ಜಿಎಸ್​ಟಿ ಇಳಿಕೆಯಾಗಿದ್ದೇ ವಾಹನ ಖರೀದಿ ಏಕಾಏಕಿ ಹೆಚ್ಚಳ: ಬೆಂಗಳೂರಿನಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಟ್ರಾಫಿಕ್ ಸಮಸ್ಯೆ!

ಕೇಂದ್ರ ಸರ್ಕಾರ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳ ಮೇಲೆ ಜಿಎಸ್​ಟಿ ದರ ಕಡಿಮೆ ಮಾಡಿದ್ದೇ ತಡ ಜನರು ನಾ ಮುಂದು ತಾ ಮುಂದು ಎಂದು ಹೊಸ ವಾಹನಗಳನ್ನು ಖರೀದಿಸಲು ಮುಂದಾಗಿದ್ದಾರೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಬೆಂಗಳೂರಿನ ಟ್ರಾಫಿಕ್ ಮೇಲೆ ಬೀಳಲಿದ್ದು, ವಾಹನ ಸವಾರರು ಗಂಟೆಗಟ್ಟಲೆ ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿ ಪರದಾಡಬೇಕಾಗಲಿದೆ.

ಜಿಎಸ್​ಟಿ ಇಳಿಕೆಯಾಗಿದ್ದೇ ವಾಹನ ಖರೀದಿ ಏಕಾಏಕಿ ಹೆಚ್ಚಳ: ಬೆಂಗಳೂರಿನಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಟ್ರಾಫಿಕ್ ಸಮಸ್ಯೆ!
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Nov 13, 2025 | 8:34 AM

ಬೆಂಗಳೂರು, ನವೆಂಬರ್ 13: ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಸ್ಟ್ 15 ರಂದು ಜಿಎಸ್​ಟಿ (GST) ಕಡಿಮೆ ಮಾಡುವ ಬಗ್ಗೆ ಘೋಷಣೆ ಮಾಡಿದ್ದರು. ಸೆಪ್ಟೆಂಬರ್ 22 ರಿಂದ ನೂತನ ಜಿಎಸ್​ಟಿ ದರ ಜಾರಿಯಾಯಿತು. 350 ಸಿಸಿ ವರೆಗಿನ ದ್ವಿಚಕ್ರ ವಾಹನದ ಮೇಲಿನ ಜಿಎಸ್​ಟಿಯನ್ನು ಶೇ 28 ರಿಂದ 18 ಕ್ಕೆ ಇಳಿಕೆ ಮಾಡಲಾಯಿತು. ಪೆಟ್ರೋಲ್ 1200 ಸಿಸಿ ವರೆಗೆ ಮತ್ತು ಡಿಸೇಲ್ 1,500 ಸಿಸಿ ವರೆಗೆ, 4 ಮೀಟರ್ ಉದ್ದದ ಕಾರುಗಳ ಮೇಲೂ ಜಿಎಸ್ಟಿ ಕಡಿಮೆ ಮಾಡಲಾಯಿತು. ಇದರಿಂದ ಹೊಸ ವಾಹನಗಳನ್ನು ಖರೀದಿ ಮಾಡವವರ ಸಂಖ್ಯೆ ದುಪ್ಪಟ್ಟಾಗಿದ್ದು, ಕರ್ನಾಟಕದಲ್ಲಿ (Karnataka) ಹಿಂದೆಂದೂ ಇಲ್ಲದಷ್ಟು ಹೊಸ ವಾಹನಗಳ ಖರೀದಿ (Vehicle Sale) ಅಕ್ಟೋಬರ್ ತಿಂಗಳಿನಲ್ಲಾಗಿದೆ.

ಜಿಎಸ್​​ಟಿ ಪರಿಷ್ಕರಣೆ ಬೆನ್ನಲ್ಲೇ ಕರ್ನಾಟಕದಲ್ಲಿ ದುಪ್ಪಟ್ಟಾಯ್ತು ವಾಹನ ನೋಂದಣಿ

ಜಿಎಸ್ಟಿ ಕಡಿಮೆ ಮಾಡುವ ಮುನ್ನ ಕರ್ನಾಟಕದಲ್ಲಿ, ಅಂದರೆ ಆಗಸ್ಟ್ ತಿಂಗಳಿನಲ್ಲಿ 1,61,214 ಹೊಸ ವಾಹನಗಳು ರಸ್ತೆಗಿಳಿದಿದ್ದವು. ಒಂದು ದಿನಕ್ಕೆ 6,717 ವಾಹನಗಳು ರೋಡಿಗಿಳಿದಂತಾಗಿತ್ತು. ಪರಿಷ್ಕೃತ ಜಿಎಸ್​ಟಿ ಜಾರಿಯಾದ ಮೇಲೆ, ಅಕ್ಟೋಬರ್ ತಿಂಗಳಿನಲ್ಲಿ 2,52,420 ವಾಹನಗಳು ನೋಂದಣಿ ಆಗಿವೆ. ಇದೀಗ ಪ್ರತಿದಿನ 10,517 ವಾಹನಗಳು ನೋಂದಣಿ ಆಗುತ್ತಿವೆ. ಅಂದರೆ 91,206 ವಾಹನಗಳು ಹೆಚ್ಚುವರಿಯಾಗಿ ರಿಜಿಸ್ಟ್ರೇಷನ್ ಆಗುತ್ತಿವೆ. ಇದರಲ್ಲಿ ಕಾರು, ಬೈಕು ಸೇರಿದಂತೆ ಎಲ್ಲಾ ರೀತಿಯ ವಾಹನಗಳು ಸೇರಿವೆ. ಹೊಸ ಜಿಎಸ್​ಟಿ ದರ ಜಾರಿಯಾದ ಮೇಲೆ ರಿಜಿಸ್ಟ್ರೇಷನ್ ದುಪ್ಪಟ್ಟು ಆಗಿದೆ ಎಂದು ಅಪರ ಸಾರಿಗೆ ಆಯುಕ್ತ ಸಿ. ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಎಷ್ಟು ಹೆಚ್ಚಾಗಿದೆ ವಾಹನ ಖರೀದಿ?

ಬೆಂಗಳೂರಿನಲ್ಲಿ ಆಗಸ್ಟ್‌ ತಿಂಗಳಿನಲ್ಲಿ 68,446 ಹೊಸ ವಾಹನಗಳು ರಿಜಿಸ್ಟ್ರೇಷನ್ ಆಗಿದ್ದರೆ, ಪ್ರತಿದಿನ 2,685 ವಾಹನಗಳು ರೋಡಿಗಿಳಿಯುತ್ತಿದ್ದವು. ನೂತನ ಜಿಎಎಸ್​ಟಿ ಜಾರಿಯಾದ ಮೇಲೆ ಅಕ್ಟೋಬರ್ ತಿಂಗಳಲ್ಲಿ 89,014 ವಾಹನಗಳು ರಿಜಿಸ್ಟ್ರೇಷನ್ ಆಗಿವೆ. ಇದೀಗ ನಗರದಲ್ಲಿ ಪ್ರತಿದಿನ ಸುಮಾರು 3,748 ಹೊಸ ವಾಹನಗಳು ರೋಡಿಗಿಳಿಯುತ್ತಿವೆ. ಅಂದರೆ ಹೆಚ್ಚುವರಿಯಾಗಿ ಪ್ರತಿದಿನ 1063 ವಾಹನಗಳು ರೋಡಿಗಿಳಿಯುತ್ತಿವೆ. ಒಂದು ತಿಂಗಳಿಗೆ ನಗರದಲ್ಲಿ 89,952 ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಾಹನ ಸವಾರರು, ವಾಹನಗಳ ಮೇಲೆ ಜಿಎಸ್​ಟಿ ದರ ಕಡಿಮೆ ಆದ ಮೇಲೆ ಮಧ್ಯಮ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳನ್ನು ಖರೀದಿ ಮಾಡಲು ಮುಂದಾಗಿದ್ದಾರೆ. ಇದರಿಂದ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ ಮುಂದೆ ಟ್ರಾಫಿಕ್ ಸಮಸ್ಯೆ ಕೂಡ ಹೆಚ್ಚಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಜಿಎಸ್​ಟಿ ಪರಿಷ್ಕರಣೆ; ಈ ವಸ್ತುಗಳಿಗೆ ನೀವಿನ್ನು ತೆರಿಗೆಯೇ ಪಾವತಿಸಬೇಕಿಲ್ಲ!

ಒಟ್ಟಿನಲ್ಲಿ, ನೂತನ ಜಿಎಸ್​ಟಿ ದರ ಜಾರಿಯಾಗುತ್ತಿದ್ದಂತೆಯೇ, ಸಿಲಿಕಾನ್ ಸಿಟಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳನ್ನು ಖರೀದಿ ಮಾಡಲು ಮುಂದಾಗಿದ್ದಾರೆ. ಇದರಿಂದ ನಗರದಲ್ಲಿ ಮುಂದಿನ ದಿನಗಳಲ್ಲಿ ಟ್ರಾಫಿಕ್ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ