
ಆನೇಕಲ್, ಜನವರಿ 09: ಡೆಂಟಲ್ ಕಾಲೇಜು ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ನಡೆದಿದೆ. ಯಶಸ್ವಿನಿ (23) ಮೃತ ವಿದ್ಯಾರ್ಥಿನಿಯಾಗಿದ್ದು, ಕಾಲೇಜು ಆಡಳಿತ ಮಂಡಳಿ ಕಿರುಕುಳಕ್ಕೆ ನೊಂದ ಈಕೆ ದುಡುಕಿನ ನಿರ್ಧಾರ ತೆಗೆದುಕೊಂಡಿರುವ ಆರೋಪ ಕೇಳಿಬಂದಿದೆ. ಮೃತ ವಿದ್ಯಾರ್ಥಿನಿಯ ಸ್ನೇಹಿತರು ಶವಾಗಾರದ ಮುಂದೆ ಪ್ರತಿಭಟನೆ ನಡೆಸಿದ್ದು, ಯಶಸ್ವಿನಿ ಸಾವಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ.
ಪರಿಮಳ-ಭೋದೆವಯ್ಯ ದಂಪತಿಯ ಒಬ್ಬಳೇ ಮಗಳು ಯಶಸ್ವಿನಿ ಬೊಮ್ಮನಹಳ್ಳಿಯ ಪ್ರತಿಷ್ಠಿತ ಖಾಸಗಿ ಡೆಂಟಲ್ ಕಾಲೇಜಿನಲ್ಲಿ Oral Medicine and Radiology ವಿಭಾಗದಲ್ಲಿ ಮೂರನೇ ವರ್ಷದ ವ್ಯಾಸಂಗ ಮಾಡುತ್ತಿದ್ದಳು. ಸೆಮಿನಾರ್ಗೆ ಅವಕಾಶ ನೀಡದ ಜೊತೆಗೆ ರೇಡಿಯಾಲಜಿ ಕೇಸ್ ಕೂಡ ನೀಡದೆ ಕಾಲೇಜಿನಲ್ಲಿ ಈಕೆಗೆ ಕಿರುಕುಳ ನೀಡಲಾಗಿದೆ. ಇದರ ನಡುವೆ ಬುಧವಾರ ಕಣ್ಣು ನೋವಿನ ಕಾರಣಕ್ಕೆ ಕಾಲೇಜಿಗೆ ಯಶಸ್ವಿನಿ ಹೋಗಿರಲಿಲ್ಲ. ಮಾರನೇ ದಿನ ಕಾಲೇಜಿಗೆ ಬಂದಾಗ ಕಣ್ಣಿಗೆ ಯಾವ ಡ್ರಾಪ್ಸ್ ಬಳಸಿದೆ? ಎಷ್ಟು ಹನಿ ಡ್ರಾಪ್ಸ್ ಹಾಕಿಕೊಂಡೆ? ಪೂರ್ತಿ ಬಾಟಲ್ ಹಾಕಿಕೊಂಡ್ಯಾ? ಎಂದೆಲ್ಲ ಕೇಳಿ ಪ್ರಾಧ್ಯಾಪಕರು ಅವಮಾನ ಮಾಡಿದ್ದರು. ಇದರಿಂದ ತೀವ್ರವಾಗಿ ನೊಂದಿದ್ದ ಈಕೆ ಪ್ರಾಣಕಳೆದುಕೊಳ್ಳುವ ನಿರ್ಧಾರ ಮಾಡಿದ್ದಾಳೆ ಎನ್ನಲಾಗಿದೆ.
ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ; ಬೈಕ್ ಸವಾರಿಗೆ ಬಿತ್ತು ಗೂಸಾ
ಇರುವ ಒಬ್ಬಳೇ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಟಾರ್ಚರ್ ನೀಡಿದ ಪ್ರಾಂಶುಪಾಲ ಮತ್ತು ಅವಮಾನಿಸಿದ ಪ್ರಾಧ್ಯಾಪಕರ ವಿರುದ್ಧ ಕ್ರಮಕ್ಕೆ ಯಶಸ್ವಿನಿ ತಾಯಿ ಆಗ್ರಹಿಸಿದ್ದಾರೆ. ಮಗಳನ್ನು ಅವಮಾನಿಸಿ ಅವಳ ಸಾವಿಗೆ ಕಾರಣರಾದವರಿಗೆ ಮಕ್ಕಳು ಇಲ್ವಾ? ಕಣ್ಣು ನೋವಿದೆ ಎಂದು ನನಗೆ ತಿಳಿಸಿಯೇ ಆಕೆ ಕಾಲೇಜಿಗೆ ರಜೆ ಮಾಡಿದ್ದಳು. ಹಗಲು ರಾತ್ರಿ ಓದಿ ಭವಿಷ್ಯದ ಕನಸು ಕಂಡಿದ್ದ ಮಗಳು ಇಂದು ನನ್ನ ಜೊತೆಗಿಲ್ಲ ಎಂದು ಪರಿಮಳಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ರೀತಿ ಅನ್ಯಾಯ ಯಾರಿಗೂ ಆಗಬಾರದು ಎಂಬ ಆಗ್ರಹ ಸಂಬಂಧಿಕರಿಂದಲೂ ಕೇಳಿಬಂದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.