ಬೆಂಗಳೂರು ಆಸ್ತಿ ಮಾಲೀಕರಿಗೆ ಜಿಬಿಎ ಗುಡ್ನ್ಯೂಸ್: ಫೇಸ್‌ಲೆಸ್, ಕಾಂಟ್ಯಾಕ್ಟ್ ಲೆಸ್, ಆನ್‌ಲೈನ್ ಇ-ಖಾತಾ ಜಾರಿ
ಬೃಹತ್ ಬೆಂಗಳೂರು ಪ್ರಾಧಿಕಾರವು ಆಸ್ತಿ ಮಾಲೀಕರಿಗೆ ಇ-ಖಾತಾ ನೋಂದಣಿ ಸಮಸ್ಯೆಗಳನ್ನು ನಿವಾರಿಸಲು ಫೇಸ್‌ಲೆಸ್, ಕಾಂಟ್ಯಾಕ್ಟ್ ಲೆಸ್, ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಿದೆ. ಇದರಿಂದ ಮಧ್ಯವರ್ತಿಗಳ ಹಾವಳಿ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದ್ದು, ದಾಖಲೆ ಪರಿಶೀಲನೆ ಸುಲಭವಾಗಲಿದೆ. ಆಸ್ತಿ ಮಾಲೀಕರು ಸುಲಭವಾಗಿ ಮತ್ತು ತ್ವರಿತವಾಗಿ ಇ-ಖಾತಾ ಪಡೆಯಲು ಇದು ಸಹಾಯಕವಾಗಲಿದೆ.

ಬೆಂಗಳೂರು, ನವೆಂಬರ್ 12: ರಾಜಧಾನಿ ಬೆಂಗಳೂರಿನ ಆಸ್ತಿಮಾಲೀಕರಿಗೆ ಇ-ಖಾತಾ (E-Khata) ನೋಂದಣಿಯಲ್ಲಿ ಆಗುತ್ತಿದ್ದ ಸಮಸ್ಯೆಗಳಿಗೆ ಕೊನೆಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಪರಿಹಾರ ನೀಡುವುದಕ್ಕೆ ಹೊರಟಿದೆ. ಇಷ್ಟು ದಿನ ಜಿಬಿಎ ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿದ್ದ ಆಸ್ತಿ ಮಾಲೀಕರಿಗೆ ಕೊನೆಗೂ ಗುಡ್ ನ್ಯೂಸ್ ನೀಡಿರುವ ಜಿಬಿಎ, ಫೇಸ್‌ಲೆಸ್, ಕಾಂಟ್ಯಾಕ್ಟ್ ಲೆಸ್ ಮತ್ತು ಆನ್‌ಲೈನ್ ಇ-ಖಾತಾ ಮಾಡುವ ಮೂಲಕ ಕೊಂಚ ರಿಲೀಫ್ ನೀಡಿದೆ.
ಮಧ್ಯವರ್ತಿಗಳ ಹಾವಳಿ ಸೇರಿ ಭ್ರಷ್ಟಾಚಾರಕ್ಕೂ ಬ್ರೇಕ್
ಬೆಂಗಳೂರಿನ ಆಸ್ತಿ ಮಾಲೀಕರಿಗೆ ಇ-ಖಾತಾ ನೋಂದಣಿಯಲ್ಲಿ ಆಗ್ತಿದ್ದ ಸಮಸ್ಯೆಗಳನ್ನ ಬಗೆಹರಿಸೋಕೆ ಹೊರಟಿರೋ ಜಿಬಿಎ, ಇದೀಗ ಫೇಸ್‌ಲೆಸ್, ಕಾಂಟ್ಯಾಕ್ಟ್-ಲೆಸ್ ಮತ್ತು ಆನ್‌ಲೈನ್ ಇ-ಖಾತಾ ಜಾರಿ ಮಾಡಿದೆ. ಈ ಹೊಸ ವ್ಯವಸ್ಥೆಯಿಂದಾಗಿ ಅಂತಿಮ ಇ-ಖಾತಾ ಅಥವಾ ಹೊಸ ಖಾತಾ ಅನುಮೋದಿಸಲು ಎಆರ್‌ಒ ಅಥವಾ ಕೇಸ್ ವರ್ಕರ್ ಆಸ್ತಿ ದಾಖಲೆಗಳನ್ನ ಮಾತ್ರ ಪರಿಶೀಲಿಸಬೇಕಾಗುತ್ತೆ. ಸದ್ಯ ದಾಖಲೆಗಳು ಆನ್‌ಲೈನ್‌ನಲ್ಲಿ ಲಭ್ಯವಿರುವುದರಿಂದ ನಾಗರಿಕರು ಅವರನ್ನ ಭೇಟಿ ಮಾಡುವ ಅಗತ್ಯವಿಲ್ಲದಿರುವುದರಿಂದ ಮಧ್ಯವರ್ತಿಗಳ ಹಾವಳಿ ಹಾಗೂ ಭ್ರಷ್ಟಾಚಾರಕ್ಕೆ ಬ್ರೇಕ್ ಬೀಳಲಿದೆ.
ಇದನ್ನೂ ಓದಿ: ಇಂದಿನಿಂದ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಅವಕಾಶ: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸೋದು ಹೇಗೆ? ಇಲ್ಲಿದೆ ಮಾಹಿತಿ
ಇನ್ನು ಇಷ್ಟು ದಿನ ಇ-ಖಾತಾ ನೋಂದಣಿಗೆ ಅಂತಾ ಕಾದು ಸುಸ್ತಾಗಿದ್ದ ಆಸ್ತಿ ಮಾಲೀಕರು, ಸರ್ವರ್ ಸಮಸ್ಯೆ, ಅಧಿಕಾರಿಗಳು ಸಿಗದೇ ಇರೋದರ ಜೊತೆಗೆ ಜಾತಿ ಸಮೀಕ್ಷೆಗೆ ಸಿಬ್ಬಂದಿ ನೇಮಿಸಿದ್ದರಿಂದ ಬೇಸತ್ತು ಹೋಗಿದ್ದರು. ಇದೀಗ ಫೇಸ್‌ಲೆಸ್, ಕಾಂಟ್ಯಾಕ್ಟ್ – ಲೆಸ್ ಮತ್ತು ಆನ್‌ಲೈನ್ ಇ-ಖಾತಾ ವ್ಯವಸ್ಥೆಯಿಂದ ಆಸ್ತಿ ಮಾಲೀಕರು ಮಧ್ಯವರ್ತಿಗಳ ಸಹಾಯ ಇಲ್ಲದೇ ಇ-ಖಾತಾ ಪಡೆಯೋಕೆ ಸಹಕಾರಿಯಾಗಲಿದೆ.
ಫೇಸ್ ಲೆಸ್ ಇ-ಖಾತಾ ಪ್ರಯೋಜನಗಳೇನು?
- 25 ಲಕ್ಷ ಇ-ಖಾತಾಗಳು ಆನ್‌ಲೈನ್‌ನಲ್ಲಿ ಸಾರ್ವಜನಿಕರಿಗೆ ಯಾವುದೇ ಸಮಯದಲ್ಲಿ ಲಭ್ಯ.
- ಕಾವೇರಿ ಮತ್ತು ಸ್ವಯಂಚಾಲಿತ ತಿದ್ದುಪಡಿಗಳೊಂದಿಗೆ ಏಕೀಕರಣ.
- ಇ-ಖಾತಾ ಬದಲಾವಣೆಗಳ ಪ್ರಕಾರ ಆಸ್ತಿ ತೆರಿಗೆ ದಾಖಲೆಗಳು ಮತ್ತು ಬೆಸ್ಕಾಂ ಮಾಲೀಕತ್ವದಲ್ಲಿ ಸ್ವಯಂಚಾಲಿತ ಬದಲಾವಣೆ.
- ಮಧ್ಯವರ್ತಿಗಳಿಗೆ ಬ್ರೇಕ್: ಭ್ರಷ್ಟಾಚಾರವನ್ನ ಕಡಿಮೆ ಮಾಡುತ್ತದೆ ಮತ್ತು ಏಜೆಂಟರು ಅಥವಾ ಮಧ್ಯವರ್ತಿಗಳಿಂದ ಶೋಷಣೆಗೆ ಬ್ರೇಕ್ ಬೀಳಲಿದೆ.
- ಕೆಲಸದ ಹೊರೆ ಕಡಿಮೆ ಮಾಡುವ ಜೊತೆಗೆ ಲಭ್ಯವಿರುವ ಎಲ್ಲಾ ಅಧಿಕಾರಿಗಳಿಗೆ ಅರ್ಜಿಗಳ ಏಕರೂಪದ ವಿತರಣೆಯನ್ನ ಖಚಿತಪಡಿಸುತ್ತೆ.
- ಪ್ರತಿಯೊಬ್ಬ ಆಸ್ತಿದಾರರು ಅಂತಿಮ ಇ ಖಾತಾ ಅರ್ಜಿಯನ್ನ 7 ದಿನಗಳಲ್ಲಿ ಮತ್ತು ಹೊಸ ಖಾತಾ ಸಂದರ್ಭದಲ್ಲಿ 60 ದಿನಗಳಲ್ಲಿ ಪಡೆಯಬಹುದಾಗಿದೆ.
ಇದನ್ನೂ ಓದಿ: ಬೆಂಗಳೂರು: ಇ ಖಾತಾ ಮಾಹಿತಿ ನೀಡಲು ಬರಲಿದೆ ಮೊಬೈಲ್ ಆ್ಯಪ್!
ಇತ್ತೀಚೆಗಷ್ಟೇ ಎ ಖಾತಾ ಬಿ ಖಾತಾ ಬದಲಾವಣೆಗೆ ಅವಕಾಶ ನೀಡಿದ್ದ ಜಿಬಿಎ, ಇದೀಗ ಐಟಿಸಿಟಿಯ ಆಸ್ತಿ ಮಾಲೀಕರು ತಮ್ಮ ಆಸ್ತಿಗಳನ್ನ ಇ-ಖಾತಾ ನೋಂದಣಿ ಮಾಡುವುದಕ್ಕೆ ಸಹಾಯವಾಗುವಂತೆ ಜಿಬಿಎ ವ್ಯವಸ್ಥೆ ಮಾಡಿದೆ. ಸದ್ಯ ಸರ್ಕಾರದ ಸೂಚನೆ ಬೆನ್ನಲ್ಲೆ ಶೀಘ್ರವಾಗಿ ಇ-ಖಾತಾ ತಲುಪಿಸೋಕೆ ಹೊಸ ಪ್ರಯೋಗ ಮಾಡೋಕೆ ಹೊರಟಿರೋ ಜಿಬಿಎ ನಡೆಯಿಂದ ಇನ್ನಾದರೂ ಖಾತಾ ಸಮಸ್ಯೆಗಳು ಬಗೆಹರಿಯುತ್ತ ಅನ್ನೋದನ್ನ ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:21 pm, Wed, 12 November 25



