
ಬೆಂಗಳೂರು, ಜುಲೈ 29: ರಾಜಧಾನಿಯಲ್ಲಿ ಖಾಲಿ ನಿವೇಶನಗಳನ್ನು ಇಟ್ಟುಕೊಂಡು, ಅವುಗಳನ್ನು ತ್ಯಾಜ್ಯ ಸುರಿಯುವ ತಾಣಗಳನ್ನಾಗಿ ಮಾಡಿರುವ ನಿವೇಶನದಾರರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಬಿಗ್ ಶಾಕ್ ನೀಡಿದೆ. ಮುಂಬರುವ ಆಗಸ್ಟ್ 15ರೊಳಗೆ ಮಾಲೀಕರು ತಮ್ಮ ಖಾಲಿ ಜಾಗವನ್ನು ಸ್ವತಃ ಸ್ವಚ್ಛಗೊಳಿಸದಿದ್ದರೆ, ಪಾಲಿಕೆಯಿಂದಲೇ ಕಠಿಣ ಕ್ರಮದ ಜೊತೆಗೆ ಭಾರಿ ದಂಡ ವಿಧಿಸಲು ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರರಾವ್ ಖಡಕ್ ಆದೇಶ ಹೊರಡಿಸಿದ್ದಾರೆ.
ನಗರದಲ್ಲಿ ರಸ್ತೆಬದಿ ಕಸ ಎಸೆಯುವುದು ಮತ್ತು ಖಾಲಿ ನಿವೇಶನಗಳನ್ನು ತ್ಯಾಜ್ಯದ ತೊಟ್ಟಿ ಮಾಡಿಕೊಳ್ಳುವುದಕ್ಕೆ ಬ್ರೇಕ್ ಹಾಕಲು ಜಿಬಿಎ ಮುಂದಾಗಿದೆ. ಆಗಸ್ಟ್ ತಿಂಗಳಿನಿಂದ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಎಂಬ ಬೃಹತ್ ಅಭಿಯಾನ ಪ್ರಾರಂಭವಾಗುತ್ತಿದ್ದು, ನಗರದ ಬ್ಲಾಕ್ ಸ್ಪಾಟ್‌ಗಳು, ಕಟ್ಟಡ ತ್ಯಾಜ್ಯ ಹಾಗೂ ರಸ್ತೆಬದಿಯ ಮಾಲಿನ್ಯವನ್ನು ಸಾಮೂಹಿಕವಾಗಿ ತೆರವುಗೊಳಿಸಲು ನಿರ್ಧರಿಸಲಾಗಿದೆ. ಇದರ ಅಂಗವಾಗಿ ಎಲ್ಲಾ ಖಾಲಿ ನಿವೇಶನ ಮಾಲೀಕರಿಗೆ ಆಗಸ್ಟ್ 15ರವರೆಗೆ ಕಾಲಾವಕಾಶ ನೀಡಲಾಗಿದೆ.
ಆಗಸ್ಟ್ 15ರೊಳಗೆ ಮಾಲೀಕರು ಜಾಗ ಸ್ವಚ್ಛಗೊಳಿಸದಿದ್ದರೆ, ಪಾಲಿಕೆಯೇ ತ್ಯಾಜ್ಯ ತೆರವುಗೊಳಿಸಲಿದೆ. ಆದರೆ, ಅದಕ್ಕೆ ತಗುಲುವ ವೆಚ್ಚವನ್ನು ನಿವೇಶನದ ವಿಸ್ತೀರ್ಣಕ್ಕೆ ಅನುಗುಣವಾಗಿ ಮಾಲೀಕರಿಂದಲೇ ವಸೂಲಿ ಮಾಡಲಾಗುತ್ತದೆ. ಘನತ್ಯಾಜ್ಯ ನಿರ್ವಹಣಾ ಉಪವಿಧಿಗಳು-2020 ಮತ್ತು ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ 2024ರ ಅಡಿಯಲ್ಲಿ ಈ ವೆಚ್ಚವನ್ನು ಆಸ್ತಿ ತೆರಿಗೆಯೊಂದಿಗೆ ಸೇರಿಸಿ ವಸೂಲಿ ಮಾಡಲಾಗುವುದು. ತೆರಿಗೆ ಬಾಕಿ ಉಳಿಸಿಕೊಂಡರೆ ‘ಕರ್ನಾಟಕ ಭೂಕಂದಾಯ ಕಾಯ್ದೆ 1964’ರ ಪ್ರಕಾರ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
ನಿಯಮ ಉಲ್ಲಂಘಿಸುವ ನಿವೇಶನದಾರರಿಗೆ ಮೊದಲ ಬಾರಿಗೆ 25,000 ರೂ. ದಂಡ ವಿಧಿಸಿದರೆ, ನಂತರದ ಉಲ್ಲಂಘನೆಗಳಿಗೆ 50,000 ದಿಂದ 1 ಲಕ್ಷ ರೂ.ಗಳವರೆಗೆ ದಂಡ ಹಾಕಲಾಗುತ್ತದೆ. ನಿವೇಶನ ಸ್ವಚ್ಛಗೊಳಿಸಿದ ಬಳಿಕ ಸುತ್ತಲೂ ಕಾಂಪೌಂಡ್ ಅಥವಾ ಬೇಲಿ ಹಾಕುವುದು ಮಾಲೀಕರ ಜವಾಬ್ದಾರಿಯಾಗಿದೆ.
ಒಂದು ವೇಳೆ ನಿಮ್ಮ ಸುತ್ತಮುತ್ತಲಿನ ಖಾಲಿ ನಿವೇಶನಗಳನ್ನು ಮಾಲೀಕರು ಸ್ವಚ್ಛಗೊಳಿಸದಿದ್ದರೆ, ಸಾರ್ವಜನಿಕರು ಆ ಜಾಗದ ಫೋಟೋ ಮತ್ತು ಜಿಪಿಎಸ್ ಲೋಕೇಶನ್ (GPS Co-ordinates) ಜೊತೆಗೆ 9448197197 ವಾಟ್ಸ್‌ಆಪ್ ಸಂಖ್ಯೆಗೆ ದೂರು ಸಲ್ಲಿಸಬಹುದು. ದೂರುದಾರರ ಮಾಹಿತಿಯನ್ನು ರಹಸ್ಯವಾಗಿಡಲಾಗುವುದು.
ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ