ಬೆಂಗಳೂರು: ರಾಜಧಾನಿಯಲ್ಲಿ ದಿನೇ ದನೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದೆ. ಕಮೀಷನರ್ ಡಾ. ರವಿಕಾಂತೇಗೌಡ ನೇತೃತ್ವದ ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಒಂದಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಮುಖ್ಯವಾಗಿ ಹೆಲ್ಮೆಟ್ ಬಳಕೆ ವಿಷಯದಲ್ಲಿ ಕಟ್ಟುನಿಟ್ಟಾಗುವ ಬಗ್ಗೆ ಆಲೋಚಿಸುತ್ತಿದ್ದಾರೆ. ಈ ಮಧ್ಯೆ ಹಾಫ್ ಹೆಲ್ಮೆಟ್ ನಿಷೇಧಿಸುವಂತೆ ನಿಮ್ಹಾನ್ಸ್ ಸರ್ಕಾರಕ್ಕೆ ಶಿಫಾರಸ್ಸು ಬಂದಿದೆ. ಬರೋಬ್ಬರಿ 1 ಲಕ್ಷ ಬೈಕ್ ಸವಾರರ ಸರ್ವೇ ನಡೆಸಿರೋ ನಿಮ್ಹಾನ್ಸ್ (NIMHANS) ವೈದ್ಯ ತಂಡ ಹೆಲ್ಮೆಟ್ ಇದ್ದಿದ್ದರೆ ಪ್ರಾಣ ಉಳೀತಿತ್ತು ಎಂದು ಅಪಘಾತಗಳ ವೈಖರಿ ನೋಡಿ, ಆತಂಕಕಾರಿ ವಿಚಾರವನ್ನು ಬಯಲು ಮಾಡಿದೆ. ನಿಮ್ಹಾನ್ಸ್ ಮತ್ತು ಬೆಂಗಳೂರು ನಗರ ಟ್ರಾಫಿಕ್ ಪೊಲೀಸರಿಂದ ನಡೆದ ಜಂಟಿ ಸರ್ವೇ ಕಾರ್ಯ ಇದಾಗಿದೆ (HALF helmet injurious to head).
ಬೆಂಗಳೂರಿನ ಸುಮಾರು 1 ಲಕ್ಷ ಬೈಕ್ ಸವಾರರ ಚಲನವಲನ ವೈಖರಿ ನೋಡಿರೋ ತಜ್ಞರು ಕಳೆದ ಒಂದು ವಾರದಲ್ಲಿ 15 ಪ್ರಮುಖ ಏರಿಯಾಗಳಲ್ಲಿ ಶೇ. 26ರಷ್ಟು ಕ್ಯಾಪ್ (ಆಫ್ ಹೆಲ್ಮೆಟ್) ಬಳಕೆ ಮಾಡ್ತಿದ್ದಾರೆ. ಹೀಗಾಗಿ ಕ್ಯಾಪ್ ಹೆಲ್ಮೆಟ್ ನಿಂದ ಗಾಯಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚಾಗಿದೆ. ಹೆಡ್ ಇಂಜ್ಯುರಿ ಆಗ್ತಿರೋರ ಸಂಖ್ಯೆ ಹೆಚ್ಚಳಕ್ಕೆ ಈ ಕ್ಯಾಪ್ ಹೆಲ್ಮೆಟ್ ಮುಖ್ಯ ಕಾರಣ. ಹಿಂಬದಿ ಕುಳಿತುಕೊಳ್ಳೋರು ಶೇ. 70 ರಷ್ಟು ಜನ ಮಾತ್ರ ಹೆಲ್ಮೆಟ್ ಬಳಸ್ತಾರೆ ಎಂದು ಸರ್ವೆ ಷರಾ ಬರೆದಿದ್ದಾರೆ.
ಬೆಳಗ್ಗೆ 7 ರಿಂದ ರಾತ್ರಿ 8ಗಂಟೆಯವರೆಗೂ ಬೆಂಗಳೂರಿನಾದ್ಯಂತ ವಾಹನ ಸವಾರರ ಹೆಲ್ಮೆಟ್ ವೀಕ್ಷಣೆ ಮಾಡಿರೋ ಸರ್ವೆ ತಂಡವು ಹಿಂದಿಗಿಂತ ಈಗ ಶೇ. 90ರಷ್ಟು ಜನರು ಹೆಲ್ಮೆಟ್ ಬಳಕೆ ಮಾಡ್ತಿದ್ದಾರೆ. 2006 ರಲ್ಲಿ ಕೇವಲ 6% ಜನ ಮಾತ್ರ ಹೆಲ್ಮೆಟ್ ಬಳಕೆ ಮಾಡುತ್ತಿದ್ದರು. ಶೇ. 44 ರಷ್ಟು ಮಂದಿ ಮಾತ್ರ ಫುಲ್ ಹೆಲ್ಮೆಟ್ ಹಾಕಿಕೊಂಡು ವಾಹನ ಚಲಾಯಿಸುತ್ತಾರೆ. ಸ್ಟ್ರಾಪ್ ಬಳಕೆ ಮಾಡ್ತಿರೋವ್ರ ಸಂಖ್ಯೆ ಕೇವಲ ಶೇ.40 ಜನರು ಮಾತ್ರ. ಶೇ.48 ರಷ್ಟು ಜನ ಮುಖ ಕವರ್ ಆಗದ ಹೆಲ್ಮೆಟ್ ಬಳಸುತ್ತಿದ್ದಾರೆ. ಪೂರ್ಣ ಹೆಲ್ಮೆಟ್ ಧರಿಸಿದ್ದರೆ ರಸ್ತೆ ಅಫಘಾತದ ವೇಳೆ 42 % ಅನಾಹುತ ತಪ್ಪಿಸಬಹುದು. ಹಾಫ್ ಹೆಲ್ಮೆಟ್ ಬಳಸೋವ್ರ ಮನಸ್ಥಿತಿ ಹೇಗಿರುತ್ತೆ..? ಯಾಕೆ ಅವರು ಹಾಫ್ ಅಥವಾ ಕ್ಯಾಪ್ ಹೆಲ್ಮೆಟ್ ಬಳಕೆ ಮಾಡ್ತಿದ್ದಾರೆ? ಅವ್ರಿಗೆ ರೂಲ್ಸ್ ಬ್ರೇಕ್ ಮಾಡೋದು ಮಾನಸಿಕ ಖಾಯಿಲೆಯಾಗಿ ಪರಿಣಮಿಸಿದೆಯಾ..? ಹೀಗೆ ಎಲ್ಲಾ ವಿಚಾರಗಳ ಬಗ್ಗೆ ಮುಂದಿನ ದಿನಗಳಲ್ಲಿ ಸಂಶೋಧನೆ ನಡೆಸಲು ನಿಮ್ಹಾನ್ಸ್ ಪ್ಲ್ಯಾನ್ ಮಾಡಿದೆ.