ಬೆಂಗಳೂರು: ಕೊರೊನಾ ಹೊಸ ರೂಪಾಂತರ ಓಮಿಕ್ರಾನ್ ವಿದೇಶಗಳಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಭಾರತ ಹಾಗೂ ಕರ್ನಾಟಕದಲ್ಲಿ ಕೂಡ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ. ಡಾ. ರವಿ ನೇತೃತ್ವದಲ್ಲಿ 10 ತಜ್ಞರ ತಂಡ ರಚನೆ ಮಾಡಿದ್ದೇವೆ. ಚಿಕಿತ್ಸೆಗೆ ಯೂನಿಫಾರ್ಮ್ ಟ್ರೀಟ್ಮೆಂಟ್ ಪ್ರೊಟೋಕಾಲ್ ಬಿಡುಗಡೆ ಮಾಡುತ್ತೇವೆ. ಹೊಸ ಪ್ರಭೇದದಲ್ಲಿ ತೊಂದರೆ ಆದರೆ ಚಿಕಿತ್ಸೆಗೆ ಪ್ರೊಟೋಕಾಲ್ ಇರಲಿದೆ. ಒಮಿಕ್ರಾನ್ ಹರಡುವ ಪ್ರಮಾಣ ಜಾಸ್ತಿ ಇರುವ ಮಾಹಿತಿ ಇದೆ. ಆದರೆ ಒಮಿಕ್ರಾನ್ ಹರಡುವ ತೀವ್ರತೆ ಬಗ್ಗೆ ಸ್ಪಷ್ಟತೆ ಇಲ್ಲ. ವ್ಯಾಕ್ಸಿನ್ ತಪ್ಪದೆ ತೆಗೆದುಕೊಳ್ಳಲು ಜನರಿಗೆ ಮನವಿ ಮಾಡ್ತೇನೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿಕೆ ನೀಡಿದ್ದಾರೆ.
ಇಲಾಖೆಗಳ ಎಲ್ಲ ಅಧಿಕಾರಿಗಳು, ಸಲಹಾ ಸಮಿತಿ ಜೊತೆ ಸಭೆ ನಡೆಸಲಾಗಿದೆ. ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು, ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ಮಾಡಿದ್ದೇವೆ. ಸಿಎಂ ಸಲಹೆ ಸೂಚನೆ ಮೇರೆಗೆ ಸಭೆಯನ್ನ ನಡೆಸಲಾಗಿದೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ. ಒಮಿಕ್ರಾನ್ ವೈರಸ್ ನಿಯಂತ್ರಣ ಮಾಡಬೇಕು. ಸಭೆಯಲ್ಲಿ ಆಸ್ಪತ್ರೆ ವ್ಯವಸ್ಥೆ, ವೈದ್ಯಕೀಯ ಸಂಸ್ಥೆ, ಖಾಸಗಿ ಆಸ್ಪತ್ರೆ ಸಿದ್ಧತೆ ಬಗ್ಗೆ ಚರ್ಚೆ ಮಾಡಲಾಗಿದೆ. ಅನೇಕ ತಂತ್ರಜ್ಞಾನ ಬಳಸಿ ಕ್ವಾರಂಟೈನ್ ಆ್ಯಪ್ ಮಾಡಿದ್ದೇವೆ. ವಿದೇಶಿ ಪ್ರಯಾಣಿಕರಿಗೆ RTPCR ಟೆಸ್ಟ್ ಕಡ್ಡಾಯಗೊಳಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಪ್ರತಿನಿತ್ಯ 2,500 ಜನರಿಗೆ ಕೊವಿಡ್ ಟೆಸ್ಟ್ ಮಾಡುತ್ತಿದ್ದೇವೆ. ವಿದೇಶಿ ಪ್ರಯಾಣಿಕರಿಗೆ 7 ದಿನ ಕಡ್ಡಾಯ ಕ್ವಾರಂಟೈನ್ ಇರಲಿದೆ. ರೋಗ ಲಕ್ಷಣ ಇದ್ರೆ 5ನೇ ದಿನ ಆರ್ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತದೆ. ರೋಗ ಲಕ್ಷಣ ಇಲ್ಲದಿದ್ದರೆ 7ನೇ ದಿನ ಕೊವಿಡ್ ಟೆಸ್ಟ್ ಮಾಡಬೇಕಿದೆ. 2 ಡೋಸ್ ಲಸಿಕೆ ಪಡೆಯದವರಿಗೆ ಚಿಕಿತ್ಸೆ ನೀಡಬಾರದು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬಾರದೆಂಬ ಮಾತು ಹೇಳಿದ್ದಾರೆ. ಆದರೆ ನಾನೇ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಸಿಎಂ ಜತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸುಧಾಕರ್ ಹೇಳಿದ್ದಾರೆ.
ಕಾನೂನು ತಂದು, ದಂಡ ಹಾಕಿ ಲಸಿಕೆ ನೀಡುವ ಚಿಂತನೆ ಇಲ್ಲ. ದಂಡ ಹಾಕಿ ಜನರಿಗೆ ಲಸಿಕೆ ಕೊಡುವ ಚಿಂತನೆ ಸರ್ಕಾರಕ್ಕಿರಲಿಲ್ಲ. ದಂಡ ಹಾಕಿ ಲಸಿಕೆ ನೀಡಲು ಸಭೆಯಲ್ಲಿ ತಜ್ಞರಿಂದ ಸಲಹೆ ನೀಡಲಾಗಿದೆ. ಆದರೆ ಎರಡನೇ ಡೋಸ್ ಲಸಿಕೆ ಪಡೆಯದಿರುವವರಿಗೆ ಆಸ್ಪತ್ರೆ ವೆಚ್ಚ ಭರಿಸಬಾರದು ಎಂದು ಶಿಫಾರಸು ಮಾಡಿದೆ. ಮಾಲ್ ಸೇರಿದಂತೆ ಅನೇಕ ಕಡೆ 2 ಡೋಸ್ ಲಸಿಕೆ ಕಡ್ಡಾಯ ಆಗಿದೆ. ಲಸಿಕೆ ಕಡ್ಡಾಯ ಮಾಡುವ ಬಗ್ಗೆ ಸಿಎಂ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸುಧಾಕರ್ ತಿಳಿಸಿದ್ದಾರೆ.
ವಿದೇಶಗಳಿಂದ ರಾಜ್ಯಕ್ಕೆ ಬರಲು ನಿರ್ಬಂಧ ವಿಧಿಸಲು ಸಿಎಂ ಬಸವರಾಜ ಬೊಮ್ಮಾಯಿ ಕೇಂದ್ರಕ್ಕೆ ಪತ್ರ ಬರೆಯಲಿದ್ದಾರೆ. ಕೆಲವು ದೇಶಗಳಿಂದ ರಾಜ್ಯಕ್ಕೆ ಬರಲು ನಿರ್ಬಂಧಿಸಬೇಕು. ಮುಖ್ಯಮಂತ್ರಿಗಳು ಇಂದು ಕೇಂದ್ರಕ್ಕೆ ಪತ್ರ ಬರೆಯುತ್ತಾರೆ. ಕೆಲವು ದೇಶಗಳಿಂದ ಬಂದು ಹರಡಿಸಿದ್ರೆ ದೊಡ್ಡ ಪ್ರಮಾಣದಲ್ಲಿ ಅಪಾಯ ಉಂಟಾಗಬಹುದು. ನಮ್ಮ ರಾಜ್ಯದಲ್ಲಿ ದೊಡ್ಡ ಪ್ರಮಾಣದ ಜನಸಂಖ್ಯೆ ಹೊಂದಿದೆ. ಹೀಗಾಗಿ ಈಗಲೇ ನಿಯಂತ್ರಣ ಮಾಡುವ ಯೋಚನೆ ಇದೆ. ನಿಯಂತ್ರಣ ಮಾಡುವ ಉದ್ದೇಶದಿಂದ ಪತ್ರ ಬರೆಯುತ್ತಾರೆ ಎಂದು ಸುಧಾಕರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Omicron: ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಒಮಿಕ್ರಾನ್ ವೈರಸ್ ಭೀತಿ; ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಎಚ್ಚರಿಕೆ
ಇದನ್ನೂ ಓದಿ: ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಒಬ್ಬರಲ್ಲಿ ಒಮಿಕ್ರಾನ್ ಲಕ್ಷಣ; ವರದಿಗಾಗಿ ಕಾಯುತ್ತಿದ್ದೇವೆ: ಬಸವರಾಜ ಬೊಮ್ಮಾಯಿ
Published On - 3:00 pm, Tue, 30 November 21