಂಗಡಣೆ: 198 ರ ಬದಲಿಗೆ ಅಸ್ತಿತ್ವಕ್ಕೆ ಬರಲಿವೆ 400 ವಾರ್ಡ್
ಬೆಂಗಳೂರಿನ ಶಕ್ತಿಕೇಂದ್ರ ಬಿಬಿಎಂಪಿಯ ಬದಲಿಗೆ ಜಿಬಿಎ ಜಾರಿ ಮಾಡಿರುವ ರಾಜ್ಯ ಸರ್ಕಾರ , ಇದೀಗ ರಾಜಧಾನಿಯ ವಾರ್ಡ್ಗಳ ಮರು ವಿಂಗಡನೆ ಮೇಲೆ ಕಣ್ಣಿಟ್ಟಿದೆ. ಬಿಬಿಎಂಪಿ ತ್ಯಜಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಾರಿ ಮಾಡುವಾಗ 198 ವಾರ್ಡ್ಗಳನ್ನೇ ಮುಂದುವರಿಸಿದ್ದ ಸರ್ಕಾರ, ಇದೀಗ ಬೆಂಗಳೂರಿನ ವಾರ್ಡ್ ಗಳ ಪುನರ್ ವಿಂಗಡನೆಗೆ ಟಾಸ್ಕ್ ನೀಡಿದೆ. ಸರ್ಕಾರದ ಸೂಚನೆಯಂತೆ ಡಿಲಿಮೀಟೇಷನ್ಗೆ ಇಳಿದಿರುವ ಜಿಬಿಎ, ನವೆಂಬರ್ ಒಳಗೆ ಜಿಬಿಎ ವಾರ್ಡ್ಗಳಿಗೆ ಮತ್ತೊಂದು ರೂಪ ನೀಡುವ ನೀರಿಕ್ಷೆ ಹೆಚ್ಚಾಗಿದೆ.

ಬೆಂಗಳೂರು, ಸೆಪ್ಟೆಂಬರ್ 18: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಆಡಳಿತಕ್ಕೆ ಗ್ರೇಟರ್ ಬೆಂಗಳೂರು ಅಥಾರಿಟಿಯ (GBA) ರೂಪ ನೀಡಿದ್ದ ಸರ್ಕಾರ, ಇದೀಗ ಬೆಂಗಳೂರಿನ ವಾರ್ಡ್ಗಳ ಪುನರ್ ವಿಂಗಡಣೆಗೆ ಸಜ್ಜಾಗಿದೆ. ಸದ್ಯ ಬೆಂಗಳೂರಿನಲ್ಲಿರುವ 198 ವಾರ್ಡ್ಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿರುವ ಸರ್ಕಾರ, ಇದೀಗ ಜಿಬಿಎ ಮೂಲಕ 198 ವಾರ್ಡ್ಗಳ ಬದಲು 400 ವಾರ್ಡ್ಗಳಾಗಿ ವಿಂಗಡಿಸುವ ಸಾಧ್ಯತೆ ಹೆಚ್ಚಾಗಿದೆ. ಸದ್ಯ ಸರ್ಕಾರದ ಸೂಚನೆಯಂತೆ ಜನಸಂಖ್ಯೆಯ ಆಧಾರದ ಮೇಲೆ ವಾರ್ಡ್ ವಿಂಗಡನೆಗೆ ಮುಂದಾಗಿರುವ ಜಿಬಿಎ ಅಧಿಕಾರಿಗಳು ಜಿಪಿಎಸ್ ಆಧಾರದಲ್ಲಿ ವಾರ್ಡ್ಗಳನ್ನು ವಿಂಗಡಿಸಲು ಮುಂದಾಗಿದ್ದಾರೆ.
2011 ರ ಜನಗಣತಿಯ ಪ್ರಕಾರ ಜನಸಂಖ್ಯೆಯ ಆಧಾರದಲ್ಲಿ ವಾರ್ಡ್ಗಳನ್ನು ಪುನರ್ ವಿಂಗಡನೆ ಮಾಡಲು ಹೊರಟಿರುವ ಜಿಬಿಎ, ಇದೀಗ ಕೆಲ ಮಾನದಂಡಗಳು ಹಾಗೂ ಸರ್ಕಾರ ನೀಡಿರುವ ಸಲಹೆಯಂತೆ ವಾರ್ಡ್ಗಳನ್ನ ಪುನರ್ ರಚಿಸಲು ಹೊರಟಿದೆ.
ವಾರ್ಡ್ ಪುನರ್ ವಿಂಗಡಣೆ ಮುಖ್ಯಾಂಶಗಳೇನು?
- 198 ವಾರ್ಡ್ಗಳ ಬದಲು 400 ವಾರ್ಡ್ಗಳ ರಚನೆ ಸಾಧ್ಯತೆ
- ಜಿಪಿಎಸ್, ಜನಸಂಖ್ಯೆಯ ಆಧಾರದ ಮೇಲೆ ವಾರ್ಡ್ ಪುನರ್ ರಚನೆ
- 4 ನಗರ ಪಾಲಿಕೆಗಳಿಗೆ 75ವಾರ್ಡ್, ಪಶ್ಚಿಮ ಪಾಲಿಕೆಗೆ 100 ವಾರ್ಡ್ಗಳಾಗಿ ವಿಂಗಡನೆ ಸಾಧ್ಯತೆ
- ಪ್ರತಿ ವಾರ್ಡ್ಗೂ ಸುಮಾರು 17 ರಿಂದ 23 ಸಾವಿರ ಜನಸಂಖ್ಯೆ ನಿಗದಿ
- 2011 ರ ಜನಗಣತಿಯ ಆಧಾರದ ಮೇಲೆ ವಾರ್ಡ್ ಪುನರ್ ರಚನೆಗೆ ಪ್ಲಾನ್
ಇದನ್ನೂ ಓದಿ: ಬೆಂಗಳೂರು: ಇನ್ಮುಂದೆ ಜಿಬಿಎ ವ್ಯಾಪ್ತಿಯಲ್ಲಿ 1200 ಚದರ ಅಡಿ ವರೆಗಿನ ನಿವೇಶನಗಳ ವಸತಿ ಕಟ್ಟಡಗಳಿಗೆ ಒಸಿ, ಸಿಸಿ ಅಗತ್ಯವಿಲ್ಲ!
ಸದ್ಯ ಬೆಂಗಳೂರಿನ ಅಭಿವೃದ್ಧಿಯ ದೃಷ್ಟಿಯಿಂದ ವಿಭಾಗಗಳನ್ನ ಮಾಡಿ ಆಡಳಿತ ವಿಕೇಂದ್ರೀಕರಣ ಮಾಡಿರೋ ಸರ್ಕಾರ, ಇದೀಗ ಬೆಂಗಳೂರಿನ ವಾರ್ಡ್ ಗಳ ರಚನೆ ಬಗ್ಗೆ ಜಿಬಿಎಗೆ ಜವಬ್ದಾರಿ ನೀಡಿದೆ. ಇತ್ತ ನವೆಂಬರ್ ಒಳಗಾಗಿ ಸರ್ಕಾರದ ಮುಂದೆ ವಾರ್ಡ್ ಪುನರ್ ವಿಂಗಡನೆ ಬಗ್ಗೆ ವರದಿ ಮುಂದಿಡಲಿರೋ ಜಿಬಿಎ, ಯಾವ ರೀತಿ ವರದಿಯನ್ನ ಸರ್ಕಾರದ ಮುಂದಿಡುತ್ತೆ, ಜಿಬಿಎ ವ್ಯಾಪ್ತಿಯಲ್ಲಿ ವಾರ್ಡ್ಗಳಿಗೆ ಯಾವ ರೂಪುರೇಷೆ ರೆಡಿಯಾಗುತ್ತೆ ಎಂಬುದನ್ನು ಕಾದುನೋಡಬೇಕಿದೆ