Cyclone Asani: ಇಂದು ಸಂಜೆ ಅಪ್ಪಳಿಸಲಿದೆ ಅಸಾನಿ ಚಂಡಮಾರುತ; ಅಂಡಮಾನ್ನಲ್ಲಿ ಭಾರೀ ಮಳೆ, ಶಾಲೆಗಳಿಗೆ ರಜೆ ಘೋಷಣೆ
Rain Updates: ಅಸಾನಿ ಚಂಡಮಾರುತದ ಪರಿಣಾಮಗಳ ನಿಯಂತ್ರಣಕ್ಕೆ ಸುಮಾರು 150 NDRF ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳ ವಿವಿಧ ಭಾಗಗಳಲ್ಲಿ 6 ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ.
ನವದೆಹಲಿ: ಆಗ್ನೇಯ ಬಂಗಾಳಕೊಲ್ಲಿ ಮತ್ತು ಅಂಡಮಾನ್ ಸಮುದ್ರದಲ್ಲಿ ವಾಯುಭಾರ ಕುಸಿತ ತೀವ್ರಗೊಂಡು ಇಂದು ಚಂಡಮಾರುತವಾಗಿ ಪರಿಣಮಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಅಂಡಮಾನ್ ದ್ವೀಪಗಳ ಕಡೆಯಿಂದ ಮಯನ್ಮಾರ್ ಮತ್ತು ದಕ್ಷಿಣ ಬಾಂಗ್ಲಾದೇಶದ ಕರಾವಳಿಯ ಕಡೆಗೆ ಚಂಡಮಾರುತ ಚಲಿಸುವ ನಿರೀಕ್ಷೆಯಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ. ಈ ಚಂಡಮಾರುತಕ್ಕೆ ಈಗಾಗಲೇ ಅಸಾನಿ ಚಂಡಮಾರುತ (Asani Cyclone) ಎಂದು ಹೆಸರಿಡಲಾಗಿದೆ. ಇಂದು ಸಂಜೆಯ ವೇಳೆಗೆ ಅಂಡಮಾನ್ಗೆ ಅಸಾನಿ ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಈಗಾಗಲೇ ಅಲ್ಲಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. “ಅಸಾನಿ ಚಂಡಮಾರುತ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಉದ್ದಕ್ಕೂ ಉತ್ತರದ ಕಡೆಗೆ ಚಲಿಸುವ ಸಾಧ್ಯತೆಯಿದೆ. ಮುಂದಿನ 12 ಗಂಟೆಗಳಲ್ಲಿ ಚಂಡಮಾರುತದಿಂದಾಗಿ ಭಾರೀ ಮಳೆಯಾಗಲಿದೆ” ಎಂದು ಐಎಂಡಿ ಮಾಹಿತಿ ನೀಡಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಚಂಡಮಾರುತದಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡಲು ಯುದ್ಧದ ಆಧಾರದ ಮೇಲೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಭಾನುವಾರ ಅಸಾನಿ ಚಂಡಮಾರುತದಿಂದಾಗಿ ದ್ವೀಪಸಮೂಹವು ಭಾರೀ ಮಳೆ ಮತ್ತು ಬಲವಾದ ಗಾಳಿಯನ್ನು ಅನುಭವಿಸಿದ ಕಾರಣ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Depression over north Andaman Sea and adjoining southeast BoB , about 110 km ENE of Port Blair, 320 km NNE of Car Nicobar .To intensify further into a cyclonic storm in next 12 hrs. To move nearly northwards along & off Andaman towards Myanmar coast in next 48 hrs. pic.twitter.com/5gdlkCX0Uc
— India Meteorological Department (@Indiametdept) March 21, 2022
ಅಸಾನಿ ಚಂಡಮಾರುತದ ಪರಿಣಾಮಗಳ ನಿಯಂತ್ರಣಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಸುಮಾರು 150 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳ ವಿವಿಧ ಭಾಗಗಳಲ್ಲಿ ಆರು ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಪೋರ್ಟ್ ಬ್ಲೇರ್‌ನಲ್ಲಿ ಒಟ್ಟು 68 ಎನ್‌ಡಿಆರ್‌ಎಫ್ ಸಿಬ್ಬಂದಿ ಮತ್ತು ದಿಗ್ಲಿಪುರ್, ರಂಗತ್ ಮತ್ತು ಹುಟ್‌ಬೇ ಪ್ರದೇಶಗಳಲ್ಲಿ ತಲಾ 25 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಕಾರ್ಯದರ್ಶಿ ಪಂಕಜ್ ಕುಮಾರ್ ತಿಳಿಸಿದ್ದಾರೆ.
ಇಂದಿನಿಂದ ಅಸಾನಿ ಚಂಡಮಾರುತದ ಅಬ್ಬರ ಶುರುವಾಗಲಿದ್ದು, ಇದರ ಪರಿಣಾಮವಾಗಿ ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ಭಾರತದ ಅನೇಕ ರಾಜ್ಯಗಳಲ್ಲೂ ವ್ಯಾಪಕ ಮಳೆಯಾಗಲಿದೆ. ಈಗಾಗಲೇ ಅಸಾನಿ ಚಂಡಮಾರುತದ ಪರಿಣಾಮ ಹೆಚ್ಚಾಗುವ ಆತಂಕವಿರುವ ಪ್ರದೇಶಗಳಲ್ಲಿ ಹಡಗುಗಳು, ವಿಮಾನಗಳು, ಹೆಲಿಕಾಪ್ಟರ್‌ಗಳು, ಡೈವಿಂಗ್ ಮತ್ತು ವಿಪತ್ತು ಪರಿಹಾರ ತಂಡಗಳು ಸಿದ್ಧವಾಗಿವೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸುಮಾರು 100 ಸಿಬ್ಬಂದಿಯನ್ನು ಅಸಾನಿ ಚಂಡಮಾರುತದ ಹಿನ್ನೆಲೆಯಲ್ಲಿ ನಿಯೋಜಿಸಲಾಗಿದೆ. ಇಂದಿನಿಂದ 3 ದಿನಗಳ ಕಾಲ ಕೇರಳ, ಮಾಹೆ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಮತ್ತು ಕರ್ನಾಟಕದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಈಗಾಗಲೇ ತಮಿಳುನಾಡು, ಕರ್ನಾಟಕದ ಕೆಲವೆಡೆ ಮಳೆ ಹೆಚ್ಚಾಗಿದೆ.
ಇಂದು ಅಂಡಮಾನ್ ದ್ವೀಪಗಳ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಇನ್ನೆರಡು ದಿನ ಪಶ್ಚಿಮ ಹಿಮಾಲಯ ಪ್ರದೇಶದ ಮೇಲೆ ಚದುರಿದ ಮಳೆ ಹಾಗೂ ಹಿಮಪಾತವಾಗಲಿದೆ. ಮಾರ್ಚ್ 22ರವರೆಗೆ ರಾಯಲಸೀಮಾ ಮತ್ತು ಆಂಧ್ರ ಪ್ರದೇಶದ ಕರಾವಳಿ ಪ್ರದೇಶದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ. ಇಂದಿನಿಂದ ಈಶಾನ್ಯ ಭಾರತದಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಬಂಗಾಳ ಕೊಲ್ಲಿಗೆ ಮೀನುಗಾರಿಕೆಗೆ ಹೋಗದಂತೆ ಮೀನುಗಾರರಿಗೆ ಸೂಚಿಸಲಾಗಿದೆ. ಮಾರ್ಚ್ 22ರವರೆಗೆ ಅಂಡಮಾನ್ ಸಮುದ್ರಕ್ಕೆ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ತೀರಕ್ಕೆ ಕೂಡ ಇಳಿಯದಂತೆ ಸೂಚಿಸಲಾಗಿದೆ.
ಅಸಾನಿ ಚಂಡಮಾರುತದ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ. ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಮತ್ತು ದಕ್ಷಿಣ ಅಂಡಮಾನ್ ಸಮುದ್ರಕ್ಕೆ ಹೊಂದಿಕೊಂಡಂತೆ ಗುರುತಿಸಲಾದ ಕಡಿಮೆ ಒತ್ತಡದ ಪ್ರದೇಶವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಉದ್ದಕ್ಕೂ ಮತ್ತು ಉತ್ತರಕ್ಕೆ ಚಲಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಅಸಾನಿ ಚಂಡಮಾರುತವನ್ನು ಎದುರಿಸಲು ಸಿದ್ಧತೆಗಳು ನಡೆದಿವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಎನ್‌ಡಿಆರ್‌ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: Cyclone Asani: ಅಸಾನಿ ಚಂಡಮಾರುತದ ಅಬ್ಬರದಿಂದ ಸೋಮವಾರದವರೆಗೆ ಈ ರಾಜ್ಯಗಳಲ್ಲಿ ಭಾರೀ ಮಳೆ
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇನ್ನು ಐದು ದಿನ ಮಳೆ ಸಾಧ್ಯತೆ; ಕರಾವಳಿ, ಮಲೆನಾಡು ಭಾಗಗಳಲ್ಲಿ ಹೈ ಅಲರ್ಟ್ ಘೋಷಣೆ!