ಕೊವಿಡ್ ಪತ್ತೆಯಾದರೆ ಮನೆಯಲ್ಲೇ ಚಿಕಿತ್ಸೆ ನೀಡುವುದಕ್ಕೆ ಸಿದ್ಧತೆ: ಡಾ.ಕೆ. ಸುಧಾಕರ್ ಮಾಹಿತಿ
ಲಸಿಕಾ ಅಭಿಯಾನದಲ್ಲಿ ಭಾರತ ದೊಡ್ಡ ಸಾಧನೆ ಮಾಡಿದೆ. ಹೀಗಾಗಿ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸುತ್ತೇನೆ. ವಿಶ್ವದ ಬಡ ರಾಷ್ಟ್ರಗಳಿಗೆ ಲಸಿಕೆ ಸರಬರಾಜು ಮಾಡುತ್ತಿದ್ದೇವೆ. ವಿಶ್ವದ ದೊಡ್ಡಣ್ಣ ಮಾಡುವಂತಹ ಕೆಲಸ ಭಾರತ ಮಾಡುತ್ತಿದೆ.
ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ನಿನ್ನೆ 10 ಸಾವಿರ ವೈದ್ಯರ ಜತೆ ಸಂವಾದ ಮಾಡಿದ್ದೇನೆ. ರಾಜ್ಯದಲ್ಲಿ ಎಷ್ಟೇ ಕೊವಿಡ್ ಕೇಸ್ ಪತ್ತೆಯಾದರೂ ಮನೆಯಲ್ಲೇ ಚಿಕಿತ್ಸೆ ನೀಡುವುದಕ್ಕೆ ಸಿದ್ಧತೆ ಮಾಡಿಕೊಳ್ತಿದ್ದೇವೆ. ಟೆಲಿ ಕನ್ಸಲ್ಟೇಷನ್ ಮೂಲಕ ಚಿಕಿತ್ಸೆ ನೀಡುವುದಕ್ಕೆ ಸಿದ್ಧತೆ ನಡೆಸಲಾಗಿದೆ. 3ನೇ ಅಲೆ ನಿಯಂತ್ರಣಕ್ಕೆ ವಿಶೇಷ ಸಿದ್ಧತೆ ಮಾಡಿಕೊಳ್ತಿದ್ದೇವೆ. ಹೋಟೆಲ್‌ಗಳ ಮಾಲೀಕರ ಜೊತೆಯೂ ಚರ್ಚೆ ಮಾಡಿದ್ದೇವೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಭಾನುವಾರ ಹೇಳಿಕೆ ನೀಡಿದ್ದಾರೆ.
ಭಾರತದಲ್ಲಿ ಲಸಿಕಾ ಅಭಿಯಾನಕ್ಕೆ ಇಂದಿಗೆ ಒಂದು ವರ್ಷ ಆಗಿದೆ. ಲಸಿಕಾ ಅಭಿಯಾನದಲ್ಲಿ ಭಾರತ ದೊಡ್ಡ ಸಾಧನೆ ಮಾಡಿದೆ. ಹೀಗಾಗಿ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸುತ್ತೇನೆ. ವಿಶ್ವದ ಬಡ ರಾಷ್ಟ್ರಗಳಿಗೆ ಲಸಿಕೆ ಸರಬರಾಜು ಮಾಡುತ್ತಿದ್ದೇವೆ. ವಿಶ್ವದ ದೊಡ್ಡಣ್ಣ ಮಾಡುವಂತಹ ಕೆಲಸ ಭಾರತ ಮಾಡುತ್ತಿದೆ. ವಿಶ್ವದ 36 ದೇಶಗಳಲ್ಲಿ ಶೇಕಡಾ 10ರಷ್ಟೂ ಲಸಿಕೆ ನೀಡಿಲ್ಲ. ಆದರೆ ಕರ್ನಾಟಕ ಶೇ.99ರಷ್ಟು ಮೊದಲ ಡೋಸ್ ನೀಡಿದೆ. ಶೇಕಡಾ 80ರಷ್ಟು ಜನರು ಎರಡನೇ ಡೋಸ್ ಪಡೆದಿದ್ದಾರೆ ಎಂದು ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಬೆಳಗಾವಿ ಜಿಲ್ಲಾಸ್ಪತ್ರೆ ಬಿಮ್ಸ್ನಲ್ಲಿ ಮೂವರು ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿ ಮಾಹಿತಿ ಪಡೆದು ಉತ್ತರಿಸುವುದಾಗಿ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಸೆಲ್ಫ್ ಕೊವಿಡ್ ಟೆಸ್ಟ್ ಕಿಟ್‌ಗಳನ್ನು ಬಳಸಬಾರದು. ಸೆಲ್ಫ್ ಕೊವಿಡ್ ಟೆಸ್ಟ್ ಕಾನೂನಾತ್ಮಕವಾಗಿ ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಏಕಾಏಕಿ ಹಾಸ್ಟೆಲ್‌ಗಳನ್ನು ಮುಚ್ಚಿದ ವಿಚಾರವಾಗಿ ಸುಧಾಕರ್ ಮಾತನಾಡಿದ್ದಾರೆ. ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಡಿಸಿ ಕ್ರಮಕೈಗೊಂಡಿರುತ್ತಾರೆ. ಬಳ್ಳಾರಿಯ ಹಾಸ್ಟೆಲ್‌ಗಳಲ್ಲಿ ಕೊವಿಡ್ ಕೇಸ್ ಹೆಚ್ಚಾಗಿರಬಹುದು. ಹೀಗಾಗಿ ಬಳ್ಳಾರಿ ಜಿಲ್ಲಾಧಿಕಾರಿ ಕ್ರಮ ತೆಗೆದುಕೊಂಡಿರಬಹುದು. ಬಳ್ಳಾರಿ ಪರಿಸ್ಥಿತಿ ಬಗ್ಗೆ ಜಿಲ್ಲಾಧಿಕಾರಿ ಜೊತೆ ಚರ್ಚೆ ಮಾಡುತ್ತೇನೆ ಎಂದು ಸುಧಾಕರ್ ಹೇಳಿದ್ದಾರೆ.
ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿದ ರೇಣುಕಾಚಾರ್ಯ, ರಾಜಕೀಯ ನಾಯಕರು; ಜನಸಾಮಾನ್ಯರಿಗೆ ಮಾತ್ರ ಕೊವಿಡ್ ನಿಯಮ?
ಇದನ್ನೂ ಓದಿ: ಬಳ್ಳಾರಿಗೆ ಪ್ರತ್ಯೇಕ ಕೊರೊನಾ ಮಾರ್ಗಸೂಚಿ ಜಾರಿ, ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಹಲವರಿಗೆ ಕೊವಿಡ್ ದೃಢ