ಬೆಂಗಳೂರಲ್ಲಿ ಮಳೆ ಅವಾಂತರ: ವಿಪ್ರೋ ಕಂಪನಿ ಅಪಾರ್ಟ್ಮೆಂಟ್ ಕಾಂಪೌಂಡ್ ಕುಸಿತ, ನೀರಿನ ಜೊತೆಗೆ ಮನೆಗೆ ನುಗ್ಗುತ್ತಿವೆ ಹಾವು, ಚೇಳು
Bengaluru Rain: ಬೆಂಗಳೂರಲ್ಲಿ ರಾತ್ರಿ ಸುರಿದ ಮಳೆಯಿಂದ ಸರ್ಜಾಪುರ ರಸ್ತೆಯ ವಿಪ್ರೋ ಕಂಪನಿಯ ಗ್ರೀನ್ವುಡ್ ರೀಜನ್ಸಿ ಅಪಾರ್ಟ್ಮೆಂಟ್ನ ಕಾಂಪೌಂಡ್ ಕುಸಿತಗೊಂಡಿದೆ.
ಬೆಂಗಳೂರು: ನಗರದಲ್ಲಿ ನಿರಂತರ ಮಳೆಯಿಂದ (Bengaluru Rain) ಭಾರೀ ಅವಾಂತರ ಸೃಷ್ಟಿಯಾಗಿದೆ. ರಾತ್ರಿ ಸುರಿದ ಮಳೆಯಿಂದ ಸರ್ಜಾಪುರ ರಸ್ತೆಯ ವಿಪ್ರೋ ಕಂಪನಿಯ ಗ್ರೀನ್ವುಡ್ ರೀಜನ್ಸಿ ಅಪಾರ್ಟ್ಮೆಂಟ್ನ ಕಾಂಪೌಂಡ್ ಕುಸಿತಗೊಂಡಿದೆ. ಕಾಂಪೌಂಡ್ ಕುಸಿದಿದ್ದರಿಂದ 450 ಫ್ಲ್ಯಾಟ್ ಇರುವ ಗ್ರೀನ್ವುಡ್ ರೀಜನ್ಸಿ ಅಪಾರ್ಟ್ಮೆಂಟ್ ಒಳಗೆ ನೀರು ನುಗ್ಗಿದೆ. ಇದರಿಂದ ನೆಲಮಹಡಿಯಲ್ಲಿದ್ದ 50ಕ್ಕೂ ಹೆಚ್ಚು ಕಾರುಗಳು ಮುಳುಗಡೆಯಾಗಿವೆ.
ಇನ್ನೂ ಮಳೆ ನೀರು ಮನೆಗಳುಗಿ ನುಗ್ಗಿ ಅವಾಂತರ ಸೃಷ್ಟಿಸಿರುವುದು ಒಂದಡೆಯಾದರೆ ಈಗ ಹಾವುಗಳ ಕಾಟ ಶುರುವಾಗಿದೆ. ಅಪಾರ ಪ್ರಮಾಣದ ನೀರು ಮನೆಗಳಿಗೆ ನುಗ್ಗುತ್ತಿರುವುದರಿಂದ ಹಾವು, ಚೇಳು ಮನೆಯೊಳಗೆ ಬರುತ್ತಿವೆ. ಇದರಿಂದ ಮನೆ ಮಂದಿ ಆತಂಕದಲ್ಲಿದ್ದಾರೆ.
ಮಳೆಯಿಂದ ಓಣಿಗಳಲ್ಲಿ ಇಷ್ಟಲ್ಲ ಅವಾಂತರ ಆದರೂ ಅಧಿಕಾರಿಗಳು ಇನ್ನೂ ಗಮನ ಕೊಟ್ಟಿಲ್ಲ. ಶಾಸಕರು ಅರವಿಂದ್ ಲಿಂಬಾವಳಿ ಕೂಡ ಸ್ಥಳಕ್ಕೆ ಭೇಟಿ ನೀಡಿಲ್ಲ. ಚುನಾವಣೆ ಸಮಯದಲ್ಲಿ ಮತ ಕೇಳೊಕೆ ಬರುತ್ತಿರಾ. ಈಗ ಎಲ್ಲಿದ್ದೀರಿ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಯಮಲೂರಿನ ಎಪ್ಸಿಲಾನ್ ವಿಲ್ಲಾ ಕೂಡ ಜಲಾವೃತಗೊಂಡಿದ್ದು, ನಿವಾಸಿಗಳು ಬೋಟ್ನಲ್ಲಿ ಓಡಾಡುತ್ತಿದ್ದಾರೆ. ಐಶಾರಾಮಿ ಕಾರುಗಳು ಮಳೆ ನೀರಿನಲ್ಲಿ ಭಾಗಶಃ ಮುಳುಗಿದ್ದು, ಕಾರುಗಳು ನೀರಲ್ಲಿ ಸಾಲಾಗಿ ನಿಂತಿವೆ.
ಬೆಂಗಳೂರಿನ ರೈನ್ಬೋ ಡ್ರೈವ್ ಲೇಔಟ್ನಲ್ಲಿ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದ್ದು ಅಗ್ನಿಶಾಮಕ ಇಲಾಖೆ ಎಡಿಜಿಪಿ ಪಿ.ಹರಿಶೇಖರನ್ ಸ್ಥಳಕ್ಕೆ ಭೇಟಿ ನೀಡಿ ಪರೀಶಿಲಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ರೈನ್ಬೋ ಡ್ರೈವ್ ಲೇಔಟ್ನಲ್ಲಿ ತುರ್ತು ನೆರವಿಗೆ ಕ್ರಮಕೈಗೊಳ್ಳಲಾಗಿದೆ. ಬಡಾವಣೆಯಲ್ಲಿ ಅಗ್ನಿಶಾಮಕ ದಳದ 1 ಸಾವಿರ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದರು.
ಎನ್ಡಿಆರ್ಎಫ್ನ 300 ಸಿಬ್ಬಂದಿ, 600 ತುರ್ತು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಜನರ ಸ್ಥಳಾಂತರಕ್ಕೆ 20 ಬೋಟ್, 55 ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ. ತುರ್ತುಸೇವೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಹೇಳಿದರು.
ಬಡಾವಣೆಯಲ್ಲಿ 500 ಮನೆ ಪೈಕಿ 150 ಮನೆ ಸಂಪೂರ್ಣ ಜಲಾವೃತಗೊಂಡಿವೆ. ಮಳೆ ನೀರು ಕಡಿಮೆ ಆಗಲು ಇನ್ನೂ ಒಂದು ವಾರ ಆಗಬೇಕು. ಮಳೆ ಮುಂದುವರಿದರೆ ತುರ್ತು ನೆರವಿಗೆ ಇನ್ನಷ್ಟು ಸಮಯ ಬೇಕಾಗುತ್ತೆ. ನಮ್ಮ ತಂಡದಿಂದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ