ಕೊರೊನಾ ಪಿಡುಗಿನ ವೇಳೆ ಜನರನ್ನು ಕಾಡಿದ್ದ ಖಾಸಗಿ ಆಸ್ಪತ್ರೆಗಳಿಂದ ರೋಗಿಗಳಿಗೆ ಹಣ ವಾಪಸ್ ಕೊಡಿಸಲು ಆರೋಗ್ಯ ಇಲಾಖೆ ಕ್ರಮ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 01, 2022 | 10:09 AM

ಕೊರೋನಾ ಪಿಡುಗು ಆವರಿಸಿದ್ದಾಗ ಸೋಂಕಿತರಿಂದ ಹಲವು ಆಸ್ಪತ್ರೆಗಳು ಹೆಚ್ಚುವರಿ ಬಿಲ್ ವಸೂಲು ಮಾಡಿದ್ದವು.

ಕೊರೊನಾ ಪಿಡುಗಿನ ವೇಳೆ ಜನರನ್ನು ಕಾಡಿದ್ದ ಖಾಸಗಿ ಆಸ್ಪತ್ರೆಗಳಿಂದ ರೋಗಿಗಳಿಗೆ ಹಣ ವಾಪಸ್ ಕೊಡಿಸಲು ಆರೋಗ್ಯ ಇಲಾಖೆ ಕ್ರಮ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕೊರೊನಾ ಸಮಯದಲ್ಲಿ (Coronavirus Pandemic) ರೋಗಿಗಳಿಂದ ಲಕ್ಷಲಕ್ಷ ಸುಲಿಗೆ ಮಾಡಿದ್ದ ಖಾಸಗಿ ಆಸ್ತತ್ರೆಗಳ (Private Hospitals) ವಿರುದ್ಧ ಕ್ರಮಕ್ಕೆ ಆರೋಗ್ಯ ಇಲಾಖೆ (Health Department) ಮುಂದಾಗಿದೆ. ಕೊರೋನಾ ಪಿಡುಗು ಆವರಿಸಿದ್ದಾಗ ಸೋಂಕಿತರಿಂದ ಹಲವು ಆಸ್ಪತ್ರೆಗಳು ಹೆಚ್ಚುವರಿ ಬಿಲ್ ವಸೂಲು ಮಾಡಿದ್ದವು. ಸರ್ಕಾರಿ ಕೋಟಾದಲ್ಲಿ ದಾಖಲಾಗಿದ್ದ ರೋಗಿಗಳಿಂದಲೂ ಖಾಸಗಿ ಆಸ್ಪತ್ರೆಗಳು ಹಣ ವಸೂಲಿ ಮಾಡಿದ್ದವು. ಈ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ನಂತರದ ದಿನಗಳಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಆರೋಗ್ಯ ಇಲಾಖೆಯು, ಕೊರೊನಾ ರೋಗಿಗಳಿಗೆ ಒಂದು ಕೋಟಿಗೂ ಹೆಚ್ಚು ಹಣ ವಾಪಸ್ ಕೊಡಿಸಿದೆ.

ಈವರೆಗೆ ಒಟ್ಟು ₹ 1,26,36,833 (₹ 1.26 ಕೋಟಿ) ಮೊತ್ತವನ್ನು ಕೊವಿಡ್​ನಿಂದ ಚೇತರಿಸಿಕೊಂಡವರಿಗೆ ವಾಪಸ್ ಕೊಡಿಸಲಾಗಿದೆ. ಮೊದಲ ಅಲೆ ಮತ್ತು ಎರಡನೇ ಅಲೆ ವೇಳೆ ಸೋಂಕಿತರ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಹೆಚ್ಚು ಹಣ ವಸೂಲಿ ಮಾಡಿದ್ದವು. ಸರ್ಕಾರಿ ಕೋಟಾದಲ್ಲಿ ದಾಖಲಾಗಿದ್ದರೂ ಹಣ ವಸೂಲು ಮಾಡಿದ್ದರೆ ನೀವೂ ಸಹ ಆರೋಗ್ಯ ಮಿತ್ರ ಸಹಾಯವಾಣಿಗೆ ದೂರು ನೀಡಬಹುದು. ಅಗತ್ಯ ದಾಖಲೆ ಒದಗಿಸಿದರೆ ಹಣ ವಾಪಸ್ ಕೊಡಿಸಲು ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳುತ್ತದೆ.

ಹೆಚ್ಚು ಹಣ ವಸೂಲು ಮಾಡಿರುವುದಕ್ಕೆ ಸಂಬಂಧಿಸಿದಂತೆ ಈವರೆಗೆ ಆರೋಗ್ಯ ಇಲಾಖೆಗೆ 2,701 ದೂರುಗಳು ದಾಖಲಾಗಿವೆ. ಬಿಲ್ ಅಕ್ರಮಕ್ಕೆ ಸಂಬಂಧಿಸಿದಂತೆ 316 ಆಸ್ಪತ್ರೆಗಳ ವಿರುದ್ಧ ಆರೋಪಗಳು ಕೇಳಿ ಬಂದಿವೆ. ಈ ಪೈಕಿ 921 ಪ್ರಕರಣಗಳನ್ನು ಜಿಲ್ಲಾ ಸಮಿತಿಗಳಿಗೆ, 138 ಪ್ರಕರಣಗಳನ್ನು ಬಿಬಿಎಂಪಿಗೆ ವರ್ಗಾವಣೆ ಮಾಡಲಾಗಿದೆ. ಸುರ್ವಣಾ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ 731 ಪ್ರಕರಣಗಳನ್ನು ನಿರ್ವಹಿಸಲಾಗಿದೆ. 51 ಆಸ್ಪತ್ರೆಗಳಿಂದ ಜಿಲ್ಲಾವಾರು 226 ಪ್ರಕರಣಗಳನ್ನು ನಿರ್ವಹಿಸಲಾಗಿದೆ.

ಈ ಪೈಕಿ 685 ಪ್ರಕರಣಗಳು ನಿರ್ವಹಣೆ ಹಂತದಲ್ಲಿವೆ. ಈ ಪೈಕಿ 307 ರೋಗಿಗಳಿಗೆ ಹಣ ವಾಪಸ್ ಕೊಡಲಾಗಿದೆ. ಹೆಚ್ಚುವರಿ ಹಣ ಪಡೆದಿದ್ದ 78 ಆಸ್ಪತ್ರೆಗಳು ರೋಗಿಗಳಿಗೆ ಹಣ ಹಿಂದಿರುಗಿಸಿವೆ. ವಿಚಾರಣೆ ನಡೆಸಿದ ಬಳಿಕ 13,30,840 ರೂಪಾಯಿ ವಸೂಲು ಮಾಡಲಾಗಿತ್ತು. ನೋಟಿಸ್ ನೀಡಿ ವಸೂಲು ಮಾಡಲಾದ ಒಟ್ಟು ಮೊತ್ತ 1,13,05,993 ರೂಪಾಯಿ. ಈವರೆಗೆ ಕೊವಿಡ್ ರೋಗಿಗಳಿಗೆ ವಾಪಸ್ ಕೊಡಿಸಲಾದ ಮೊತ್ತ 1,26,36,833 ರೂಪಾಯಿ.

ಹಣ ಹಿಂಪಡೆಯುವುದು ಹೇಗೆ?

ಕೊರೊನಾ ಸಮಯದಲ್ಲಿ ಹಣ ಕಳೆದುಕೊಂಡ ರೋಗಿಗಳು ಆಸ್ಪತ್ರೆಗಳಲ್ಲಿ ಇರುವ ಆರೋಗ್ಯಮಿತ್ರ ತಂಡವನ್ನು ನೇರವಾಗಿ ಸಂಪರ್ಕಿಸಬಹುದು. cvosast@gmail.com ಈ ಇ-ಮೇಲ್​ಗೆ ದಾಖಲೆ ಸಹಿತ ದೂರು ಸಲ್ಲಿಸಬಹುದು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕಾಲ್ ಸೆಂಟರ್​ಗೆ ಕರೆ ಮಾಡಿ ದೂರು ನೀಡಬಹುದು. 1800 425 2646 ಹಾಗೂ 1800 425 8660 ಟೋಲ್​ ಫ್ರೀ ಸಂಖ್ಯೆಗಳಿಗೆ ದೂರು ದಾಖಲಿಸಬಹುದು. ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯ ತನಕ ಈ ಸಂಖ್ಯೆಗಳು ಕಾರ್ಯನಿರ್ವಹಿಸಲಿವೆ.