
ಬೆಂಗಳೂರು, ನವೆಂಬರ್ 26: ಹಲಸೂರಿನ ಸೋಮೇಶ್ವರಸ್ವಾಮಿ ದೇವಾಲಯದಲ್ಲಿ (Halasuru Someshwar Temple) ಕಳೆದ ಕೆಲ ವರ್ಷಗಳಿಂದ ಮದುವೆ ಕಾರ್ಯಕ್ರಮ ನಡೆಸುವುದನ್ನು ನಿಲ್ಲಿಸಲಾಗಿದ್ದು, ದೇವಸ್ಥಾನದ ಆಡಳಿತ ಮಂಡಳಿ ಈ ಕುರಿತು ಸ್ಪಷ್ಟನೆ ನೀಡಿದೆ. ದೇವಾಲಯದ ಅಪಪ್ರಚಾರವನ್ನು ತಪ್ಪಿಸಲು ಈ ಹಿಂದೆ ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರಕ್ಕೆ ಸಲ್ಲಿಸಿದ ಮಾಹಿತಿಯಲ್ಲಿ ತಿಳಿಸಿದ್ದಾರೆ.
ದೇವಾಲಯದ ಅಪಪ್ರಚಾರ ತಡೆಯಲು ಈ ನಿರ್ಧಾರ
ಶ್ರೀ ಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಕಳೆದ 6-7 ವರ್ಷಗಳಿಂದ ಮದುವೆ ಕಾರ್ಯಗಳನ್ನು ನಿಲ್ಲಿಸಲಾಗಿತ್ತು. ಈ ಹಿಂದೆ ದೇವಾಲಯದಲ್ಲಿ ಮದುವೆ ಮಾಡಿಕೊಳ್ಳುತ್ತಿದ್ದ ದಂಪತಿಗಳು ಅವರಿಗೆ ಹೊಂದಾಣಿಕೆಯಾಗದೇ ಇದ್ದಾಗ ನ್ಯಾಯಾಲಯಗಳಿಗೆ ಹೋಗಿ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರು. ದಂಪತಿಯ ವಿಚಾರಣೆ ವೇಳೆ ಅರ್ಚಕರನ್ನು ಸಹ ನ್ಯಾಯಾಲಯಗಳಿಗೆ ಹಾಜರುಪಡಿಸುತ್ತಿದ್ದರು. ಈ ಎಲ್ಲಾ ಕಾರಣಗಳಿಂದ ಅರ್ಚಕರು ಸಹ ದೇವಾಲಯದಲ್ಲಿ ಮದುವೆ ಮಾಡಲು ನಿರಾಕರಿಸುತ್ತಿದ್ದರು ಎಂದು ಮಾಹಿತಿ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ Bengaluru Temples: ಮನಸ್ಸಿಗೆ ನೆಮ್ಮದಿ ನೀಡುವ ಬೆಂಗಳೂರಿನ ಪುರಾತನ ದೇವಾಲಯಗಳು
ಆಕಸ್ಮಿಕವಾಗಿ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮುಂದಾದ ಆಡಳಿತ ಮಂಡಳಿ, ದೇವಾಲಯಕ್ಕೆ ಕಳಂಕವಾಗುವುದನ್ನು ಮತ್ತು ದೇವಾಲಯದ ಅಪಪ್ರಚಾರವನ್ನು ತಪ್ಪಿಸುವ ಸಲುವಾಗಿ ಈ ನಿರ್ಧಾರ ಕೈಗೊಂಡಿದ್ದರು. ಈ ಹಿಂದೆ ಇದ್ದ ಕಾರ್ಯನಿರ್ವಾಹಕ ಅಧಿಕಾರಿಗಳು ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ಮೌಖಿಕವಾಗಿ ತಂದು ದೇವಾಲಯದಲ್ಲಿ ಮದುವೆ ಕಾರ್ಯಗಳನ್ನು ನಿಲ್ಲಿಸಿದ್ದರು ಎಂದು ದೇವಾಲಯದ ಪ್ರಸ್ತುತ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:27 am, Wed, 26 November 25