ಬೆಂಗಳೂರು: ಅಸಾನಿ ಚಂಡಮಾರುತದ(Cyclone Asani) ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಗಾಳಿ ಸಹಿತ ಮಳೆಯಾಗಿದೆ(Bengaluru Rain). ಬೆಳ್ಳಗ್ಗೆಯಿಂದಲೂ ಸಿಲಿಕಾನ್ ಸಿಟಿಯಲ್ಲಿ ಮೋಡ ಕವಿದ ವಾತಾವರಣವಿತ್ತು. ಸದ್ಯ ಮಳೆಯಾಗುತ್ತಿದೆ. ಆಗ್ನೇಯ ಬಂಗಾಳಕೊಲ್ಲಿ ಮತ್ತು ಅಂಡಮಾನ್ ಸಮುದ್ರದಲ್ಲಿ ವಾಯುಭಾರ ಕುಸಿತ ತೀವ್ರಗೊಂಡು ಚಂಡಮಾರುತವಾಗಿ ಪರಿಣಮಿಸಿರುವ ಹಿನ್ನಲೆಯಲ್ಲಿ ನಗರದಲ್ಲಿ ಭಾರೀ ಮಳೆಯಾಗಿದೆ(Rain). ಇದೀಗಾ ನಗರದ ವಿ.ವಿ.ಪುರಂ, ಶಾಂತಿನಗರ, ಕೆ.ಆರ್.ಮಾರ್ಕೆಟ್, ಗಿರಿನಗರ, ಬಸವನಗುಡಿ, ಕಲಾಸಿಪಾಲ್ಯದ, ಲಾಲ್ಬಾಗ್, ಮೆಜೆಸ್ಟಿಕ್, ಕೋರಮಂಗಲ, ಆಡುಗೋಡಿ ರಸ್ತೆ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದೆ.
ಕರ್ನಾಟಕದಲ್ಲಿ ಮಾರ್ಚ್ 24 ರ ತನಕ ಅಸಾನಿ ಚಂಡಮಾರುತದ ಪ್ರಭಾವದಿಂದ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಅಪ್ಪಳಿಸುವ ಅಸಾನಿ ಚಂಡಮಾರುತದಿಂದ ಕರ್ನಾಟಕಕ್ಕೆ ಹೆಚ್ಚಿನ ಅಪಾಯ ಇಲ್ಲವಾದರೂ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗಾಳಿ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶುಕ್ರವಾರದಿಂದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇಂದು (ಮಾರ್ಚ್ 21) ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇದೆ.
ವಾಯುಭಾರ ಕುಸಿತ ಹಿನ್ನೆಲೆ ರಾಮನಗರದಲ್ಲಿ ಧಾರಕಾರ ಮಳೆ
ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಮನಗರದಲ್ಲಿ ಬಿರುಗಾಳಿ ಸಹಿತ ಧಾರಕಾರ ಮಳೆಯಾಗಿದೆ. ಕಳೆದ ಅರ್ಧ ಗಂಟೆಯಿಂದ ಮಳೆ ಸುರಿಯುತ್ತಿದೆ. ವರ್ಷದ ಮೊದಲ ಮಳೆಗೆ ಅನ್ನದಾತನ ಮೊಗದಲ್ಲಿ ಸಂತಸ ಮೂಡಿದೆ. ಏಕಾಏಕಿ ಸುರಿಯುತ್ತಿರೋ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ತುಮಕೂರು: ಹಲವಡೆ ಗಾಳಿ ಸಹಿತ ಮಳೆ
ತುಮಕೂರಿನಲ್ಲಿ ಕಳೆದ ಅರ್ಧ ಗಂಟೆಯಿಂದ ಗಾಳಿ ಸಹಿತ ಮಳೆಯಾಗುತ್ತಿದೆ. ತುಮಕೂರು ಜಿಲ್ಲೆಯ ಗುಬ್ಬಿ, ಕುಣಿಗಲ್ ಸೇರಿದಂತೆ ಹಲವು ಕಡೆ ಮಳೆಯಾಗಿದೆ. ಬೇಸಿಗೆಯ ಬೀಸಿಲಿನಲ್ಲಿ ತತ್ತರಿಸಿ ಹೊಗಿದ್ದ ಜನರಿಗೆ ಮಳೆರಾಯ ತಂಪೆರದಿದ್ದಾನೆ.
ಇಂದಿನಿಂದ ಶುರುವಾಗಲಿದೆ ಅಸಾನಿ ಅಬ್ಬರ
ಇಂದಿನಿಂದ ಅಸಾನಿ ಚಂಡಮಾರುತದ ಅಬ್ಬರ ಶುರುವಾಗಲಿದ್ದು, ಇದರ ಪರಿಣಾಮವಾಗಿ ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ಭಾರತದ ಅನೇಕ ರಾಜ್ಯಗಳಲ್ಲೂ ವ್ಯಾಪಕ ಮಳೆಯಾಗಲಿದೆ. ಈಗಾಗಲೇ ಅಸಾನಿ ಚಂಡಮಾರುತದ ಪರಿಣಾಮ ಹೆಚ್ಚಾಗುವ ಆತಂಕವಿರುವ ಪ್ರದೇಶಗಳಲ್ಲಿ ಹಡಗುಗಳು, ವಿಮಾನಗಳು, ಹೆಲಿಕಾಪ್ಟರ್‌ಗಳು, ಡೈವಿಂಗ್ ಮತ್ತು ವಿಪತ್ತು ಪರಿಹಾರ ತಂಡಗಳು ಸಿದ್ಧವಾಗಿವೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸುಮಾರು 100 ಸಿಬ್ಬಂದಿಯನ್ನು ಅಸಾನಿ ಚಂಡಮಾರುತದ ಹಿನ್ನೆಲೆಯಲ್ಲಿ ನಿಯೋಜಿಸಲಾಗಿದೆ. ಇಂದಿನಿಂದ 3 ದಿನಗಳ ಕಾಲ ಕೇರಳ, ಮಾಹೆ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಮತ್ತು ಕರ್ನಾಟಕದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಈಗಾಗಲೇ ತಮಿಳುನಾಡು, ಕರ್ನಾಟಕದ ಕೆಲವೆಡೆ ಮಳೆ ಹೆಚ್ಚಾಗಿದೆ.
ಇಂದು ಅಂಡಮಾನ್ ದ್ವೀಪಗಳ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಇನ್ನೆರಡು ದಿನ ಪಶ್ಚಿಮ ಹಿಮಾಲಯ ಪ್ರದೇಶದ ಮೇಲೆ ಚದುರಿದ ಮಳೆ ಹಾಗೂ ಹಿಮಪಾತವಾಗಲಿದೆ. ಮಾರ್ಚ್ 22ರವರೆಗೆ ರಾಯಲಸೀಮಾ ಮತ್ತು ಆಂಧ್ರ ಪ್ರದೇಶದ ಕರಾವಳಿ ಪ್ರದೇಶದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ. ಇಂದಿನಿಂದ ಈಶಾನ್ಯ ಭಾರತದಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಬಂಗಾಳ ಕೊಲ್ಲಿಗೆ ಮೀನುಗಾರಿಕೆಗೆ ಹೋಗದಂತೆ ಮೀನುಗಾರರಿಗೆ ಸೂಚಿಸಲಾಗಿದೆ. ಮಾರ್ಚ್ 22ರವರೆಗೆ ಅಂಡಮಾನ್ ಸಮುದ್ರಕ್ಕೆ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ತೀರಕ್ಕೆ ಕೂಡ ಇಳಿಯದಂತೆ ಸೂಚಿಸಲಾಗಿದೆ.
ಅಸಾನಿ ಚಂಡಮಾರುತದ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ. ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಮತ್ತು ದಕ್ಷಿಣ ಅಂಡಮಾನ್ ಸಮುದ್ರಕ್ಕೆ ಹೊಂದಿಕೊಂಡಂತೆ ಗುರುತಿಸಲಾದ ಕಡಿಮೆ ಒತ್ತಡದ ಪ್ರದೇಶವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಉದ್ದಕ್ಕೂ ಮತ್ತು ಉತ್ತರಕ್ಕೆ ಚಲಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಅಸಾನಿ ಚಂಡಮಾರುತವನ್ನು ಎದುರಿಸಲು ಸಿದ್ಧತೆಗಳು ನಡೆದಿವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಎನ್ಡಿಆರ್ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ:
Bengaluru Rain: ಮುಂದಿನ 48 ಗಂಟೆಗಳ ಕಾಲ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಮಳೆಯಾಗಲಿದೆ
Cyclone Asani: ಇಂದು ಸಂಜೆ ಅಪ್ಪಳಿಸಲಿದೆ ಅಸಾನಿ ಚಂಡಮಾರುತ; ಅಂಡಮಾನ್ನಲ್ಲಿ ಭಾರೀ ಮಳೆ, ಶಾಲೆಗಳಿಗೆ ರಜೆ ಘೋಷಣೆ
Published On - 5:10 pm, Mon, 21 March 22