ಬೆಂಗಳೂರು, ಜುಲೈ 22: ಆಲ್ಕೊಹಾಲಿನ ಬೆಲೆ ಏರಿಸಿದ ನಂತರ ಸರಕಾರ ಹಾಲಿನ ಬೆಲೆಯನ್ನೂ ಲೀಟರಿಗೆ 3ರೂ ಹೆಚ್ಚಿಸಿದೆ. ಶ್ರಮಜೀವಿಗಳ ಕಿಸೆಗೆ ಕನ್ನ ಕೊರೆದಿದೆ ಎಂದು ಸರಣಿ ಟ್ವಿಟ್ ಮೂಲಕ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಆಕ್ರೋಶ ಹೊರ ಹಾಕಿದ್ದಾರೆ. ನಂದಿನಿ ಹಾಲಿನ ದರ(Nandini Milk Price Hike) ಏರಿಸಬೇಕೆಂಬ ಕರ್ನಾಟಕ ಹಾಲು ಮಹಾ ಮಂಡಳಿಗಳ ಒಕ್ಕೂಟದ ಬಹು ದಿನಗಳ ಬೇಡಿಕೆಗೆ ಸರ್ಕಾರ ಅಸ್ತು ಎಂದಿದೆ. ಆಗಸ್ಟ್ 01ರಿಂದ ಪ್ರತಿ ಲೀಟರ್ ಗೆ ಮೂರು ರೂ. ದರ ಹೆಚ್ಚಳ ಮಾಡಲು ಸಿಎಂ ನಿರ್ಧಾರ ಮಾಡಿದ್ದಾರೆ. ಈ ಮೂರು ರೂ. ಹಾಲು ಉತ್ಪಾದಕರಿಗೆ ವರ್ಗಾವಣೆಯಾಗಲಿದೆ. ಆದ್ರೆ ಈ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದು ಹೆಚ್ಡಿ ಕುಮಾರಸ್ವಾಮಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರ ಒಂದು ಕೈಯ್ಯಲ್ಲಿ ಕೊಟ್ಟು, ಇನ್ನೊಂದು ಕೈಯ್ಯಲ್ಲಿ ಕಸಿದುಕೊಳ್ಳುತ್ತಿದೆ. ಸ್ವತಃ ತಾವೇ ಕಿವಿಯಲ್ಲಿ ಹೂವಿಟ್ಟುಕೊಂಡಿದ್ದ ಕಾಂಗ್ರೆಸ್ಸಿಗರು ಈಗ ಜನರ ತಲೆಯ ಮೇಲೆ ಫ್ಲವರ್ ಪಾಟ್ ಇಡುತ್ತಿದ್ದಾರೆ. ಚುನಾವಣೆಗೆ ಮುನ್ನ ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ ಬಾಯಿಬಾಯಿ ಬಡಿದುಕೊಂಡಿತ್ತು. ದೊಡ್ಡ ಬಾನಗಡಿಯನ್ನೇ ಎಬ್ಬಿಸಿತ್ತು. ಅಧಿಕಾರಕ್ಕೆ ಬಂದೊಡನೆ ಬೆಲೆ ಏರಿಕೆಯ ಸರಣಿ ಶಾಕ್ ನೀಡುತ್ತಿದೆ. ಹೀಗಿದೆ ಕೈ ಕರಾಮತ್ತು. ಅನ್ನಭಾಗ್ಯದ ಹಣವನ್ನು ಹಾಲು, ಆಲ್ಕೋಹಾಲಿನಿಂದಲೇ ವಸೂಲಿಗೆ ಇಳಿದಿರುವ ಕಾಂಗ್ರೆಸ್ ಕ್ಷುದ್ರ ವಿತ್ತನೀತಿಗೆ ಧಿಕ್ಕಾರ ಎಂದು ಹೆಚ್ಡಿ ಕುಮಾರಸ್ವಾಮಿ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ನಂದಿನಿ ಹಾಲು ದರ 3 ರೂಪಾಯಿ ಏರಿಕೆ; ಸರ್ಕಾರದ ನಿರ್ಧಾರಕ್ಕೆ ಜನರ ಆಕ್ರೋಶ
ಆಲ್ಕೊಹಾಲಿನ ಬೆಲೆ ಏರಿಸಿದ ನಂತರ @INCKarnataka ಸರಕಾರ ಹಾಲಿನ ಬೆಲೆಯನ್ನೂ ಲೀಟರಿಗೆ ₹3 ಹೆಚ್ಚಿಸಿ ಶ್ರಮಜೀವಿಗಳ ಕಿಸೆಗೆ ಕನ್ನ ಕೊರೆದಿದೆ. ಒಂದು ಕೈಯ್ಯಲ್ಲಿ ಕೊಟ್ಟು, ಇನ್ನೊಂದು ಕೈಯ್ಯಲ್ಲಿ ಕಸಿದುಕೊಳ್ಳುತ್ತಿದೆ! ಸ್ವತಃ ತಾವೇ ಕಿವಿಯಲ್ಲಿ ಹೂವಿಟ್ಟುಕೊಂಡಿದ್ದ ಕಾಂಗ್ರೆಸ್ಸಿಗರು, ಜನರ ತಲೆಯ ಮೇಲೆ ಫ್ಲವರ್ ಪಾಟ್ ಇಡುತ್ತಿದ್ದಾರೆ!!! 1/4
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) July 22, 2023
ಇನ್ನು ಆರಂಭದಲ್ಲಿಯೇ ವಿದ್ಯುತ್ ಶಾಕ್ ಕೊಟ್ಟಿದ್ದ ಸರಕಾರ, ಗೃಹಜ್ಯೋತಿಯನ್ನು ಜನರ ಪಾಲಿಗೆ ಸುಡುಜ್ಯೋತಿ ಮಾಡಿದೆ. ಏರಿದ ಬೆಲೆಗಳನ್ನು ಕೆಳಗಿಳಿಸಲು ಕೈಲಾಗದ ಈ ಸರಕಾರ ವಿಧಾನ ಕಲಾಪ ಮುಗಿಯುತ್ತಿದ್ದಂತೆಯೇ ಜನತೆಗೆ ಹೊಸದಾಗಿ ಬೆಲೆ ಏರಿಕೆ ಗ್ಯಾರಂಟಿ, ಬೆಲೆಭಾಗ್ಯವನ್ನು ಕರುಣಿಸುತ್ತಿದೆ. ಜನರಿಗೆ ಬೆಲೆ ಏರಿಕೆ ಗ್ಯಾರಂಟಿ ನೀಡಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನದ ಭರವಸೆ ಕೊಟ್ಟಿತ್ತು. ಕಾಂಗ್ರೆಸ್ ಎರಡೇ ತಿಂಗಳಲ್ಲಿ ಅದನ್ನು ಮರೆತಿದೆ. ಹಸುಗಳ ಹಿಂಡಿ, ಬೂಸಾ ಬೆಲೆ ಇಳಿಕೆಗೂ ಯಾವ ಗ್ಯಾರಂಟಿಯೂ ಇಲ್ಲ. ಇವರಿಗೆ ಆಲ್ಕೋಹಾಲಾದರೇನು? ಹಾಲಾದರೇನು? ಖಜಾನೆ ತುಂಬಬೇಕಷ್ಟೇ. ಈಗ ಜನರ ಬದುಕೇ ಹಾಲಾಹಲವಾಗಿದೆ ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ, ಬೆಲೆ ಏರಿಕೆ ವಿರುದ್ಧ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:47 pm, Sat, 22 July 23